ಸಂಭಾವನೆಯಲ್ಲಿ ರಜನಿಕಾಂತ್ ಹಿಂದಿಕ್ಕಿದ ಯುವನಾಯಕ: ನೆಕ್ಸ್ಟ್ ಮೂವಿಗೆ ವಿಜಯ್ ಸಂಭಾವನೆ 120 ಕೋಟಿ

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ತಮಿಳು ನಟ ವಿಜಯ್ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯೋ ಸ್ಟಾರ್ ಅನ್ನೋ ಪಟ್ಟಕ್ಕೇರಲಿದ್ದಾರೆ. ಸದ್ಯ ಬಿಗಿಲ್ ಮತ್ತು ಮಾಸ್ಟರ್ ಸಿನಿಮಾದ ಬಳಿಕ ಬೀಸ್ಟ್ ನಲ್ಲಿ ಬ್ಯುಸಿಯಾಗಿರೋ ವಿಜಯ್ ಮುಂದಿನ ಸಿನಿಮಾಗೆ  120 ಕೋಟಿ ಸಂಭಾವನೆಗೆ ಡಿಮ್ಯಾಂಡ್ ಮಾಡಿದ್ದಾರಂತೆ.


ತೆಲುಗಿನ ಮಹರ್ಷಿ ಸಿನಿಮಾ  ನಿರ್ದೇಶಕ ವಂಶಿ ಪೈಡಿಪಲ್ಲಿ ಜೊತೆಗೆ  ವಿಜಯ್ ಮುಂದಿನ ಚಿತ್ರಕ್ಕೆ ಸಹಿ ಹಾಕಿದ್ದು, ವಿಜಯ್ 66ನೇ ಚಿತ್ರಕ್ಕೆ ವಂಶಿ ಪೈಡಿಪಲ್ಲಿ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ.  ವಿಜಯ್ ಮತ್ತು ವಂಶಿ ಪೈಡಿಪಲ್ಲಿ ಕಾಂಬಿನೇಶನ್‌ನಲ್ಲಿ ಮೂಡಿಬರುವ  ದಳಪತಿ ಇನ್ನೂ ಹೆಸರಿಡದ   ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹಾಕಲಿದ್ದು, ಚಿತ್ರ ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಮೂಡಿ ಬರಲಿದೆ.

ತಮ್ಮ 66  ಚಿತ್ರಕ್ಕೆ ವಿಜಯ್ 120 ಕೋಟಿ ಸಂಭಾವನೆ ಪಡೆಯಲಿದ್ದು, ಇದು ದಕ್ಷಿಣ ಭಾರತದ ಸಿನಿಮಾ ಇತಿಹಾಸದಲ್ಲೇ ನಾಯಕನಿಗೆ ನೀಡಲಾಗುತ್ತಿರುವ ಅತಿ ಹೆಚ್ಚು ಸಂಭಾವನೆ ಎನ್ನಲಾಗಿದೆ. ಈ ಹಿಂದೆ ದರ್ಬಾರ್ ಸಿನಿಮಾಗಾಗಿ ರಜನಿಕಾಂತ್ 90 ಕೋಟಿ ಸಂಭಾವನೆ ಪಡೆದಿದ್ದರು.

ಈಗ ಈ ದಾಖಲೆಯನ್ನು ವಿಜಯ್ ಮುರಿಯಲಿದ್ದಾರೆ. ಈಗಾಗಲೇ ಬೀಸ್ಟ್ ಸಿನಿಮಾಗಾಗಿ ವಿಜಯ್ 100 ಕೋಟಿ ಸಂಭಾವನೆ ಪಡೆದಿದ್ದು, ಮುಂದಿನ ಚಿತ್ರಕ್ಕೆ ತಮ್ಮ ಸಂಭಾವನೆಯನ್ನು ಮತ್ತೆ 20 ಕೋಟಿ ಏರಿಸಿಕೊಂಡಿದ್ದಾರಂತೆ. ಇದಲ್ಲದೇ ತಮ್ಮ 67 ಸಿನಿಮಾಗೂ ಈಗಲೇ ಸಿದ್ಧತೆ ನಡೆಸಿದ್ದು, ಯುವ ನಿರ್ದೇಶಕ ದೇಸಿಂಗ್ ಪೆರಿಸಾಮಿ ಜೊತೆಗೆ ಒಂದಾಗಲಿದ್ದಾರೆ ಎಂಬ ಸುದ್ದಿಯೂ ಕಾಲಿವುಡ್-ಟಾಲಿವುಡ್ ನಲ್ಲಿ ಹರಿದಾಡುತ್ತಿದೆ.

Comments are closed.