ಕೇವಲ ಕಾರಿಗೆ ಮಾತ್ರ ಹಣ ಕೊಡಿ, ಬಾಡಿಗೆಗೆ ಬ್ಯಾಟರಿ ಖರೀದಿಸಿ: ಬಾಸ್ ಯೋಜನೆ ಲಭ್ಯವಿರುವ ಭಾರತದ ಟಾಪ್ 5 ಇಲೆಕ್ಟ್ರಿಕ್ ಕಾರುಗಳು
Top 5 BaaS Scheme electric Cars: ಭಾರತದಲ್ಲಿ ಇಲೆಕ್ಟ್ರಿಕ್ ವಾಹನಗಳ ಮೇಲಿನ ಒಲವು ದಿನೇ ದಿನೇ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ವಾಹನ ತಯಾರಿಕಾ ಕಂಪನಿಗಳು ಹಲವು ಉಚಿತ ಸೌಲಭ್ಯಗಳನ್ನು ನೀಡುತ್ತಿವೆ.
ಸದ್ಯಕ್ಕೆ ಜನಪ್ರಿಯವಾದ ಸರ್ವೀಸ್ ಎಂದರೆ ಬಾಸ್ (BaaS). ಇದು ಸದ್ಯ ಇಲೆಕ್ಟ್ರಿಕ್ ವಾಹನ ತಯಾರಕರು ತಮ್ಮ ಗ್ರಾಹಕರಿಗೆ ನೀಡುತ್ತಿರುವ ಉತ್ತಮ ಕೊಡುಗೆ ಎಂದರೂ ತಪ್ಪಾಗಲಾರದು.
ಕಂಬಷನ್ ಎಂಜಿನ್ ವಾಹನಗಳಿಗೆ ಹೋಲಿಸಿದರೆ ಇಲೆಕ್ಟ್ರಿಕ್ ವಾಹನಗಳು ದುಬಾರಿ ಎನಿಸಿವೆ. ಪೆಟ್ರೋಲ್, ಡೀಸಲ್ ವಾಹನಗಳಿಗಿಂತ ಸುಮಾರು ಒಂದೂವರೆ ಪಟ್ಟು ಹೆಚ್ಚು ಬೆಲೆ ಇ–ವಾಹನಗಳಿದೆ.
ಈ ಅಂಶವನ್ನು ಅರ್ಥಮಾಡಿಕೊಂಡೇ ಇ–ವಾಹನ ತಯಾರಕರು ಬಾಸ್ ಯೋಜನೆ ತಂದಿದ್ದಾರೆ. ಬಾಸ್ ಎಂದರೆ ಬ್ಯಾಟರಿ ಆಸ್ ಎ ಸರ್ವಿಸ್ (Battery As A Service) ಎಂದು.
ಸರಳವಾಗಿ ಹೇಳುವುದಾದರೆ ಗ್ರಾಹಕರು ಕಾರನ್ನು ಮಾತ್ರ ಖರೀದಿಸಿ, ಬ್ಯಾಟರಿಯನ್ನು ಬಾಡಿಗೆಗೆ ತೆಗೆದುಕೊಳ್ಳುವುದಾಗಿದೆ. ಕಾರು ಕಂಪನಿಗಳು ಮಾಸಿಕ ಬ್ಯಾಟರಿ ಬಾಡಿಗೆಯ ಮೂಲಕ ಕಾರನ್ನು ನೀಡುತ್ತಾರೆ.
ನೀವು ಎಷ್ಟೇ ಕಾರು ಓಡಿಸಿದರೂ ಪ್ರತಿ ಕಿ.ಮೀ.ಗೆ ನಿರ್ದಿಷ್ಟ ಹಣ ಪಾವತಿಸಿದರೆ ಆಯಿತು. ಇದರಿಂದ ಬ್ಯಾಟರಿ ಹಾಳಾದರೆ ಹೊಸ ಬ್ಯಾಟರಿ ಕೊಳ್ಳುವ ಹಣ ಉಳಿತಾಯವಾಗುತ್ತದೆ.
ಭಾರತದಲ್ಲಿ ಈ ಸೇವೆಯನ್ನು ಮೊದಲ ಬಾರಿಗೆ ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ಸ್ ಪರಿಚಯಿಸಿತು. ಎಂಜಿ ವಿಂಡ್ಸರ್ ಕಾರನ್ನು ಬಾಸ್ ಯೋಜನೆಯೊಂದಿಗೆ ಬಿಡುಗಡೆ ಮಾಡಲಾಯಿತು.
ಇದಕ್ಕೆ ಗ್ರಾಹಕರು ಕಡಿಮೆ ಸಮಯದಲ್ಲೇ ಉತ್ತಮ ಪ್ರತಿಕ್ರಿಯೆ ನೀಡಿದರು. ಇದನ್ನು ಈಗ ಮಾರುತಿ, ಟಾಟಾಗಳು ಅಳವಡಿಸಿಕೊಂಡಿವೆ. ಹಾಗಾದರೆ ಭಾರತದಲ್ಲಿ ಬಾಸ್ ಸೇವೆ ನೀಡುವ ಪ್ರಮುಖ ಕಾರುಗಳು ಯಾವುವು ಎಂದು ನೋಡೋಣ.
ಎಂಜಿ ಕಾಮೆಟ್ ಇವಿ
ನಗರ ಪ್ರಯಾಣಕ್ಕೆ ಹೇಳಿ ಮಾಡಿಸಿದ ಎಮ್‌ಜಿ ಕಾಮೆಟ್ ಇವಿ ಇಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಗಿದೆ. 17.3 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುವ ಇದು ಎಲೆಕ್ಟ್ರಿಕ್ ಪವರ್‌ಟ್ರೇನ್ 230 ಕಿ.ಮೀ ವರೆಗಿನ ವ್ಯಾಪ್ತಿಯನ್ನು ಭರವಸೆ ನೀಡುತ್ತದೆ.
ದೈನಂದಿನ ನಗರ ಪ್ರಯಾಣ ಮತ್ತು ಸಣ್ಣ ನಗರಗಳಿಗೆ ಸೂಕ್ತವಾಗಿರುವ ಕಾಮೆಟ್ ಇವಿ ಬಾಸ್ ಯೋಜನೆಗಳೊಂದಿಗೆ ಲಭ್ಯವಿದೆ. ಇದರ ಬೆಲೆ ₹ 4.92 ಲಕ್ಷದಿಂದ ₹ 7.63 ಲಕ್ಷದವರೆಗೆ ಇರುತ್ತದೆ. ಆದರೆ ಬ್ಯಾಟರಿ ಬಾಡಿಗೆ ಪ್ರತಿ ಕಿಲೋಮೀಟರ್ ಚಾಲನೆಗೆ 3.20 ರೂ. ಆಗಿದೆ.
ಟಾಟಾ ಪಂಚ್ ಇವಿ
ಭಾರತದ ಬಾಸ್ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಕಾರು 2026 ರ ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್. ಇದನ್ನು ಎರಡು ವಿಭಿನ್ನ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.
30 kWh ಪ್ಯಾಕ್ 375 ಕಿಮೀ ವ್ಯಾಪ್ತಿಯನ್ನು ನೀಡಿದರೆ, ಇನ್ನೊಂದು 468 ಕಿಮೀ ವ್ಯಾಪ್ತಿಯನ್ನು ನೀಡುವ ದೊಡ್ಡ 40 kWh ಪ್ಯಾಕ್ ಇದೆ. ದೇಸಿ ಕಾರಾದ ಟಾಟಾ ಪಂಚ್ EV BaaS ಯೋಜನೆಯೊಂದಿಗೆ ಲಭ್ಯವಿದೆ.
ಇದರ ಅಡಿಯಲ್ಲಿ ಎಲೆಕ್ಟ್ರಿಕ್ SUV ಬೆಲೆ ₹ 6.49 ಲಕ್ಷ (ಎಕ್ಸ್-ಶೋರೂಂ) ದಿಂದ ಆರಂಭವಾಗುತ್ತದೆ. ಆದರೆ ಬ್ಯಾಟರಿ ಬಾಡಿಗೆಗೆ ಗ್ರಾಹಕರು ಪ್ರತಿ ಕಿಲೋಮೀಟರಿಗೆ 2.60 ರೂ. ಪಾವತಿಸಬೇಕಾಗುತ್ತದೆ .
ಎಂಜಿ ವಿಂಡ್ಸರ್ ಇವಿ
ಭಾರತದಲ್ಲಿ ಬಾಸ್ ಪ್ರೋಗ್ರಾಂ ಅಳವಡಿಸಿಕೊಂಡ ಮೊದಲ ಕಾರು ಎಂಜಿ ವಿಂಡ್ಸರ್ ಇವಿ. ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ.
ಒಂದು 38 kWh ಇನ್ನೊಂದು 52.9 kWh. ಇದು 449 ಕಿ.ಮೀ ವರೆಗೆ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಎಂಜಿ ವಿಂಡ್ಸರ್ ಇವಿಯ ಬೆಲೆ ₹ 9.99 ಲಕ್ಷದಿಂದ ₹ 13.39 ಲಕ್ಷ (ಎಕ್ಸ್-ಶೋರೂಂ) ವರೆಗೆ ಇದೆ. ಇನ್ನು ಇದರ ಬ್ಯಾಟರಿ ಬಾಡಿಗೆಗೆ, ಕಂಪನಿಯ ಮಾಲೀಕರು ರೂಪಾಂತರವನ್ನು ಅವಲಂಬಿಸಿ ಪ್ರತಿ ಕಿಲೋಮೀಟರ್‌ಗೆ ₹ 3.90 ರಿಂದ ₹ 4.50 ರವರೆಗೆ ನಿಗದಿಪಡಿಸಿದ್ದಾರೆ.
ಇದನ್ನೂ ಓದಿ: 2 ಲಕ್ಷಕ್ಕೂ ಅಧಿಕ ಮನೆಗಳನ್ನು ತಲುಪಿದ 5.76 ಲಕ್ಷ ಬೆಲೆಯ 7 ಸೀಟರ್ ಕಾರು: ಆದ್ರೆ ಇದು ಮಾರುತಿ ಎರ್ಟಿಗಾ ಅಂತೂ ಖಂಡಿತ ಅಲ್ಲ
ಮಾರುತಿ ಸುಜುಕಿ ಇ ವಿಟಾರಾ
ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಇ ವಿಟಾರಾದೊಂದಿಗೆ ಬಾಸ್ ಯೋಜನೆಯನ್ನು ಅಳವಡಿಸಿಕೊಂಡಿದೆ.
49 kWh ಮತ್ತು 61 kWh ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿರುವ ಮಾರುತಿ ಸುಜುಕಿ ಇ ವಿಟಾರಾ ಒಂದೇ ಚಾರ್ಜ್‌ನಲ್ಲಿ 500 ಕಿ.ಮೀ. ಗಿಂತ ಹೆಚ್ಚಿನ ವ್ಯಾಪ್ತಿಯನ್ನು ನೀಡುತ್ತದೆ.
ಮಾರುತಿ ಸುಜುಕಿ ಇ ವಿಟಾರಾ ಬೆಲೆ ₹ 10.99 ಲಕ್ಷದಿಂದ ₹ 14.29 ಲಕ್ಷ (ಎಕ್ಸ್-ಶೋರೂಂ) ವರೆಗೆ ಇದೆ. ಇನ್ನು ಇದರ ಬ್ಯಾಟರಿ ಬಾಡಿಗೆ ಪ್ರತಿ ಕಿಲೋಮೀಟರ್‌ಗೆ 3.99 ರೂ. ದಿಂದ 4.39 ರು. ರವರೆಗೆ ಇರುತ್ತದೆ.
ಎಂಜಿ ಝಡ್ಎಸ್ ಇವಿ
ಎಂಜಿ ವಿಂಡ್ಸರ್ ಇವಿ ಯಷ್ಟು ಜನಪ್ರಿಯವಾಗಿಲ್ಲದಿದ್ದರೂ ತನ್ನದೇ ಆದ ಗ್ರಾಹಕ ವರ್ಗವನ್ನು ಹೊಂದಿದೆ. ಇದರಲ್ಲಿ 50.3 kWh ಬ್ಯಾಟರಿ ಪ್ಯಾಕ್ ಅನ್ನು ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಜೋಡಿಸಲಾಗಿದೆ.
ಇದು 461 ಕಿ.ಮೀ ವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಬಾಸ್ ಸೌಲಭ್ಯ ನೀಡುವ ಈ ಕಾರಿನ ಬೆಲೆ ₹ 13 ಲಕ್ಷದಿಂದ ₹ 15.51 ಲಕ್ಷ (ಎಕ್ಸ್-ಶೋರೂಂ) ವರೆಗೆ ಇದೆ. ಬ್ಯಾಟರಿ ಬಾಡಿಗೆಗೆ, ಗ್ರಾಹಕರು ಪ್ರತಿ ಕಿಲೋಮೀಟರಿಗೆ 4.50 ರೂ. ಪಾವತಿಸಬೇಕಾಗುತ್ತದೆ.



