ಸಣ್ಣ ವ್ಯಾಪಾರಿಗಳಿಗೆ ಮೋದಿ ಬಂಪರ್ ಸುದ್ದಿ! ಹೊಸ ಸಾಲ ಯೋಜನೆ, ಸರ್ಕಾರ ಕೊಡ್ತಿದೆ ಭಾರಿ ನೆರವು
ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಕೇಂದ್ರ ಸರ್ಕಾರದಿಂದ ಭಾರಿ ನೆರವು ಘೋಷಣೆ ಮಾಡಲಾಗಿದೆ. ₹2.55 ಲಕ್ಷ ಕೋಟಿ ಹೆಚ್ಚುವರಿ ಸಾಲ ಸೌಲಭ್ಯದಿಂದ ವ್ಯಾಪಾರ ಚಟುವಟಿಕೆಗಳಿಗೆ ಹೊಸ ಚೈತನ್ಯ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSME) ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮತ್ತೊಮ್ಮೆ ಮಹತ್ವದ ಹೆಜ್ಜೆ ಇಟ್ಟಿದೆ. ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ (ECLGS 5.0) ಅಡಿಯಲ್ಲಿ ₹2.55 ಲಕ್ಷ ಕೋಟಿ ಹೆಚ್ಚುವರಿ ಸಾಲ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಆರ್ಥಿಕ ಒತ್ತಡ ಎದುರಿಸುತ್ತಿರುವ ಸಾವಿರಾರು ಉದ್ಯಮಗಳಿಗೆ ನೆರವಾಗುವ ನಿರೀಕ್ಷೆ ಇದೆ.
ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಗಳ ಪರಿಣಾಮ ಹಲವು ವ್ಯವಹಾರಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಹಿನ್ನೆಲೆ ಉದ್ಯಮಗಳ ಕಾರ್ಯಾಚರಣೆ ನಿಲ್ಲದಂತೆ ನೋಡಿಕೊಳ್ಳಲು ಸರ್ಕಾರ ಈ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ವ್ಯಾಪಾರಿಗಳು ತಮ್ಮ ವ್ಯವಹಾರ ಮುಂದುವರಿಸಲು ಅಗತ್ಯವಾದ ವರ್ಕಿಂಗ್ ಕ್ಯಾಪಿಟಲ್ ಪಡೆಯಲು ಇದು ಸಹಾಯಕವಾಗಲಿದೆ.
ಈ ಯೋಜನೆಯ ಅಡಿಯಲ್ಲಿ MSMEಗಳಿಗೆ 100% ಸಾಲ ಗ್ಯಾರಂಟಿ ನೀಡಲಾಗುತ್ತದೆ. ಅಂದರೆ ಸಾಲ ಮರುಪಾವತಿಯಲ್ಲಿ ಸಮಸ್ಯೆ ಎದುರಾದರೆ ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ (NCGTC) ಭದ್ರತೆ ಒದಗಿಸಲಿದೆ. MSMEಗೆ ಸೇರದ ಕೆಲವು ಸಂಸ್ಥೆಗಳು ಹಾಗೂ ಏರ್ಲೈನ್ಸ್ ಕ್ಷೇತ್ರಕ್ಕೆ 90%ರವರೆಗೆ ಗ್ಯಾರಂಟಿ ಕವರ್ ಸಿಗಲಿದೆ.
ವಿಮಾನಯಾನ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ₹5,000 ಕೋಟಿ ಮೀಸಲಿಡಲಾಗಿದೆ. ಏರ್ಲೈನ್ಸ್ ಕಂಪನಿಗಳು ಗರಿಷ್ಠ ₹1,500 ಕೋಟಿ ತನಕ ಹೆಚ್ಚುವರಿ ಸಾಲ ಪಡೆಯುವ ಅವಕಾಶ ಹೊಂದಿವೆ. ಇನ್ನು MSME ಹಾಗೂ ಇತರೆ ಸಂಸ್ಥೆಗಳು ತಮ್ಮ ವರ್ಕಿಂಗ್ ಕ್ಯಾಪಿಟಲ್ ಮಿತಿಯ 20%ರವರೆಗೆ ಹೆಚ್ಚುವರಿ ಸಾಲ ಪಡೆಯಬಹುದು. ಆದರೆ ಪ್ರತಿ ಸಂಸ್ಥೆಗೆ ಗರಿಷ್ಠ ₹100 ಕೋಟಿ ಮಿತಿ ನಿಗದಿಯಾಗಿದೆ.
ಈ ಸಾಲಗಳಿಗೆ ಐದು ವರ್ಷದ ಅವಧಿ ಇರುತ್ತದೆ. ಮೊದಲ ಒಂದು ವರ್ಷ ಮೂಲಧನ ಪಾವತಿಗೆ ಮೋರಟೋರಿಯಂ ಸೌಲಭ್ಯ ಕೂಡ ನೀಡಲಾಗಿದೆ. 2026ರ ಮಾರ್ಚ್ 31ರೊಳಗೆ ಸ್ಟ್ಯಾಂಡರ್ಡ್ ಅಕೌಂಟ್ ಹೊಂದಿರುವ ಸಂಸ್ಥೆಗಳು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಸಾಲ ಮಂಜೂರಾತಿ ಪ್ರಕ್ರಿಯೆ 2027ರ ಮಾರ್ಚ್ 31ರವರೆಗೆ ಮುಂದುವರಿಯಲಿದೆ.
ಈ ಯೋಜನೆಯ ಮತ್ತೊಂದು ವಿಶೇಷತೆ ಎಂದರೆ ಯಾವುದೇ ಗ್ಯಾರಂಟಿ ಶುಲ್ಕ ವಿಧಿಸಲಾಗುವುದಿಲ್ಲ. ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಮೂಲಕ ಉದ್ಯಮಿಗಳಿಗೆ ತ್ವರಿತ ಆರ್ಥಿಕ ನೆರವು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದರಿಂದ ಉದ್ಯೋಗ ನಷ್ಟ ಕಡಿಮೆಯಾಗುವುದು ಮಾತ್ರವಲ್ಲದೆ, ದೇಶೀಯ ಉತ್ಪಾದನಾ ಚಟುವಟಿಕೆಗಳು ನಿರಂತರವಾಗಿ ಸಾಗಲು ಸಹಕಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.



