LPG ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್ – ಪೆಟ್ರೋಲ್, ಡೀಸೆಲ್ ದರ ₹3 ಏರಿಕೆ
ರಾಜಧಾನಿ ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಬೆಲೆ ಏರಿಕೆಯ ಬಿಸಿ ತುಸು ಹೆಚ್ಚಾಗಿಯೇ ತಟ್ಟಿದೆ.

ದೇಶದ ಜನತೆಗೆ ಹಣದುಬ್ಬರದ ಬಿಸಿ ತಟ್ಟುತ್ತಿದೆ. ಈಗಾಗಲೇ ಅಡುಗೆ ಎಣ್ಣೆ, ಅಕ್ಕಿ ಮತ್ತು ಎಲ್‌ಪಿಜಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಸಾಮಾನ್ಯ ಜನರಿಗೆ ಈಗ ಇಂಧನ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿನ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 3 ರೂಪಾಯಿಗಳಷ್ಟು ಏರಿಕೆ ಮಾಡಿವೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಬೆಲೆ ಏರಿಕೆಯ ಬಿಸಿ ತುಸು ಹೆಚ್ಚಾಗಿಯೇ ತಟ್ಟಿದೆ.
ಪ್ರತಿ ಲೀಟರ್‌ಗೆ 3.26 ರೂ. ಹೆಚ್ಚಳವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ತೈಲ ಕಂಪನಿಗಳು ಈ ನಿರ್ಧಾರ ಕೈಗೊಂಡಿವೆ. ವಿಶೇಷವಾಗಿ ಹರ್ಮುಜ್ ಜಲಸಂಧಿಯ ಬಿಕ್ಕಟ್ಟು ಜಾಗತಿಕ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಭಾರತ ಸರ್ಕಾರವು ದೇಶದಲ್ಲಿ 60 ದಿನಗಳಿಗೆ ಸಾಕಾಗುವಷ್ಟು ತೈಲ ಸಂಗ್ರಹವಿದೆ ಎಂದು ಹೇಳಿದ್ದರೂ, ಮಾರುಕಟ್ಟೆಯ ಏರಿಳಿತದಿಂದಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಕಡಿಮೆ ಹೂಡಿಕೆಯಲ್ಲಿ ಶುರು ಮಾಡಬಹುದಾದ ಬಿಸಿನೆಸ್! ತಿಂಗಳಿಗೆ ಲಕ್ಷ ಆದಾಯ
ಮೋದಿಯವರ ‘ಮಿತಬಳಕೆ’ ಕರೆ ಮತ್ತು ಇಂಧನ ಉಳಿತಾಯ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗಷ್ಟೇ ದೇಶದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ಮಿತಬಳಕೆ ಮಾಡುವಂತೆ ಕರೆ ನೀಡಿದ್ದರು. ವಿದೇಶಿ ವಿನಿಮಯವನ್ನು ಉಳಿಸುವ ಉದ್ದೇಶದಿಂದ ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆಗೆ ಒತ್ತು ನೀಡುವಂತೆ ಅವರು ಸೂಚಿಸಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಬೆಲೆ ಏರಿಕೆಯಾಗಿರುವುದು ಗಮನಾರ್ಹ.
ದೇಶದ ಹಲವೆಡೆ ಇಂಧನ ಉಳಿತಾಯದ ದೃಷ್ಟಿಯಿಂದ ಐಟಿ ಕಂಪನಿಗಳು ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ‘ವರ್ಕ್ ಫ್ರಮ್ ಹೋಮ್’ ಮಾದರಿಯನ್ನು ಮತ್ತೆ ಉತ್ತೇಜಿಸಲಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದಾಗ ಅದು ಕೇವಲ ವಾಹನ ಸವಾರರಿಗೆ ಮಾತ್ರವಲ್ಲದೆ, ಸರಕು ಸಾಗಣೆ ವೆಚ್ಚವನ್ನೂ ಹೆಚ್ಚಿಸುತ್ತದೆ. ಇದರಿಂದ ತರಕಾರಿ, ಹಾಲು ಮತ್ತು ದಿನಸಿ ಪದಾರ್ಥಗಳ ಬೆಲೆಗಳೂ ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.



