‘ಎತ್ತಿನಹೊಳೆ’ ವಿಚಾರದಲ್ಲಿ ಬಿಜೆಪಿ ಅನ್ಯಾಯ ! ಕರಾವಳಿಗೆ ಮೋಸ ಮಾಡಿದ್ರಾ ಸಂಸದ ನಳಿನ್ ?

0

ಮಂಗಳೂರು : ಕರಾವಳಿಯಲ್ಲಿ ಎತ್ತಿನಹೊಳೆ ವಿಚಾರದಲ್ಲಿ ಕಿಚ್ಚು ಹೊತ್ತಿಸಿದ್ದ ಬಿಜೆಪಿ ಇದೀಗ ಬಜೆಟ್ ನಲ್ಲಿ ಎತ್ತಿನಹೊಳೆ ಯೋಜನೆಗೆ ಜೈ ಎಂದಿದೆ. ಬಿಜೆಪಿಯ ನಡೆ ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಎತ್ತಿನಹೊಳೆಗಾಗಿ ಪಾದಯಾತ್ರೆ ಮಾಡಿದ್ದ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ದ ಬಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಎತ್ತಿನಹೊಳೆ ಯೋಜನೆ ಕರಾವಳಿಗರನ್ನು ಬಡಿದೆಬ್ಬಿಸುವಂತೆ ಮಾಡಿತ್ತು. 2012ರಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡರು ತುಮಕೂರು, ಕೋಲಾರ, ಬೆಂಗಳೂರು, ರಾಮನಗರ ಜಿಲ್ಲೆಗಳ ಜನರ ನೀರಿನ ದಾಹ ನೀಗೋ ಸಲುವಾಗಿ ಯೋಜನೆಯನ್ನು ಜಾರಿಗೆ ತಂದ್ರು. ನಂತರ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, 2014ರಲ್ಲಿ ಸುಮಾರು 12,912 ಕೋಟಿ ರೂಪಾಯಿ ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆಗೆ ಆಡಳಿತಾತ್ಮಕ ಅನುಮೋದನೆಯನ್ನು ಕೊಟ್ಟಿದ್ದರು.

ಅದ್ಯಾವಾಗ ಸರಕಾರದಿಂದ ಎತ್ತಿನಹೊಳೆ ಯೋಜನೆಗೆ ಅಧಿಕೃತ ಮುದ್ರೆ ಬೀತ್ತೋ ಆವಾಗ್ಲೆ, ಕರಾವಳಿಯಲ್ಲಿ ಬಾರೀ ಜನಾಕ್ರೋಶ ವ್ಯಕ್ತವಾಗಿತ್ತು. ಮಠಾಧೀಶರು, ರಾಜಕಾರಣಿಗಳು, ಜನಪ್ರತಿನಿಧಿಗಳು ರಸ್ತೆಗಿಳಿದಿದ್ರು. ಉಪ್ಪಿನಂಗಡಿಯಲ್ಲಿ ಬಾರೀ ಪ್ರತಿಭಟನೆ ನಡೆಸಿ ಯೋಜನೆಯ ವಿರುದ್ದ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

ನಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಹೋರಾಟಕ್ಕೆ ಧುಮುಕಿದ್ರು. ಮಂಗಳೂರಿನಿಂದ ಎತ್ತಿನಹೊಳೆಯವರೆಗೆ ಪಾದಯಾತ್ರೆಯನ್ನು ಮಾಡೋ ಮೂಲಕ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿದ್ದರು. ನಳಿನ್ ಕುಮಾರ್ ಹೋರಾಟದಲ್ಲಿ ಬಿಜೆಪಿಯ ಶಾಸಕರು, ಜನಪ್ರತಿನಿಧಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿರೋಧ ಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿಸುತ್ತಲೇ ಬಂದಿತ್ತು. ಆದ್ರೀಗ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರುತ್ತಲೇ ಎತ್ತಿನಹೊಳೆ ಯೋಜನೆ ಪರ ನಿಂತಿದೆ. ವಿಧಾನ ಸೌಧದಲ್ಲಿ ಯೋಜನೆ ವಿರುದ್ದ ಗುಡುಗಿದ್ದ ನಾಯಕರೇ ಇದೀಗ ಎತ್ತಿನಹೊಳೆ ಯೋಜನೆಗೆ ಜೈಕಾರ ಹಾಕುತ್ತಿದ್ದಾರೆ.

ಅಷ್ಟೇ ಯಾಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2020-21ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗಾಗಿ 1,500 ಕೋಟಿ ರೂಪಾಯಿಗಳನ್ನು ಮೀಸಲಿಟ್ಟು, ಎತ್ತಿನಹೊಳೆ ಯೋಜನೆಯನ್ನು ಬೆಂಬಲಿಸಿದ್ದಾರೆ. ರಾಜ್ಯ ಸರಕಾರ ಬಜೆಟ್ ನಲ್ಲಿ ಯೋಜನೆಗೆ ಹಣ ಮೀಸಲಿಡುತ್ತಲೇ ದಕ್ಷಿಣ ಕನ್ನಡ ಜಿಲ್ಲಾ ಸಂಸದ, ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡ ಬಜೆಟ್ ನಲ್ಲಿ ಹಣ ಮೀಸಲಿಟ್ಟಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಕೇವಲ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲು ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುತ್ತಿದ್ದು, ಇದೀಗ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಲೇ ಎತ್ತಿನಹೊಳೆ ಯೋಜನೆಯನ್ನು ಬೆಂಬಲಿಸೋದಕ್ಕೆ ಮುಂದಾಗಿರೋದು ಕರಾವಳಿಗರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಯಾವುದೇ ಕಾರಣಕ್ಕೂ ನೇತ್ರಾವತಿ ತಿರುವಿಗೆ ಬಿಡೋದಿಲ್ಲಾ ಅಂತಾ ನೇತ್ರಾವತಿ ಉಳಿಸಿ ಹೋರಾಟಗಾರರಿಗೆ ಮಾತುಕೊಟ್ಟಿದ್ದ ನಳಿನ್ ಕುಮಾರ್ ಇಂದು ಅಧಿಕಾರಕ್ಕೆ ತಮ್ಮ ಮಾತನ್ನೇ ಮರೆತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ರಾಜ್ಯದ ಬಿಜೆಪಿ ಸರಕಾರ ಬಜೆಟ್ ನಲ್ಲಿ ಹಣ ಮೀಸಲಿಟ್ಟಿರೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದ್ದು, ಯೋಜನೆಯ ವಿರುದ್ದ ಪರಿಸರ ಪ್ರೇಮಿಗಳು, ನೇತ್ರಾವತಿ ಉಳಿಸಿ ಹೊರಾಟಗಾರರು ಸರಕಾರದ ವಿರುದ್ದ ಸಿಡಿದೆದ್ದಿದ್ದಾರೆ.

ಪಶ್ಚಿಮಘಟ್ಟಕ್ಕೆ ಮಾರಕವಾಗಿರೋ ಎತ್ತಿನಹೊಳೆ ಯೋಜನೆಯ ಕಾಮಗಾರಿ ವಿರೋಧದ ನಡುವಲ್ಲಿಯೂ ಭರದಿಂದ ಸಾಗುತ್ತಿದೆ. ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿ ಸಾಗುತ್ತಿದೆ. ಬಿಜೆಪಿ ಸರಕಾರವಾದ್ರೂ ಕರಾವಳಿಗರ ನೆರವಿಗೆ ನಿಲ್ಲುತ್ತೆ ಅಂತಾ ಬಾವಿಸಿದ್ದ ಕರಾವಳಿ ಮಂದಿಗೆ ಇದೀಗ ಬಿಜೆಪಿಯ ಸರಕಾರ ಅನ್ಯಾಯವೆಸಗಿದೆ ಅನ್ನೋದು ಕರಾವಳಿಗರ ಅಳಲು.

ಎತ್ತಿನಹೊಳೆ ಯೋಜನೆಯಲ್ಲಿ ಬಾರೀ ಭ್ರಷ್ಟಾಚಾರ ನಡೆದಿದೆ ಅನ್ನೋ ಆರೋಪ ಒಂದೆಡೆಯಾದ್ರೆ, ಪಶ್ಚಿಮಘಟ್ಟ ಹಾಗೂ ಕರಾವಳಿಗೆ ಆಪತ್ತು ತರುತ್ತೇ ಅನ್ನೋದು ಪರಿಸರವಾದಿಗಳ ವಾದ. ಒಟ್ಟಿನಲ್ಲಿ ರಾಜ್ಯ ಸರಕಾರದ ವಿರುದ್ದ ಕೆರಳಿರೋ ಕರಾವಳಿಗರು ಇದೀಗ ಮತ್ತೊಮ್ಮೆ ಎತ್ತಿನಹೊಳೆ ಯೋಜನೆಯ ವಿರುದ್ದ ಹೋರಾಟ ನಡೆಸೋ ಸಾಧ್ಯತೆಯಿದೆ.

Leave A Reply

Your email address will not be published.