ಕಾಂಗ್ರೆಸ್ ಪಕ್ಷ ಸೇರಿ ಟೀಪುಡಿ ತರಲು ಕಾಸಿಲ್ಲದಂತ ಸ್ಥಿತಿ ತಲುಪಿದ್ದೆ….! ಬಿಜೆಪಿ ಸಭೆಯಲ್ಲಿ ಜಗ್ಗೇಶ್ ಆತ್ಮಾವಲೋಕನ…!!

ಕಾಂಗ್ರೆಸ್ ನಿಂದ ಶಾಸಕರಾಗಿದ್ದು, ಆಫರೇಶನ್ ಕಮಲದಲ್ಲಿ ಬಿಜೆಪಿ ತೆಕ್ಕೆಗೆ ಜಾರಿದ ನಟ ಹಾಗೂ ರಾಜಕೀಯನಾಯಕ ಜಗ್ಗೇಶ್ ಕಾಂಗ್ರೆಸ್ ನಲ್ಲಿನ ಕಹಿನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಬಿಜೆಪಿ ಆಯೋಜಿಸಿದ್ದ ಮಾಧ್ಯಮ-ಮಂಥನದಲ್ಲಿ ಮಾತನಾಡಿದ ಜಗ್ಗೇಶ್, ಕಾಂಗ್ರೆಸ್ ಸಹವಾಸದಿಂದ ಟೀಪುಡಿ ತರಲು ಕಾಸಿಲ್ಲದ ಸ್ಥಿತಿ ತಲುಪಿದ್ದೆ ಎಂದಿದ್ದಾರೆ.

ನನ್ನನ್ನು ಕಾಂಗ್ರೆಸ್ ಗೆ ಡಿಕೆಶಿ ಸೇರಿಸಿದರು. ಕಾರ್ಯದರ್ಶಿಯಾಗಿ ನೇಮಿಸಿದರು. ಆದರೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗಲೇ ನನಗೆ ರಾಜಕೀಯದ ನಿಜರೂಪ ಗೊತ್ತಾಯಿತು. ಆಗಿನ ಕಾಲಕ್ಕೆ ಕಾಂಗ್ರೆಸ್ ನಾಯಕರ ಬೆಳಗಿನ ಪ್ರಚಾರಕ್ಕೆ 50ಲಕ್ಷ ಖರ್ಚು ಮಾಡಿದ್ದೆ. ಇದನ್ನು ನೋಡಿದ ಕಾಂಗ್ರೆಸ್ ಶಾಸಕರೊಬ್ಬರು ಇದು ಬರಿ ಟ್ರೇಲರ್,ಅಸಲಿ ಆಟ ಬೇರೆ ಇದೆ. ಸಂಜೆನ ಖರ್ಚು ಇನ್ನೂ ಇರುತ್ತೆ ಎಂದಿದ್ದರು ಎಂದು ಜಗ್ಗೇಶ್ ಹೇಳಿದ್ದಾರೆ.

ಸಿನಿಮಾಗಳಲ್ಲಿ ನಟಿಸಿ ಗಳಿಸಿದ್ದ ಹಣದಿಂದ ನಾಲ್ಕು ಸೈಟ್ ಖರೀದಿಸಿದ್ದೆ. ಆದರೆ ರಾಜಕೀಯದಲ್ಲಿ ಕಾಂಗ್ರೆಸ್ ಸಹವಾಸದಿಂದ ಅದನ್ನು ಕಳೆದುಕೊಂಡೆ. ಕಾಂಗ್ರೆಸ್ ಪಕ್ಷಕ್ಕೆ 7 ಸಾವಿರ ಮತಗಳು ಹುಟ್ಟದ ಕ್ಷೇತ್ರದಲ್ಲಿ ನಾನು 25 ಸಾವಿರ ಮತಗಳಿಸಿದ್ದೆ. ಆದರೆ ಗೆಲ್ಲಲಿಲ್ಲ. ಅಷ್ಟೊತ್ತಿಗೆ ನನಗೆ ರಾಜಕೀಯ ಮತ್ತು ಕಾಂಗ್ರೆಸ್ ಎರಡೂ ಸಾಕು ಎನ್ನಿಸಿತ್ತು. ಟೀ-ಕಾಫಿಗೂ ಕಾಸಿಲ್ಲದ ಸ್ಥಿತಿ ಬಂದಿತ್ತು ಎಂದು ತಾವು ಅನುಭವಿಸಿದ ಕಷ್ಟವನ್ನು ಬಿಚ್ಚಿಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಾದ ನೋವಿನ ಅನುಭವದಿಂದ ರಾಜಕೀಯದಲ್ಲೇ ಆಸಕ್ತಿ ಕಳೆದುಕೊಂಡಿದ್ದೆ. ಆದರೆ ಕೊನೆಗೆ ಅಭಿಮಾನಿಗಳೇ ನನ್ನನ್ನು ಗೆಲ್ಲಿಸಿ ಶಕ್ತಿ ತುಂಬಿದರು ಎಂದು ಜಗ್ಗೇಶ್ ಹೇಳಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಸಿಡಿ ವಿದ್ಯಮಾನದ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ ಜಗ್ಗೇಶ್, ಈಗ ರಾಜ್ಯದಲ್ಲಿ ದೊಡ್ಡ ದೊಡ್ಡ ನಾಯಕರ ಅಸಲಿ ರೂಪ ಬಯಲಾಗುತ್ತಿದೆ. ಏನು ಮಾಡಲು ಸಾಧ್ಯವಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದಿದ್ದಾರೆ.

Comments are closed.