ಮಣಿಪಾಲ ಆಟೋ ಚಾಲಕರ ನಿದ್ದೆ ಕಸಿದ ಆನ್ಲೈನ್ ಅಪ್ಲಿಕೇಶನ್ಗಳು : ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ!
ರ್ಯಾಪಿಡೋ, ಮಂಗೋ, ನಮ್ಮ ಯಾತ್ರಿಯಂತಹ ಅಪ್ಲಿಕೇಶನ್ಗಳು ಈಗ ಕೇವಲ ರಾಜ್ಯ ರಾಜಧಾನಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಇತರೆ ಪ್ರಮುಖ ನಗರಗಳ ಕಡೆಗೂ ಈ ಅಪ್ಲಿಕೇಶನ್ಗಳು ವ್ಯಾಪಿಸಿದ್ದು ಸ್ಥಳೀಯ ಆಟೋ ಚಾಲಕರ ಹೊಟ್ಟೆಗೆ ತಣ್ಣೀರು ಬಟ್ಟೆ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮಣಿಪಾಲದ ರಿಕ್ಷಾ ಚಾಲಕರು ಮಣಿಪಾಲ ಪೊಲಿಸ್ ಠಾಣೆಯ ಮುಂಭಾಗದಲ್ಲಿ ಹಾಗೂ ಆರ್ಟಿಒ ಕಚೇರಿಗಳಿಗೆ ತೆರಳಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಮನೆಯಲ್ಲಿಯೇ ಕುಳಿತು ಆಟೋ ಬುಕ್ ಮಾಡಿ ನಮ್ಮಿಷ್ಟದ ಜಾಗಕ್ಕೆ ತೆರಳುವುದು ಅತ್ಯಂತ ಸುಲಭಕರ ವಿಧಾನವಾಗಿರುವ ಹಿನ್ನೆಲೆಯಲ್ಲಿ ಅನೇಕರು ಮೊಬೈಲ್ ಅಪ್ಲಿಕೇಶನ್ಗಳನ್ನೇ ನೆಚ್ಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿಯ ಆಟೋಗಳು ಮಣಿಪಾಲ ಭಾಗದಲ್ಲಿ ಓಡಾಡುತ್ತಿದ್ದು ದಿನಗಟ್ಟಲೇ ಬಿಸಿಲಿನಲ್ಲಿ ಆಟೋ ನಿಲ್ದಾಣದಲ್ಲಿ ಗ್ರಾಹಕರಿಗಾಗಿ ಕಾಯುತ್ತಿರುವ ಮಣಿಪಾಲ ರಿಕ್ಷಾ ಚಾಲಕರಿಗೆ ನಿರಾಶೆಯೊಂದನ್ನು ಬಿಟ್ಟು ಮತ್ತೇನೂ ಸಿಗುತ್ತಿಲ್ಲ.
ಮಣಿಪಾಲ ವ್ಯಾಪ್ತಿಯಲ್ಲಿ ಏನಿಲ್ಲವೆಂದರೂ 20ಕ್ಕೂ ಅಧಿಕ ಆಟೋ ನಿಲ್ದಾಣವಿದ್ದು ಸಾವಿರಾರು ಆಟೋ ಚಾಲಕರು ತಮ್ಮನ್ನು ತಾವು ನೋಂದಾಯಿಸಿಕೊಂಡಿದ್ದಾರೆ. ಆದರೆ ಈ ಮೊಬೈಲ್ ಅಪ್ಲಿಕೇಶನ್ಗಳ ಹಾವಳಿಯಿಂದ ನಮಗೆ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂಬುದು ಈ ಭಾಗದ ಚಾಲಕರ ಅಳಲಾಗಿದೆ.
ಕಾಲಕ್ಕೆ ತಕ್ಕಂತೆ ಬದಲಾಗಬೇಕು ನಿಜ. ಆದರೆ ಈಗ ಮೊಬೈಲ್ ಅಪ್ಲಿಕೇಶನ್ಗಳ ಮೂಲಕ ಯಾವುದೇ ಆಟೋ ಚಾಲಕ ಸೇವೆ ಸಲ್ಲಿಸಬಹುದು. ಆದರೆ ಮುಂದಿನ ದಿನಗಳಲ್ಲಿ ಈ ಅಪ್ಲಿಕೇಶನ್ಗಳು ತಮ್ಮದೇ ಸ್ವಂತ ಆಟೋ ಖರೀದಿಸಿ ಅದಕ್ಕೊಂದು ಚಾಲಕರನ್ನು ನೇಮಿಸಿ ರಸ್ತೆಗೆ ಇಳಿಸಿದರೆ ಆಗ ನಾವೆಲ್ಲಿ ಹೋಗಬೇಕು ಎನ್ನುವುದು ಮಣಿಪಾಲ ಆಟೋ ಚಾಲಕರ ಆತಂಕಕ್ಕೆ ಕಾರಣವಾಗಿರುವ ವಿಷಯವಾಗಿದೆ.
ಇದನ್ನೂ ಓದಿ: ಕೆಎಸ್ಆರ್ಟಿಸಿ ಚಾಲಕರಿಗೆ ಗುಡ್ ನ್ಯೂಸ್: ದುಪ್ಪಟ್ಟಾಯ್ತು ಮಾಸಿಕ ಭತ್ಯೆ ಹಾಗೂ ಪುರಸ್ಕಾರ ದರ
ಈ ಹಿಂದೆ ದಿನಗಟ್ಟಲೇ ಉಚಿತವಾಗಿ ಮೊಬೈಲ್ ಡೇಟಾ ಬಳಕೆ ಮಾಡಬಹುದಾಗಿತ್ತು. ಆದರೆ ಕಾಲ ಕಳೆದಂತೆ ಜನರಿಗೆ ಅದು ಅಭ್ಯಾಸವಾದ ಬಳಿಕ ಈಗ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಈಗ ಜನ ಜೇಬಿಗೆ ಕುತ್ತು ಬಂದರೂ ಹಿಡಿದ ಅಭ್ಯಾಸ ಬಿಡಲಾಗದೇ ಹಣ ಕಟ್ಟಿ ಡೇಟಾ ಬಳಕೆ ಮಾಡುತ್ತಿದ್ದಾರೆ. ಅದರಂತೆಯೇ ಮೊಬೈಲ್ ಮೂಲಕ ಆಟೋ ರೈಡ್ ಬುಕ್ ಮಾಡುವುದು ಜನರಿಗೆ ಕರಗತವಾದ ಬಳಿಕ ಈ ಕಂಪನಿಗಳು ತಮ್ಮದೇ ಸ್ವಂತ ಆಟೋ ಚಾಲಕರನ್ನು ಸೇವೆಗೆ ನಿಯೋಜಿಸುವುದಿಲ್ಲ ಎಂಬುದಕ್ಕೆ ಯಾವ ಗ್ಯಾರಂಟಿ ? ಆಗ ಸಾಲ ಸೋಲ ಮಾಡಿ ಆಟೋ ಖರೀದಿಸಿರುವ ನಾವು ಎಲ್ಲಿಗೆ ಹೋಗಬೇಕು ಎಂದು ಮಣಿಪಾಲ ಆಟೋ ಚಾಲಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಸ್ಥಿತಿ ಕೈಮೀರುವ ಮುನ್ನವೇ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಂಡು ಸ್ಥಳೀಯ ಆಟೋ ಚಾಲಕರ ಬಾಳು ಬೀದಿಗೆ ಬರದಂತೆ ನೋಡಿಕೊಳ್ಳಬೇಕಿದೆ.



