ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ! ವಾಣಿಜ್ಯ ಸಿಲಿಂಡರ್ ದರ ಹೆಚ್ಚಳ; ಅಕ್ರಮ ದಂಧೆಗೆ ಬೀಳಲಿದೆ ಬ್ರೇಕ್!
ವಾಣಿಜ್ಯ ಸಿಲಿಂಡರ್ಗಳ ಅಭಾವದಿಂದಾಗಿ ಮೊದಲೇ ನಷ್ಟದಲ್ಲಿದ್ದ ಹೋಟೆಲ್ ಉದ್ಯಮಿಗಳಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಉಂಟಾದ ವಾಣಿಜ್ಯ ಸಿಲಿಂಡರ್ಗಳ ಅಭಾವದಿಂದಾಗಿ ಮೊದಲೇ ನಷ್ಟದಲ್ಲಿದ್ದ ಹೋಟೆಲ್ ಉದ್ಯಮಿಗಳಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಇಂದಿನಿಂದ ಅನ್ವಯವಾಗುವಂತೆ ಎಲ್ಪಿಜಿ ವಾಣಿಜ್ಯ ಸಿಲಿಂಡರ್ಗಳ ದರದಲ್ಲಿ ಒಂದಲ್ಲ ಎರಡಲ್ಲ ಬದಲಾಗಿ ಬರೋಬ್ಬರಿ 993 ರೂಪಾಯಿ ದರ ಏರಿಕೆ ಮಾಡಲಾಗಿದ್ದು ಗ್ರಾಹಕರು ಕಂಗಾಲಾಗಿದ್ದಾರೆ. ಆದರೆ ಗೃಹಬಳಕೆಯ ಸಿಲಿಂಡರ್ ದರ ಸ್ಥಿರತೆ ಕಾಯ್ದುಕೊಂಡಿದ್ದು ಜನಸಾಮಾನ್ಯರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಈ ಪರಿಷ್ಕೃತ ದರದಿಂದಾಗಿ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ದರ 3000 ರೂಪಾಯಿಗಳ ಗಡಿ ದಾಟಿದೆ. ಇನ್ನುಳಿದಂತೆ ದೆಹಲಿಯಲ್ಲಿ 3071.50 ರೂಪಾಯಿ, ಮುಂಬೈನಲ್ಲಿ 3024 ರೂಪಾಯಿ, ಕೋಲ್ಕತ್ತಾದಲ್ಲಿ 3202 ರೂಪಾಯಿ, ಚೆನ್ನೈನಲ್ಲಿ 3237 ರೂಪಾಯಿ ಹಾಗೂ ಪಾಟ್ನಾದಲ್ಲಿ ವಾಣಿಜ್ಯ ಸಿಲಿಂಡರ್ನ ಪರಿಷ್ಕೃತ ದರ 3361 ರೂಪಾಯಿ ತಲುಪಿದೆ.
ಇನ್ನು ಬೆಲೆ ಏರಿಕೆಯ ಜೊತೆಯಲ್ಲಿ ಇಂದಿನಿಂದ ಅನ್ವಯವಾಗುವಂತೆ ವಾಣಿಜ್ಯ ಸಿಲಿಂಡರ್ಗಳ ಹಂಚಿಕೆಯಲ್ಲಿ ಮಹತ್ವದ ನಿಯಮ ಜಾರಿಗೊಳಿಸಲಾಗಿದೆ. ಇಂದಿನಿಂದ ವಾಣಿಜ್ಯ ಸಿಲಿಂಡರ್ಗಳ ವಿತರಣೆಯ ಸಂದರ್ಭದಲ್ಲಿ ಡೆಲಿವರಿ ಅಥೆಂಟಿಕೇಶನ್ ಕೋಡ್ ನೀಡುವುದು ಕಡ್ಡಾಯವಾಗಿರಲಿದೆ.
ಸಿಲಿಂಡರ್ ವಿತರಣೆ ಮಾಡುವಾಗ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರಲಿದೆ. ಸಿಲಿಂಡರ್ ವಿತರಕರಿಗೆ ಗ್ರಾಹಕರು ಈ ಒಟಿಪಿ ನೀಡದ ಹೊರತು ಸಿಲಿಂಡರ್ ವಿತರಣೆ ಪ್ರಕ್ರಿಯೆ ಸಂಪೂರ್ಣವಾಗುವುದಿಲ್ಲ. ಕಾಳಸಂತೆಗಳಲ್ಲಿ ಅಕ್ರಮ ಸಿಲಿಂಡರ್ ವ್ಯಾಪಾರ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.



