ವಾರಕ್ಕೆ 4 ದಿನ ಕೆಲಸ.. 3 ದಿನ ರಜೆ ಸಾಧ್ಯತೆ! ಹೊಸ ಕಾರ್ಮಿಕ ಕಾಯ್ದೆಗಳ ಜಾರಿಗೆ
ಹೊಸ ಕಾರ್ಮಿಕ ಕಾಯ್ದೆಗಳ ಜಾರಿಗೆ ಖಾಸಗಿ ಉದ್ಯೋಗಿಗಳಿಗೆ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡುವ ಅವಕಾಶ ಸಿಗಬಹುದು. ಆದರೆ ದಿನಕ್ಕೆ ಹೆಚ್ಚು ಗಂಟೆಗಳ ಕೆಲಸ ಮಾಡಬೇಕಾಗುವ ಸಾಧ್ಯತೆ ಇರುವುದರಿಂದ ಉದ್ಯೋಗಿಗಳಲ್ಲಿ ಚರ್ಚೆ ಜೋರಾಗಿದೆ.

ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ಭಾರೀ ಬದಲಾವಣೆಯೊಂದರ ಸೂಚನೆ ದೊರಕಿದೆ. ಕೇಂದ್ರ ಸರ್ಕಾರ ಜಾರಿಗೆ ತರಲು ಸಿದ್ಧವಾಗಿರುವ ಹೊಸ ಕಾರ್ಮಿಕ ಕಾಯ್ದೆಗಳಡಿ ವಾರಕ್ಕೆ ನಾಲ್ಕು ದಿನ ಕೆಲಸ ಮತ್ತು ಮೂರು ದಿನ ನಿರಂತರ ರಜೆ ವ್ಯವಸ್ಥೆ ಸಾಧ್ಯವಾಗಬಹುದು ಎಂದು ಕಾರ್ಮಿಕ ತಜ್ಞರು ಹೇಳಿದ್ದಾರೆ. ಹಲವು ವರ್ಷಗಳಿಂದ ಕಾರ್ಪೊರೇಟ್ ವಲಯದಲ್ಲಿ ಚರ್ಚೆಯಾಗುತ್ತಿದ್ದ ಈ ಮಾದರಿ ಈಗ ವಾಸ್ತವದತ್ತ ಸಾಗುತ್ತಿದೆ.
ದಿನಕ್ಕೆ ಹೆಚ್ಚು ಸಮಯ ಕೆಲಸ ಮಾಡಬೇಕೇ?
ಹೊಸ ನಿಯಮಗಳ ಪ್ರಕಾರ ವಾರದ ಒಟ್ಟು ಕೆಲಸದ ಅವಧಿ 48 ಗಂಟೆಗಳಷ್ಟೇ ಇರುತ್ತದೆ. ಆದರೆ ಉದ್ಯೋಗಿಗಳು ನಾಲ್ಕು ದಿನ ಕೆಲಸದ ಆಯ್ಕೆಯನ್ನು ತೆಗೆದುಕೊಂಡರೆ, ದಿನಕ್ಕೆ ಸುಮಾರು 12 ಗಂಟೆಗಳವರೆಗೆ ಕೆಲಸ ಮಾಡಬೇಕಾಗಬಹುದು. ಇದರಲ್ಲಿ ವಿಶ್ರಾಂತಿ ಹಾಗೂ ಬ್ರೇಕ್ ಸಮಯವೂ ಸೇರಿರುತ್ತದೆ ಎಂದು ತಿಳಿಸಲಾಗಿದೆ.
ಹೆಚ್ಚು ದಿನಗಳ ವಾರಾಂತ್ಯ ರಜೆ ಬಯಸುವವರಿಗೆ ಇದು ಆಕರ್ಷಕ ಆಯ್ಕೆಯಾಗಬಹುದು. ವಿಶೇಷವಾಗಿ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಅಥವಾ ವೈಯಕ್ತಿಕ ಕೆಲಸಗಳಿಗೆ ಸಮಯ ಮೀಸಲಿಡಲು ಬಯಸುವ ಉದ್ಯೋಗಿಗಳು ಈ ಮಾದರಿಯನ್ನು ಇಷ್ಟಪಡಬಹುದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಯಾವ ಕ್ಷೇತ್ರಗಳಿಗೆ ಹೆಚ್ಚು ಲಾಭ?
ಐಟಿ, ಐಟಿಇಎಸ್, ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್ಗಳು (GCCs), ಡಿಸೈನ್, ಡಿಜಿಟಲ್ ಮಾರ್ಕೆಟಿಂಗ್ ಸೇರಿದಂತೆ ಜ್ಞಾನಾಧಾರಿತ ಕ್ಷೇತ್ರಗಳಲ್ಲಿ ಈ ವ್ಯವಸ್ಥೆ ಸುಲಭವಾಗಿ ಜಾರಿಯಾಗುವ ಸಾಧ್ಯತೆ ಇದೆ. ಈಗಾಗಲೇ ವರ್ಕ್ ಫ್ರಮ್ ಹೋಮ್ ಹಾಗೂ ಫ್ಲೆಕ್ಸಿಬಲ್ ವರ್ಕ್ ಸಂಸ್ಕೃತಿ ಇರುವುದರಿಂದ ಈ ಕ್ಷೇತ್ರಗಳು ಹೊಸ ಮಾದರಿಗೆ ಬೇಗ ಹೊಂದಿಕೊಳ್ಳಬಹುದು ಎಂದು ಉದ್ಯಮ ವಿಶ್ಲೇಷಕರು ಹೇಳುತ್ತಿದ್ದಾರೆ.
ಇದರ ಜೊತೆಗೆ, ಉದ್ಯೋಗಿಗಳ ಕೆಲಸ–ವೈಯಕ್ತಿಕ ಜೀವನದ ಸಮತೋಲನವನ್ನು ಸುಧಾರಿಸಲು ಈ ಕ್ರಮ ಸಹಾಯ ಮಾಡಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಎಲ್ಲ ಕ್ಷೇತ್ರಗಳಿಗೆ ಸಾಧ್ಯವಿಲ್ಲ
ಆದರೆ ಆರೋಗ್ಯ ಸೇವೆ, ಆಸ್ಪತ್ರೆಗಳು, ಹೋಟೆಲ್, ರಿಟೇಲ್, ಸಾರಿಗೆ, ಲಾಜಿಸ್ಟಿಕ್ಸ್ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿ ಈ ಮಾದರಿ ಜಾರಿಗೊಳಿಸುವುದು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ. ಈ ವಲಯಗಳಲ್ಲಿ ನಿರಂತರ ಸೇವೆ ಅಗತ್ಯವಾಗಿರುವುದರಿಂದ ಸಿಬ್ಬಂದಿ ಲಭ್ಯತೆ ಅತ್ಯಂತ ಮುಖ್ಯವಾಗುತ್ತದೆ.
ಹೀಗಾಗಿ ಪ್ರತಿಯೊಂದು ಸಂಸ್ಥೆಯ ಅಗತ್ಯ ಹಾಗೂ ಕೆಲಸದ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡೇ ಈ ವಿಧಾನವನ್ನು ಜಾರಿಗೊಳಿಸುವ ಸಾಧ್ಯತೆ ಇದೆ.
ಓವರ್ಟೈಮ್ ನಿಯಮ ಕಠಿಣ
ಹೊಸ ಕಾರ್ಮಿಕ ನಿಯಮಗಳ ಮತ್ತೊಂದು ಪ್ರಮುಖ ಅಂಶ ಎಂದರೆ ಓವರ್ಟೈಮ್ ಪಾವತಿ. ವಾರಕ್ಕೆ 48 ಗಂಟೆಗಿಂತ ಹೆಚ್ಚು ಕೆಲಸ ಮಾಡಿಸಿದರೆ ಕಂಪನಿಗಳು ದ್ವಿಗುಣ ವೇತನ ನೀಡಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಮುಖ್ಯವಾಗಿ, ಈ ನಾಲ್ಕು ದಿನ ಕೆಲಸ ಪದ್ಧತಿಯನ್ನು ಕಂಪನಿಗಳು ಬಲವಂತವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ. ಉದ್ಯೋಗಿ ಮತ್ತು ಸಂಸ್ಥೆ ಎರಡೂ ಪರಸ್ಪರ ಒಪ್ಪಿಗೆಯ ಮೇರೆಗೆ ಮಾತ್ರ ಈ ವ್ಯವಸ್ಥೆ ಜಾರಿಗೆ ಬರಲಿದೆ.



