Rakshitha Shety: ಬಿಗ್ ಬಾಸ್ ಗೆಲ್ತಾರಾ ರಕ್ಷಿತಾ ಶೆಟ್ಟಿ; ʼಪುಟ್ಟಿʼಗೆ ಉಂಟಾ ಗಿಲ್ಲಿ ಮೇಲೆ ಕ್ರಶ್?
Rakshitha Shetty Gilli Love Story: ಬಿಗ್ ಬಾಸ್ ಸೀಸನ್ 12ರ ಅಂತಿಮ ಘಟ್ಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು ಮತ್ತು ಧನುಷ್ ಅವರಂತಹ ಪ್ರಬಲ ಸ್ಪರ್ಧಿಗಳ ನಡುವೆ ರಕ್ಷಿತಾ ಶೆಟ್ಟಿ ತಮ್ಮ ವಿಭಿನ್ನ ವ್ಯಕ್ತಿತ್ವದ ಮೂಲಕ ಗಮನ ಸೆಳೆದಿದ್ದಾರೆ. ವ್ಲಾಗಿಂಗ್ ಜಗತ್ತಿನ ಈ ‘ಪುಟ್ಟಿ’ ಬಿಗ್ ಬಾಸ್ ಮನೆಯಲ್ಲಿ ಕೇವಲ ಸ್ಪರ್ಧಿಯಾಗಿರದೆ, ಯುವ ಸಮುದಾಯಕ್ಕೆ ಮಾದರಿಯಾಗಿ ಹೊರಹೊಮ್ಮಿದ್ದಾರೆ.
ರಕ್ಷಿತಾ ಅವರ ಬಿಗ್ ಬಾಸ್ ಪಯಣ ಕೇವಲ ಆಟಕ್ಕೆ ಸೀಮಿತವಾಗಿರಲಿಲ್ಲ. ಬೆಳಿಗ್ಗೆ ಹಾಡು ಪ್ಲೇ ಆದ ತಕ್ಷಣ ಸ್ಟೆಪ್ ಹಾಕುವ ಅವರ ಎನರ್ಜಿ ಮತ್ತು ಮನೆಯೊಳಗೆ ನೀಡುತ್ತಿದ್ದ ಮನರಂಜನೆ ವೀಕ್ಷಕರಿಗೆ ಇಷ್ಟವಾಗಿತ್ತು. ಇನ್ನು ಟಾಸ್ಕ್ ವಿಚಾರಕ್ಕೆ ಬಂದರೆ, ತನ್ನ ವಯಸ್ಸನ್ನೂ ಮೀರಿ ಅತ್ಯಂತ ಚುರುಕಾಗಿ ಆಟವಾಡಿ ‘ಆಟದಲ್ಲೂ ಸೈ’ ಎಂಬುದನ್ನು ನಿರೂಪಿಸಿದ್ದಾರೆ.
ಆರಂಭದಲ್ಲಿ ಅಶ್ವಿನಿ ಮತ್ತು ಜಾಹ್ನವಿ ಅವರೊಂದಿಗೆ ಕಿರಿಕ್ ಮಾಡಿಕೊಂಡು ಸುದ್ದಿಯಾಗಿದ್ದ ರಕ್ಷಿತಾ, ಬಳಿಕ ಅಶ್ವಿನಿ ಅವರ ಕ್ಷಮೆಯನ್ನೂ ಕೇಳಿದ್ದರು. ಇನ್ನು ಧ್ರುವಂತ್ ಜೊತೆ ಸೀಕ್ರೆಟ್ ರೂಮ್‌ಗೆ ಹೋದಾಗ ಅಲ್ಲಿ ಪಟ್ಟ ಪಾಡು ಮತ್ತು ಧ್ರುವಂತ್ ಅವರೊಂದಿಗಿನ ವಾಗ್ವಾದಗಳು ಬಿಗ್ ಬಾಸ್ ಇತಿಹಾಸದ ಹೈಲೈಟ್ ಕ್ಷಣಗಳು. ಅಲ್ಲಿಯೂ ಛಲ ಬಿಡದೆ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದ್ದರು.
ಮನೆಯೊಳಗೆ ಗಿಲ್ಲಿ ನಟ ಮತ್ತು ರಕ್ಷಿತಾ ನಡುವಿನ ಒಡನಾಟ ಭಾರೀ ಚರ್ಚೆಗೆ ಕಾರಣವಾಗಿತ್ತು. “ಗಿಲ್ಲಿಯಂತಹ ಬಾಯ್‌ಫ್ರೆಂಡ್ ಬೇಕು” ಎಂದು ಹೇಳಿದ್ದ ರಕ್ಷಿತಾ, ನಂತರ ವೀಕೆಂಡ್‌ನಲ್ಲಿ “ಗಿಲ್ಲಿಗೆ ನನ್ನ ಪತಿ ಅಥವಾ ಬಾಯ್‌ಫ್ರೆಂಡ್ ಆಗುವ ಅರ್ಹತೆ ಇಲ್ಲ” ಎಂದು ನೇರವಾಗಿ ಹೇಳುವ ಮೂಲಕ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದರು. ಇದು ಗಿಲ್ಲಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದರೂ, ರಕ್ಷಿತಾ ಅವರ ನಿಷ್ಠುರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿತ್ತು.
Gilli Nata Bigg Boss Win: ಗಿಲ್ಲಿ ನಟ ಬಿಗ್ ಬಾಸ್ ಗೆದ್ರೆ ಈ ಸೇವೆ ಫ್ರೀ!
ರಕ್ಷಿತಾ ಅವರ ಪಯಣದ ಅತ್ಯಂತ ಭಾವನಾತ್ಮಕ ಕ್ಷಣವೆಂದರೆ ಅದು ರಘು ಅವರಿಗೆ ತಮ್ಮ ‘ಉತ್ತಮ’ ಮೆಡಲ್ ನೀಡಿದ್ದು. “ನನಗೆ ಒಮ್ಮೆಯೂ ಉತ್ತಮ ಸಿಕ್ಕಿಲ್ಲ” ಎಂದು ಬೇಸರ ಮಾಡಿಕೊಂಡಿದ್ದ ರಘು ಅವರ ಮನಸ್ಸನ್ನು ಅರಿತು, ದೊಡ್ಡ ಗುಣ ತೋರಿದ್ದ ರಕ್ಷಿತಾ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇದೇ ಕಾರಣಕ್ಕೆ ಕಿಚ್ಚ ಸುದೀಪ್ ಅವರು, “ತಪ್ಪುಗಳನ್ನು ತಿದ್ದಿಕೊಂಡು, ಮಾನವೀಯತೆ ತೋರಿದ ರಕ್ಷಿತಾ ಅವರಿಗೆ ಈ ವಾರದ ಕಿಚ್ಚನ ಚಪ್ಪಾಳೆ” ಎಂದು ಗೌರವಿಸಿದ್ದರು.
ಒಟ್ಟಾರೆಯಾಗಿ, ಜಗಳ, ಪ್ರೀತಿ, ಆಟ ಮತ್ತು ಮಾನವೀಯತೆಯ ಮಿಶ್ರಣವಾಗಿರುವ ರಕ್ಷಿತಾ ಶೆಟ್ಟಿ ಅವರ ಪಯಣ ಫಿನಾಲೆಯಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.



