ರಾಜ್ಯದಲ್ಲಿಂದು ಕೊರೊನಾ ಮಹಾಸ್ಪೋಟ : ಒಂದೇ ದಿನ 248 ಮಂದಿಗೆ ಕೊರೊನಾ ಸೋಂಕು

0

ಬೆಂಗಳೂರು : ಕೊರೊನಾ ಮಹಾಮಾರಿ ರಾಜ್ಯದಲ್ಲಿ ಹೊಸ ದಾಖಲೆ ಬರೆದಿದೆ. ರಾಜ್ಯದಲ್ಲಿಂದು ಕೊರೊನಾ ಮಹಾಸ್ಪೋಟ ಸಂಭವಿಸಿದ್ದು, ಒಂದೇ ದಿನ ಬರೋಬ್ಬರಿ 248 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಒಂದೇ ದಿನ ಇಷ್ಟೊಂದು ಪ್ರಮಾಣದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಇದೇ ಮೊದಲು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 2,781ಕ್ಕೆ ಏರಿಕೆಯಾಗಿದ್ದು, ಮಹಾಮಾರಿ ರಾಜ್ಯದ ಜನತೆಗೆ ಆತಂಕವನ್ನು ತಂದೊಡ್ಡಿದೆ.

ರಾಜ್ಯದಲ್ಲಿಯೇ ರಾಯಚೂರಿನಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ರಾಯಚೂರಿನಲ್ಲಿ 62 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇನ್ನು ಕಲಬುರಗಿಯಲ್ಲಿ 61 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಯಾದಗಿರಿಯಲ್ಲಿಯೂ ಕೊರೊನಾ ಅಟ್ಟಹಾಸ ಮರೆದಿದ್ದು, ಜಿಲ್ಲೆಯಲ್ಲಿ ಒಟ್ಟು 60 ಮಂದಿಗೆ ಕೊರೊನಾ ಸೋಂಕು ವ್ಯಾಪಿಸಿದೆ.

ಉಳಿದಂತೆ ಕರಾವಳಿಯಲ್ಲಿಯೂ ಕೊರೊನಾ ಮಹಾಮಾರಿ ರೌದ್ರನರ್ತನ ಮರೆಯುತ್ತಿದ್ದು, ಕೃಷ್ಣನ ನಗರಿ ಉಡುಪಿಯಲ್ಲಿ ಒಂದೇ ದಿನ 15 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಉಡುಪಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 164ಕ್ಕೆ ಏರಿಕೆಯಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ಒಂದು ಕೊರೊನಾ ಪ್ರಕರಣ ದಾಖಲಾಗಿಲ್ಲ. ಈ ಮೂಲಕ ಶತಕದ ಅಂಚಿನಲ್ಲಿದ್ದ ದಕ್ಷಿಣ ಕನ್ನಡ ಜನರು ಕೊಂಚ ನಿರಾಳರಾಗಿದ್ದಾರೆ.

ಉಳಿದಂತೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿಯೂ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 12 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನು ಬಳ್ಳಾರಿ 9, ಚಿಕ್ಕಬಳ್ಳಾಪುರ 5, ದಾವಣಗೆರೆ 4, ಹಾಸನ 4, ವಿಜಯಪುರ 4, ಮಂಡ್ಯದಲ್ಲಿ 2, ಮೈಸೂರು 2, ತುಮಕೂರು 2, ಚಿಕ್ಕಮಗಳೂರು 2, ಬೆಂಗಳೂರು ಗ್ರಾಮಾಂತರ 1, ಧಾರವಾಡ 1, ಚಿತ್ರದುರ್ಗ 1, ಶಿವಮೊಗ್ಗ ಜಿಲ್ಲೆಯಲ್ಲಿ ಓರ್ವರಿಗೆ ಸೋಂಕು ದೃಢಪಟ್ಟಿದೆ.

ಇಂದು ಕೊರೊನಾ ಕಾಣಿಸಿಕೊಂಡಿರುವ ಬಹುತೇಕರು ಮುಂಬೈನಿಂದ ಆಗಮಿಸಿದವರೇ ಆಗಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದ 60 ಮಂದಿ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಕೊರೊನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 894ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 1837 ಮಂದಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇದುವರೆ ಒಟ್ಟು 48 ಮಂದಿ ಸಾವನ್ನಪ್ಪಿದ್ದಾರೆ.

Leave A Reply

Your email address will not be published.