‘ಮಜಾ ಭಾರತ’ ಖ್ಯಾತಿಯ ಹಾಸ್ಯ ಕಲಾವಿದ ಸಿದ್ಧಾರ್ಥ್ ಅನುಮಾನಾಸ್ಪದ ಸಾವು!

'ಮಜಾಭಾರತ'ದ ಮೂಲಕ ನಾಡಿನ ಜನರನ್ನು ನಗಿಸುತ್ತಿದ್ದ ಯುವ ಕಲಾವಿದ ಸಿದ್ದಾರ್ಥ ಪರಶನೂರ ಅವರ ಜೀವನ ಪ್ರವಾಸ ಅತ್ಯಂತ ದುರಂತಮಯವಾಗಿ ಕೊನೆಗೊಂಡಿ

ಖಾಸಗಿ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ಪ್ರಸಿದ್ಧ ಹಾಸ್ಯ ರಿಯಾಲಿಟಿ ಶೋ ‘ಮಜಾಭಾರತ’ದ ಮೂಲಕ ನಾಡಿನ ಜನರನ್ನು ನಗಿಸುತ್ತಿದ್ದ ಯುವ ಕಲಾವಿದ ಸಿದ್ದಾರ್ಥ ಪರಶನೂರ ಅವರ ಜೀವನ ಪ್ರವಾಸ ಅತ್ಯಂತ ದುರಂತಮಯವಾಗಿ ಕೊನೆಗೊಂಡಿದೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಣಕುಣಿ ರಸ್ತೆಯ ಅರಣ್ಯ ಪ್ರದೇಶದಲ್ಲಿ ಇವರ ಮೃತದೇಹ ಪತ್ತೆಯಾಗಿದ್ದು, ಸಾವಿನ ಸುತ್ತ ಹತ್ತಾರು ಅನುಮಾನಗಳು ಸೃಷ್ಟಿಯಾಗಿವೆ. ಕೇವಲ 36 ವರ್ಷ ವಯಸ್ಸಿಗೆ ಉದಯೋನ್ಮುಖ ನಟನೊಬ್ಬ ಇಹಲೋಕ ತ್ಯಜಿಸಿರುವುದು ಕಿರುತೆರೆ ಲೋಕಕ್ಕೆ ದೊಡ್ಡ ಆಘಾತ ನೀಡಿದೆ.

ಮೂಲಗಳ ಪ್ರಕಾರ, ಹುಮ್ನಾಬಾದ್ ನಗರದ ಟೀಚರ್ಸ್ ಕಾಲೊನಿಯಲ್ಲಿ ನೆಲೆಸಿದ್ದ ಸಿದ್ದಾರ್ಥ ಅವರು ಜೂನ್ 13 ರಂದು ತಮ್ಮ ಕೆಲವು ಸ್ನೇಹಿತರ ಜೊತೆಗೂಡಿ ಮನೆಯಿಂದ ಹೊರಗೆ ಹೋಗಿದ್ದರು. ಆದರೆ, ಅದಾದ ನಂತರ ಅವರು ಮರಳಿ ಮನೆಗೆ ಬಂದಿರಲಿಲ್ಲ. ಮೂರು ದಿನಗಳ ಕಾಲ ಸಿದ್ದಾರ್ಥ ಅವರ ಪತ್ತೆ ಸಿಗದ ಕಾರಣ ಆತಂಕಗೊಂಡ ಕುಟುಂಬಸ್ಥರು ಜೂನ್ 15ರ ಸೋಮವಾರ ಬೆಳಗ್ಗೆ ಹುಮ್ನಾಬಾದ್ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಲು ಮುಂದಾಗಿದ್ದರು. ಆದರೆ ದುರದೃಷ್ಟವಶಾತ್, ಅಷ್ಟರಲ್ಲೇ ಅರಣ್ಯದ ಪಕ್ಕದಲ್ಲಿ ಇವರ ಶವ ಸಿಕ್ಕಿರುವ ದಾರುಣ ಸುದ್ದಿ ಕೇಳಿಬಂದಿದೆ.

ಇದನ್ನೂ ಓದಿ : ಡ್ರಗ್ಸ್ ದಂಧೆಗೆ ಬ್ರೇಕ್ ಹಾಕಿದ ಪೊಲೀಸರು; ಒಂದೇ ದಿನ ₹5.67 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ನಟ ಕೊನೆಯದಾಗಿ ಯಾರೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಎಲ್ಲೆಲ್ಲಿ ಸಂಚರಿಸಿದ್ದರು ಎಂಬುದನ್ನು ಪತ್ತೆಹಚ್ಚಲು ಮೊಬೈಲ್ ನೆಟ್‌ವರ್ಕ್ ಟವರ್‌ನ ಲೊಕೇಶನ್ ಆಧರಿಸಿ ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದೆ.ಮೇಲ್ನೋಟಕ್ಕೆ ಕರೆಂಟ್​ ಶಾಕ್​ ಹೊಡೆದ ಸಿದ್ಧಾರ್ಥ ಮೃತಪಟ್ಟಂತೆ ಕಾಣುತ್ತಿದ್ದು, ಸಾವಿಗೆ ನಿಖರವಾದ ಕಾರಣವೇನೆಂದು ತಿಳಿಯಲು ಬ್ರಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಹಸನ್ಮುಖಿಯಾಗಿದ್ದ ಸಿದ್ದಾರ್ಥ ಅವರ ಈ ನಿಗೂಢ ಅಂತ್ಯವು ಅವರ ಅಭಿಮಾನಿ ಬಳಗ ಹಾಗೂ ಕುಟುಂಬದವರನ್ನು ತೀವ್ರ ಆಕ್ರಂದನದಲ್ಲಿ ಮುಳುಗಿಸಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories