ಭಟ್ಕಳದಲ್ಲಿ ಮತ್ತೊಮ್ಮೆ ಕೋಮು ಸಂಘರ್ಷದ ಕಿಡಿ : ಹಿಂದೂ ಮುಖಂಡನ ಮೇಲೆ ಕೇಸ್ ಬೆನ್ನಲ್ಲೇ ಪೊಲೀಸ್ ಠಾಣೆಗೆ ಮುತ್ತಿಗೆ!

ಉತ್ತರ ಕನ್ನಡ ಜಿಲ್ಲೆಯ ಸೂಕ್ಷ್ಮ ಪ್ರದೇಶವಾದ ಭಟ್ಕಳ ನಗರದಲ್ಲಿ ಮತ್ತೆ ಕೋಮು ಸಂಘರ್ಷದ ಜ್ವಾಲೆ ಭುಗಿಲೆದ್ದಿದೆ.

ಕೆಲವು ದಿನಗಳ ಹಿಂದಷ್ಟೇ ಕೋಮುಸಂಘರ್ಷದಿಂದ ಸುದ್ದಿಯಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಸೂಕ್ಷ್ಮ ಪ್ರದೇಶವಾದ ಭಟ್ಕಳ ನಗರದಲ್ಲಿ ಮತ್ತೆ ಕೋಮು ಸಂಘರ್ಷದ ಜ್ವಾಲೆ ಭುಗಿಲೆದ್ದಿದೆ. ಹಿಂದೂ ಯುವತಿಯೊಂದಿಗೆ ಅನುಮಾನಾಸ್ಪದವಾಗಿ ಕಾರಿನಲ್ಲಿ ತೆರಳುತ್ತಿದ್ದ ಅನ್ಯಕೋಮಿನ ಯುವಕನನ್ನು ಪ್ರಶ್ನಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದ ಹಿಂದೂ ಮುಖಂಡರ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದು ಈ ತಡರಾತ್ರಿಯ ಹೈಡ್ರಾಮಾಕ್ಕೆ ಪ್ರಮುಖ ಕಾರಣವಾಗಿದೆ. ಮುಖಂಡರ ಮೇಲಿನ ಕೇಸ್ ಹಿಂಪಡೆಯುವಂತೆ ಒತ್ತಾಯಿಸಿ ನೂರಾರು ಹಿಂದೂ ಕಾರ್ಯಕರ್ತರು ಭಟ್ಕಳ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದ್ದರಿಂದ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಭಟ್ಕಳದಲ್ಲಿ ಈ ರೀತಿಯ ಉದ್ವಿಗ್ನತೆ ಸೃಷ್ಟಿಯಾಗುತ್ತಿರುವುದು ಇದೇ ಮೊದಲೇನಲ್ಲ. ಕೇವಲ ಕೆಲವು ದಿನಗಳ ಹಿಂದೆಯಷ್ಟೇ, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ವೇಳೆ ತೆರವುಗೊಳಿಸಲಾಗಿದ್ದ ಹಿಂದೂಗಳ ಧಾರ್ಮಿಕ ಪೀಠವಾದ ‘ಮೂರಿ ನಕಟ್ಟೆ’ಯನ್ನು ಪುನರ್ ನಿರ್ಮಾಣ ಮಾಡುವ ವಿಚಾರದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ದೊಡ್ಡ ಮಟ್ಟದ ಜಗಳ ನಡೆದಿತ್ತು. ಅಂದು ಎರಡು ಗುಂಪುಗಳ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟದ ಹಂತ ತಲುಪಿದಾಗ, ಪರಿಸ್ಥಿತಿಯನ್ನು ನಿಯಂತ್ರಿಸಲು ಬಂದ ಪೊಲೀಸರ ಮೇಲೆಯೇ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಆ ಸಮಯದಲ್ಲಿ ಅಹಿತಕರ ಘಟನೆಗಳನ್ನು ತಡೆಯಲು ಜಿಲ್ಲಾಡಳಿತವು ಭಟ್ಕಳ ನಗರದಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ, ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜಿಸಿತ್ತು.

ಇದನ್ನೂ ಓದಿ : ಗ್ಯಾರಂಟಿ ಬಳಿಕ ಇದೀಗ ಪಿಂಚಣಿಗೂ ಬಿತ್ತು ಕತ್ತರಿ.. ರಾಜ್ಯದಲ್ಲಿ 16 ಲಕ್ಷ ಜನರ ಸಾಮಾಜಿಕ ಪೆನ್ಶನ್​ ಕಟ್!

ಈ ಹಳೆಯ ಘಟನೆಯ ಬಿಸಿ ಪೂರ್ತಿಯಾಗಿ ಆರುವ ಮುನ್ನವೇ ಈ ಹೊಸ ಕಿಡಿ ಹೊತ್ತಿಕೊಂಡಿದೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಂದಿಗೆ ಕಾರಿನಲ್ಲಿ ಸಾಗರದ ಅರಣ್ಯ ಪ್ರದೇಶದ ಕಡೆಗೆ ಪ್ರಯಾಣಿಸುತ್ತಿದ್ದಾಗ, ಅನುಮಾನಗೊಂಡ ಹಿಂದೂ ಸಂಘಟನೆಯ ಪದಾಧಿಕಾರಿಗಳು ಕಾರನ್ನು ಅಡ್ಡಗಟ್ಟಿ ಪ್ರಶ್ನಿಸಿದ್ದರು. ಇಬ್ಬರಿಂದಲೂ ತಬ್ಬಿಬ್ಬುಗೊಳಿಸುವ ಉತ್ತರಗಳು ಬಂದ ಹಿನ್ನೆಲೆಯಲ್ಲಿ, ಅವರನ್ನು ಠಾಣೆಗೆ ತಂದು ಪೊಲೀಸರ ವಶಕ್ಕೆ ನೀಡಲಾಗಿತ್ತು.

ಆದರೆ, ಪೊಲೀಸರು ಯುವಕನ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಕಾರು ತಡೆದ ಹಿಂದೂ ಕಾರ್ಯಕರ್ತರ ಮೇಲೆಯೇ ದೂರು ದಾಖಲಿಸಿಕೊಂಡಿದ್ದಾರೆ. ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಸಂಘಟನೆಗಳು, ಪಕ್ಷಪಾತ ಧೋರಣೆ ನಿಲ್ಲಿಸುವಂತೆ ಆಗ್ರಹಿಸಿ ಪೊಲೀಸ್ ಇಲಾಖೆಯ ವಿರುದ್ಧ ತಡರಾತ್ರಿವರೆಗೆ ಘೋಷಣೆಗಳನ್ನು ಕೂಗಿದವು. ಸದ್ಯ ಯಾವುದೇ ದೊಡ್ಡ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭಟ್ಕಳ ನಗರದಾದ್ಯಂತ ಸಶಸ್ತ್ರ ಪೊಲೀಸರ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories