ಪುನೀತ್ ಮಾಲೆ ಹಾಕುವವರ ವಿರುದ್ಧ ನಟ ಪ್ರಥಮ್‌ ಕಿಡಿಕಾರಿದ್ಯಾಕೆ ?

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ಬಳಿಕ ಅವರು ಮಾಡುತ್ತಿದ್ದ ಹಲವಾರು ಒಳ್ಳೆ ಕೆಲಸಗಳು ಬೆಳಕಿಗೆ ಬಂದವು. ಅವರು ಬದುಕಿದ್ದಾಗ ಯಾರಿಗೂ ಗೊತ್ತಾಗದ ಹಾಗೆ ಮಾಡಿಕೊಂಡು ಬಂದಿದ್ದ ಈ ಸಹಾಯಗಳಿಗೆ ಗೌರವ ಸಲ್ಲಿಸಿದ ರಾಜ್ಯ ಸರಕಾರವೇ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇನ್ನು ಈ ಹಿಂದೆ ಕೇವಲ ಅಭಿಮಾನಿಗಳಾಗಿ ಪುನೀತ್ ರಾಜ್‌ಕುಮಾರ್ (Actor Pratham – Puneeth Rajkumar Fans)‌ ಅವರನ್ನು ಇಷ್ಟಪಡುತ್ತಿದ್ದವರು ಇಷ್ಟೆಲ್ಲಾ ವಿಷಯಗಳು ಬಹಿರಂಗವಾದ ಬಳಿಕ ಅಪ್ಪು ಅವರನ್ನು ದೇವರು ಎಂದೇ ಆರಾಧಿಸಲಾರಂಭಿಸಿದರು. ಇನ್ನು ಸಾಮಾನ್ಯ ಸಿನಿ ಪ್ರೇಕ್ಷಕನಿಗೂ ಸಹ ಪುನೀತ್ ರಾಜ್‌ಕುಮಾರ್ ಅವರ ಮೇಲೆ ಇದ್ದ ಗೌರವ ದುಪ್ಪಟ್ಟಾಯಿತು. ಬಹುತೇಕರು ಇಂತಹ ಒಳ್ಳೆಯ ವ್ಯಕ್ತಿಯ ಫೋಟೊ ಮನೆಯಲ್ಲಿರಬೇಕು ಎಂದು ಪುನೀತ್ ರಾಜ್‌ಕುಮಾರ್ ಫೋಟೊಗಳನ್ನು ತಂದು ಮನೆಯಲ್ಲಿಟ್ಟುಕೊಂಡರು. ದೇವರ ಫೋಟೊ ಮಾರಾಟ ಮಾಡುವ ಅಂಗಡಿಗಳಲ್ಲಿ ದೇವರ ಫೋಟೊಗಳ ಜತೆಗೆ ಪುನೀತ್ ರಾಜ್‌ಕುಮಾರ್ ಫೋಟೊಗಳನ್ನೂ ಸಹ ಮಾರಾಟ ಮಾಡಲಾರಂಭಿಸಿದರು.

ಹಲವು ಊರುಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿಗಳನ್ನು ನಿರ್ಮಿಸಿ ಗೌರವ ಸಲ್ಲಿಸಲಾಯಿತು. ಇನ್ನು ಪುನೀತ್ ಪುಣ್ಯಭೂಮಿಗೆ ಪ್ರತಿದಿನವೂ ದೊಡ್ಡ ಸಂಖ್ಯೆಯಲ್ಲಿ ಜನರು ಬಂದು ಕೈಮುಗಿದು ತೆರಳಲು ಆರಂಭಿಸಿದರು. ಹೀಗೆ ಪುನೀತ್ ರಾಜ್‌ಕುಮಾರ್ ದೇವತಾ ಮನುಷ್ಯ ಹಾಗೂ ದೇವರೆಂದೇ ಕರೆಯಲ್ಪಟ್ಟರು. ಕೆಲವರು ಪುನೀತ್ ರಾಜ್‌ಕುಮಾರ್ ಅವರನ್ನು ನಟರನ್ನಾಗಿ ಮಾತ್ರ ನೋಡಿ ದೇವರೆಂದೂ ಮನುಷ್ಯನಾಗಲಾರ ಎಂದು ಎಷ್ಟೇ ಕಾಮೆಂಟ್ ಹಾಕಿದ್ದೂ ಸಹ ಉಂಟು. ಈ ಸಾಲಿಗೆ ಇದೀಗ ನಟ ಒಳ್ಳೆ ಹುಡ್ಗ ಪ್ರಥಮ್ ಸಹ ಸೇರಿಕೊಂಡಿದ್ದಾರೆ. ಕಲಾವಿದರು ಕಲಾವಿದರೇ, ದೇವರು ದೇವರೇ ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇಷ್ಟು ದಿನಗಳ ಕಾಲ ಅಪ್ಪು ಬಾಸ್ ಎನ್ನುತ್ತಿದ್ದ ಪ್ರಥಮ್ ಈಗ ಈ ರೀತಿ ವಿರೋಧ ವ್ಯಕ್ತಪಡಿಸಲು ಕಾರಣವೂ ಸಹ ಇದೆ.

ಹೌದು, ಹೊಸಪೇಟೆಯ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅಯ್ಯಪ್ಪ ಸ್ವಾಮಿ ಮಾದರಿಯಲ್ಲಿಯೇ ಮಾರ್ಚ್ 1ರಿಂದ 17ರವರೆಗೆ ಪುನೀತ ಮಾಲೆ ಧರಿಸಿ ಪುನೀತ್ ರಾಜ್‌ಕುಮಾರ್ ಫೋಟೊ ಇಟ್ಟು ಪೂಜೆ ಸಲ್ಲಿಸಲು ಯೋಜನೆ ಹಾಕಿಕೊಂಡಿದ್ದಾರೆ. ಅಲ್ಲದೇ ರಾಜ್ಯದಲ್ಲಿನ ಅಪ್ಪು ಅಭಿಮಾನಿಗಳು ಈ ರೀತಿ ಮಾಲೆ ಹಾಕಿಕೊಳ್ಳಬಹುದು ಎಂದು ಹಲವು ನಿಯಮಗಳನ್ನೂ ಸಹ ಪ್ರಕಟಿಸಿದ್ದರು. ಈ ಪ್ರಕಟಣೆ ವೈರಲ್ ಆದ ಬೆನ್ನಲ್ಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಟರಿಗೆ ಗೌರವ ನೀಡಿ ತಪ್ಪಿಲ್ಲ, ಆದರೆ ಈ ರೀತಿಯ ಅತಿರೇಕದ ಅಚರಣೆ ಬೇಡ ಎಂದಿದ್ರು. ಇದೀಗ ಪ್ರಥಮ್ ಸಹ ಇದೇ ವಿಷಯದ ಬಗ್ಗೆ ಟ್ವೀಟ್ ಮಾಡಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Tagaru movie : ಸ್ಯಾಂಡಲ್‌ವುಡ್‌ ನಟ ಶಿವ ರಾಜ್‌ಕುಮಾರ್‌ ಅಭಿನಯದ ‘ಟಗರು’ ಸಿನಿಮಾಕ್ಕೆ 5 ವರ್ಷ ಸಂಭ್ರಮ

ಇದನ್ನೂ ಓದಿ : Sourav Ganguly biopic : ಸೌರವ್ ಗಂಗೂಲಿ ಬಯೋಪಿಕ್ ಸಿನಿಮಾಕ್ಕೆ ಹೀರೋ ಸಿಕ್ಕಾಯ್ತು : ಶೀಘ್ರದಲ್ಲೇ ಸಿನಿಮಾ ಘೋಷಣೆ

ಇದನ್ನೂ ಓದಿ : Ullas School of Cinemas : ‘ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ’ ಅದ್ದೂರಿ ಚಾಲನೆ : ಶುಭ ಹಾರೈಸಿದ ಗಣ್ಯರು

ನಟ ಪ್ರಥಮ್‌ ತಮ್ಮ ಟ್ವೀಟರ್‌ನಲ್ಲಿ, “ದೇವರ ಮೇಲೆ ಭಕ್ತಿ ಇರಲಿ! ಕಲಾವಿದರ ಮೇಲೆ ಪ್ರೀತಿ,ಅಭಿಮಾನವಿರಲಿ…! ಶಬರಿಮಲೆಗೆ ಹೋಗೋದು ಅಯ್ಯಪ್ಪನಲ್ಲಿ ಶರಣಾಗೋಕೆ…! ಬಹಳ ಶಿಸ್ತುಗಳನ್ನ ಪಾಲಿಸಿ ಶ್ರದ್ಧಾಭಕ್ತಿಗಳಿಂದ ಮಾಲೆ ಧಾರಣೆ ಮಾಡಬೇಕು…! ಕಲಾವಿದರನ್ನ ಕಲಾವಿದರಾಗಿರೋಕೆ ಬಿಡಿ! ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು!! ದೇವರು-ದೇವರೇ…ಕಲಾವಿದರು-ಕಲಾವಿದರೇ!” ಎಂದು ಟ್ವೀಟ್ ಮಾಡಿರುವ ಪ್ರಥಮ್ ಪುನೀತ ಮಾಲೆ ಧರಿಸುವ ಯೋಜನೆ ಹಾಕಿದವರ ವಿರುದ್ಧ ಕಿಡಿಕಾರಿದ್ದಾರೆ. ಸದ್ಯ ಪ್ರಥಮ್ ಮಾಡಿರುವ ಈ ಟ್ವೀಟ್‌ಗೂ ಸಹ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವರು ಪ್ರಥಮ್ ಹೇಳಿದ್ದು ಸರಿ ಇದೆ ಎಂದರೆ, ಇನ್ನೂ ಕೆಲವರು ಅವರವರ ಇಷ್ಟ ಹಾಗೂ ಆಚರಣೆಗಳನ್ನು ಪ್ರಶ್ನಿಸುವ, ತಪ್ಪು ಎನ್ನುವ ಹಕ್ಕು ಯಾರಿಗೂ ಇಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

Actor Pratham – Puneeth Rajkumar Fans: Actor Pratham outrage against Puneeth Male?

Comments are closed.