ಪುತ್ತೂರಿನ ಜಿ.ಎಲ್​ ಮಾಲ್​ನಲ್ಲಿ ದಿ ಕೇರಳ ಸ್ಟೋರಿ 2 ಉಚಿತ ಪ್ರದರ್ಶನ : ಅನ್ಯಧರ್ಮೀಯರಿಂದ ಮಾಲ್​ಗೆ ಬಹಿಷ್ಕಾರ

The Kerala Story 2: ಪುತ್ತೂರಿನ ಜಿ.ಎಲ್​ ಮಾಲ್​ನಲ್ಲಿ ಇಂದು 16 ವರ್ಷದಿಂದ 22 ವರ್ಷದ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸಿನಿಮಾ ಪ್ರದರ್ಶನ ಆಯೋಜಿಸಲಾಗಿತ್ತು.

The Kerala Story 2: ದಿ ಕೇರಳ ಸ್ಟೋರಿ 2 ಸಿನಿಮಾ ಬಿಡುಗಡೆಯಾದಾಗಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಲವ್​ ಜಿಹಾದ್​ ವಿರುದ್ಧ ಜಾಗೃತಿ ಮೂಡಿಸುವ ಸಿನಿಮಾ ಇದಾಗಿದ್ದು ಈ ಸಿನಿಮಾವನ್ನು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಉಚಿತ ಪ್ರದರ್ಶನದ ಮೂಲಕ ಯುವತಿಯರಿಗೆ ತೋರಿಸಲಾಯಿತು. ಪುತ್ತೂರಿನ ಜಿ.ಎಲ್​ ಮಾಲ್​ನಲ್ಲಿ 16 ವರ್ಷದಿಂದ 22 ವರ್ಷದ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸಿನಿಮಾ ಪ್ರದರ್ಶನ ಆಯೋಜಿಸಲಾಗಿತ್ತು.

ಸೀತಾ ಪರಿವಾರ ಸಂಘಟನೆಯಿಂದ ಈ ಉಚಿತ ಸಿನಿಮಾ ಪ್ರದರ್ಶನ ಆಯೋಜಿಸಲಾಗಿದ್ದು ಇದಕ್ಕೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೆಂಬಲ ನೀಡಿದರು. ನಿನ್ನೆ ಸಂಜೆ ಮೂರು ಗಂಟೆಗೆ ಆಯೋಜಿಸಲಾಗಿದ್ದ ಈ ಉಚಿತ ಸಿನಿಮಾ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಆದರೆ ಈ ಕಾರ್ಯಕ್ರಮ ಆಯೋಜನೆ ಬಳಿಕ ಇದೀಗ ಪುತ್ತೂರಿನ ಜಿ.ಎಲ್​ ಮಾಲ್​ಗೆ ಹೊಸ ಸಂಕಷ್ಟ ಎದುರಾಗಿದೆ. ಹಿಂದೂಪರ ಕಾರ್ಯಕ್ರಮ ಆಯೋಜನೆ ಮಾಡಿದ ಹಿನ್ನೆಲೆಯಲ್ಲಿ ಮುಸ್ಲಿಮರು ಯಾರೂ ಜಿ.ಎಲ್​ ಮಾಲ್​ಗೆ ತೆರಳಬೇಡಿ ಎಂದು ಧರ್ಮ ದಂಗಲ್​ ಶುರು ಮಾಡಲಾಗಿದೆ. ಇನ್ಮುಂದೆ ಜಿ.ಎಲ್​ ಮಾಲ್​ಗೆ ತೆರಳುವ ಮುಸ್ಲಿಂ ಯುವತಿಯರೇ ಗಮನಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಬಿಡಲಾಗುತ್ತಿದೆ.
ಇನ್ನು ಇದೇ ವಿಚಾರವಾಗಿ ಹಿಂದೂ ಮುಖಂಡ ಅರುಣ್​ ಪುತ್ತಿಲ ಮಾತನಾಡಿದ್ದು, ಸಿನಿಮಾ ಬುಕ್ಕಿಂಗ್​ಗಾಗಿ ಪೋಸ್ಟರ್​ಗಳಲ್ಲಿ ಮಹಿಳೆಯೊಬ್ಬರ ದೂರವಾಣಿ ಸಂಖ್ಯೆ ನೀಡಿದ್ದೆವು. ಆದರೆ ಈ ನಂಬರಿಗೆ ಸ್ಥಳೀಯ ಮತಾಂಧ ಶಕ್ತಿಗಳು ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ. ವಿದೇಶಗಳಿಂದಲೂ ಕೂಡ ಬೆದರಿಕೆಗಳು ಬಂದಿವೆ. ಈ ಬಗ್ಗೆ ಪೊಲೀಸ್​ ಇಲಾಖೆ ಗಮನಿಸಬೇಕಿದೆ. ಇಂತಹ ಬೆದರಿಕೆಗಳಿಗೆ ನಾವು ಬಗ್ಗುವ ಮಾತೇ ಇಲ್ಲ. ಹಿಂದೂಪರ ಜಾಗೃತಿ ಕಾರ್ಯಗಳು ಇದೇ ರೀತಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ: ಹೊಸ ದಿನಾಂಕ ಘೋಷಣೆ

ದಿ ಕೇರಳ ಸ್ಟೋರಿ 2 ಸಿನಿಮಾ ಕಾಮಾಖ್ಯ ನಾರಾಯಣ ಸಿಂಗ್​ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದು ಫೆಬ್ರವರಿ 27ರಿಂದ ಸಿನಿ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ವಿಪುಲ್​ ಅಮೃತ್​ಲಾಲ್​ ಶಾ ಅವರ ಸನ್​ಶೈನ್​ ಪಿಕ್ಚರ್ಸ್​ ಸಂಸ್ಥೆ ಈ ಸಿನಿಮಾ ನಿರ್ಮಾಣ ಕಾರ್ಯ ಮಾಡಿದೆ. ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಹಾಗೂ ಐಶ್ವರ್ಯಾ ಓಜಾ ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅನ್ಯಧರ್ಮೀಯರ ಪ್ರೇಮಪಾಶಕ್ಕೆ ಬೀಳುವ ಈ ಮೂವರು ಹಿಂದೂ ಯುವತಿಯರು ಅನುಭವಿಸುವ ವಂಚನೆ ಹಾಗೂ ಹಿಂಸೆಯ ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಹೈಕೋರ್ಟ್​ನಿಂದ ತಡೆಯಾಜ್ಞೆ ತರಲಾಗಿತ್ತು. ಆದರೆ ಕಾನೂನು ಸಮರದಲ್ಲಿ ಜಯಗಳಿಸಿರುವ ದಿ ಕೇರಳ ಸ್ಟೋರಿ 2 ಕೊನೆಗೂ ಪ್ರದರ್ಶನ ಕಾಣುತ್ತಿದೆ. ಆದರೆ ಬಾಕ್ಸಾಫೀಸಿನಲ್ಲಿ ಹೇಳಿಕೊಳ್ಳುವಂತಹ ಗಳಿಕೆ ಮಾಡಿಲ್ಲ ಎಂದು ವರದಿಯಾಗಿದೆ.

 

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories