ಆರ್​ಎಸ್​ಎಸ್​ ವಿರುದ್ಧ ಪ್ರಿಯಾಂಕ್​ ಖರ್ಗೆ ಮರುಸಮರ: ಸಂಘದ ಕಾನೂನುಬದ್ಧ ಸ್ಥಾನಮಾನ ಪ್ರಶ್ನಿಸಿ ಬಹಿರಂಗ ಪತ್ರ!

ಸಂಘಟನೆಯ ಕಾನೂನಾತ್ಮಕ ಅಸ್ತಿತ್ವ ಮತ್ತು ಆರ್ಥಿಕ ಪಾರದರ್ಶಕತೆಯನ್ನು ಪ್ರಶ್ನಿಸಿ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಸದಾ ಆರ್​ಎಸ್​ಎಸ್​ ವಿರುದ್ಧ ಕತ್ತಿ ಮಸೆಯುತ್ತಲೇ ಇರುವ ಪ್ರಿಯಾಂಕ್​ ಖರ್ಗೆ ಇದೀಗ ರಾಜ್ಯದ ನೂತನ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಸಂಘಟನೆಯ ಕಾನೂನಾತ್ಮಕ ಅಸ್ತಿತ್ವ ಮತ್ತು ಆರ್ಥಿಕ ಪಾರದರ್ಶಕತೆಯನ್ನು ಪ್ರಶ್ನಿಸಿ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಸಂಘಟನೆಯ ಬೃಹತ್ ನೆಟ್‌ವರ್ಕ್ ಮತ್ತು ಸಾರ್ವಜನಿಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆಗಳು ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿವೆ.

ಕರ್ನಾಟಕದಲ್ಲಿ ಸಾವಿರಾರು ಶಾಖೆಗಳು, ಸಮಾಜೋತ್ಸವಗಳು ಹಾಗೂ ಲಕ್ಷಾಂತರ ಸ್ವಯಂಸೇವಕರನ್ನು ಹೊಂದಿರುವ ಆರ್ಎಸ್ಎಸ್ ಕೇವಲ ಅನೌಪಚಾರಿಕ ಸಂಸ್ಥೆಯಾಗಿ ಉಳಿಯಲು ಸಾಧ್ಯವಿಲ್ಲ ಎಂದು ಸಚಿವರು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ. ದೇಶದ ಸಾಮಾನ್ಯ ನಾಗರಿಕರು, ಎನ್ಜಿಒಗಳು, ಧಾರ್ಮಿಕ ಟ್ರಸ್ಟ್‌ಗಳು ಮತ್ತು ಸಫಾಯಿ ಕರ್ಮಚಾರಿಗಳೂ ಕೂಡ ಸರ್ಕಾರದ ಸೌಲಭ್ಯ ಪಡೆಯಲು ಅಥವಾ ಕಾರ್ಯನಿರ್ವಹಿಸಲು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಹಾಗೂ ಆಡಿಟ್ ವರದಿ ಸಲ್ಲಿಸಬೇಕು. ಆದರೆ ಇಷ್ಟು ದೊಡ್ಡ ಪ್ರಭಾವ ಹೊಂದಿರುವ ಆರ್ಎಸ್ಎಸ್ ಯಾವ ಕಾನೂನಿನ ಅಡಿಯಲ್ಲಿ ನೋಂದಣಿಯಾಗದೆ ವಿನಾಯಿತಿ ಪಡೆದಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ನಕಲಿ ಗ್ಯಾರಂಟಿ ಫಲಾನುಭವಿಗಳಿಗೆ ಬಿಗ್ ಶಾಕ್: ಇನ್ಮುಂದೆ ವೋಟರ್ ಐಡಿ ಇದ್ದವರಿಗಷ್ಟೇ ಉಚಿತ ಯೋಜನೆಗಳ ಲಾಭ!

ಪತ್ರದಲ್ಲಿ ಪ್ರಮುಖವಾಗಿ 6 ಅಂಶಗಳ ಕುರಿತು ಸ್ಪಷ್ಟನೆ ಕೋರಲಾಗಿದ್ದು, ಸಂಘಟನೆಯ ಸಾಂಸ್ಥಿಕ ರಚನೆ, ಪದಾಧಿಕಾರಿಗಳ ವಿವರ, ದೇಣಿಗೆ ಹಾಗೂ ಆದಾಯದ ಮೂಲಗಳು, ಆಸ್ತಿಪಾಸ್ತಿ ಮತ್ತು ತೆರಿಗೆ ಪಾವತಿಯ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ, ರಾಜ್ಯಾದ್ಯಂತ ನಡೆಯುವ ಬೃಹತ್ ಪಥಸಂಚಲನಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಪಡೆಯಲಾಗುವ ಅಧಿಕೃತ ಅನುಮತಿಗಳ ನಿಯಮಾವಳಿಗಳ ಬಗ್ಗೆಯೂ ಸಚಿವರು ಉತ್ತರಿಸುವಂತೆ ಕೋರಿದ್ದಾರೆ.

ಆರ್​ಎಸ್​ಎಸ್ ಸಂಘಟನೆಯು 2,194 ಸಮಾಜೋತ್ಸವಗಳನ್ನು ಈವರೆಗೆ ನಡೆಸಿದ್ದು, ಇದರಲ್ಲಿ 19,61,158 ಮಂದಿ ಪಾಲ್ಗೊಂಡಿದ್ದಾರೆ. ರಾಜ್ಯಾದ್ಯಂತ ಆರ್​ಎಸ್​ಎಸ್​ 562 ಪಥಸಂಚಲನಗಳನ್ನು ಆಯೋಜಿಸಿದೆ, ಇವು ಸಾಮಾನ್ಯವಾಗಿ 2.5 ರಿಂದ 3 ಕಿ. ಮೀ. ವರೆಗೆ ನಡೆದಿದ್ದು, 2,21,963 ಸಮವಸ್ತ್ರಧಾರಿ ಸ್ವಯಂಸೇವಕರು ಭಾಗವಹಿಸಿದ್ದಾರೆ ಎಂದು ಆರ್​ಎಸ್​ಎಸ್​ ಮಾಹಿತಿ ಹಂಚಿಕೊಂಡಿದೆ. ರಾಜ್ಯದಲ್ಲಿ ಆಳವಾಗಿ ಬೇರೂರಿವ ನೆಟ್​ವರ್ಕ್​ ಇದಾಗಿದ್ದು, ಈ ಸಂಘಟನೆಯನ್ನು ಅನೌಪಚಾರಿಕ ಎಂದು ಪರಿಗಣಿಸಲು ಸಾಧ್ಯವೇ ಇಲ್ಲ. ಈ ಸಂಘಟನೆಯು ಕಾನೂನುಬದ್ಧ ಸ್ಥಾನಮಾನದ ಬಗ್ಗೆ ಸ್ಪಷ್ಟನೆ ನೀಡುವಂತೆ ಪತ್ರದಲ್ಲಿ ಪ್ರಿಯಾಂಕ್​ ಖರ್ಗೆ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಪದವೀಧರರಿಗೆ ಸುವರ್ಣಾವಕಾಶ : ಸೆಂಟ್ರಲ್‌ ಬ್ಯಾಂಕ್‌ನಿಂದ 4500 ಅಪ್ರೆಂಟಿಸ್‌ಶಿಪ್‌ ಹುದ್ದೆಗೆ ಅರ್ಜಿ ಆಹ್ವಾನ

ಇನ್ನು ಆರ್​ಎಸ್​ಎಸ್​ನ್ನು ನೋಂದಣಿ ಮಾಡಬೇಕು ಎಂಬ ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಡಿಮ್ಯಾಂಡ್​ಗೆ ಆರ್​ಎಸ್​ಎಸ್​​ ಮುಖ್ಯಸ್ಥ ಮೋಹನ್​ ಭಾಗವತ್​ ತಿರುಗೇಟು ನೀಡಿದ್ದಾರೆ. 1950ರಲ್ಲೇ ತನ್ನ ಲಿಖಿತ ಸಂವಿಧಾನವನ್ನು ಆರ್​ಎಸ್​ಎಸ್​ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಸಂಘಟನೆಗೆ ನೋಂದಣಿ ಅಗತ್ಯವಿದ್ದರೆ ಸರ್ಕಾರ ಆಗಲೇ ಕೇಳುತ್ತಿತ್ತು. ಸರ್ಕಾರದ ಅನುದಾನದ ಅಗತ್ಯವಿರುವ ಸಂಘಟನೆಗಳಿಗೆ ಮಾತ್ರ ನೋಂದಣಿ ಅನಿವಾರ್ಯವಾಗಿರುತ್ತದೆ. ಹಾಗೆ ಹೇಳಲು ಹೋದರೆ ಹಿಂದೂ ಧರ್ಮ ಕೂಡ ನೋಂದಣಿಯಾಗಿಲ್ಲ. ಇದು ಕೇವಲ ರಾಜಕೀಯ ಗಿಮಿಕ್​ ಎಂದು ಟಾಂಗ್​ ನೀಡಿದ್ದಾರೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories