ಮುಂದುವರಿದ ಫೆಬ್ರವರಿ 1 ರ ಸಂಪ್ರದಾಯ : ಈ ಬಾರಿ ಭಾನುವಾರದಂದು ಕೇಂದ್ರ ಬಜೆಟ್ ಮಂಡನೆ
Union Budget 2026: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕೇಂದ್ರ ಬಜೆಟ್ ಮಂಡನೆ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ. ಫೆಬ್ರವರಿ 1 ಭಾನುವಾರವಾಗಿರುವ ಹಿನ್ನೆಲೆಯಲ್ಲಿ ಫೆಬ್ರವರಿ 2ರಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಾ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿತ್ತು. ಆದರೆ ಇದೀಗ ಕೇಂದ್ರ ಸರ್ಕಾರದಿಂದಲೇ ಸ್ಪಷ್ಟನೆ ಹೊರಬಿದ್ದಿದ್ದು ಕೇಂದ್ರ ಬಜೆಟ್ ಫೆಬ್ರವರಿ 1ರ ಭಾನುವಾರದಂದೇ ಮಂಡನೆಯಾಗಲಿದೆ.
ಫೆಬ್ರವರಿ 1ರ ಬಜೆಟ್ ಮಂಡನೆ ಸಂಪ್ರದಾಯ ಮುರಿಯದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ಮಾಡುವ ಸಂಪ್ರದಾಯ ಆರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ಭಾನುವಾರ ಬಜೆಟ್ ಮಂಡನೆಯಾಗುತ್ತಿದೆ. ಆದರೆ ಭಾನುವಾರ ದೇಶದಲ್ಲಿ ಬಜೆಟ್ ಮಂಡನೆಯಾಗುತ್ತಿರುವುದು ಇದೇ ಮೊದಲೇನಲ್ಲ. 28 ವರ್ಷಗಳ ಹಿಂದೆ ಫೆಬ್ರವರಿ 28ರ 1999ರಲ್ಲಿ ಭಾನುವಾರದಂದು ಕೇಂದ್ರ ಬಜೆಟ್ ಮಂಡಿಸಲಾಗಿತ್ತು. ಅಂದಿನ ವಿತ್ತ ಸಚಿವ ಯಶವಂತ ಸಿನ್ಹಾ ಭಾನುವಾರದಂದು ಬಜೆಟ್ ಮಂಡಿಸಿದ್ದರು.
ಇದನ್ನೂ ಓದಿ: ಆಸ್ಸಾಂ, ಕೇರಳ ರಾಜ್ಯಕ್ಕೆ ಹಿರಿಯ ಚುನಾವಣೆ ವೀಕ್ಷಕರ ನೇಮಕ : ಡಿ.ಕೆ ಶಿವಕುಮಾರ್, ಕೆ.ಜೆ ಜಾರ್ಜ್ಗೆ ಸ್ಥಾನ
ದೇಶದಲ್ಲಿ 2017ರಿಂದ ಫೆಬ್ರವರಿ 1ನೆ ತಾರೀಖಿನಂದೇ ಬಜೆಟ್ ಮಂಡಿಸುವ ಸಂಪ್ರದಾಯ ರೂಢಿಗೆ ಬಂದಿದೆ. ಈ ಬಾರಿ ಜನವರಿ 28ರಿಂದ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಅಧಿವೇಶನಗಳನ್ನುದ್ದೇಶಿಸಿ ಮಾತನಾಡಲಾಗಿದ್ದಾರೆ. ಇದಾದ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಾಖಲೆಯ 9ನೇ ಮುಂಗಡ ಪತ್ರ ಮಂಡಿಸಲಿದ್ದಾರೆ.



