“E Guru” training: ಕುಂದಾಪುರ: ಪಿಯು ವಿದ್ಯಾರ್ಥಿಗಳಿಗೆ “ಇ ಗುರು” ತರಬೇತಿ

ಕುಂದಾಪುರ: (“E Guru” training) ಗ್ರಾಮಾಂತರ ಪ್ರದೇಶ ಹಾಗೂ ಆರ್ಥಿಕವಾಗಿ ಹಿಂದುಳಿದ ಸರಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌, ಜೆಇಇ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ “ಪಿಸಿಎಂ ಇ ಗುರು’ ಎಂಬ ವಿನೂತನ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್‌ ಅನುಷ್ಠಾನ ಮಾಡಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಂತಹ ಯೋಜನೆ ಆರಂಭಿಸಲಾಗಿದೆ.

ಮೆಡಿಕಲ್‌, ಎಂಜಿನಿಯರಿಂಗ್‌ ಮೊದಲಾದ ವೃತ್ತಿಪರ ಶಿಕ್ಷಣಕ್ಕೆ ಹೋಗುವವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಖಾಸಗಿ ಕಾಲೇಜುಗಳಲ್ಲಿ 40 ಸಾವಿರ ರೂ.ಗಳಿಂದ ಆರಂಭವಾಗಿ ಕೆಲವು ಲಕ್ಷ ರೂ. ವರೆಗೆ ಶುಲ್ಕ, ಪ್ರತ್ಯೇಕ ತರಬೇತಿ ಶುಲ್ಕ ವಸೂಲಿ ಮಾಡಲಾಗುತ್ತದೆ. ಹಣವಂತರಿಗೆ ಇಂತಹ ತರಬೇತಿ ಪಡೆದು ಪರೀಕ್ಷೆಯಲ್ಲಿ ರ್‍ಯಾಂಕ್‌ ಗಳಿಸಿ ಸರಕಾರಿ ಕೋಟಾದಡಿ ಸೀಟು ಲಭ್ಯವಾಗುತ್ತದೆ. ಆದರೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ, ಪರೀಕ್ಷೆ ಹೇಗೆ ಎದುರಿಸಬೇಕು ಎನ್ನುವ ಮಾಹಿತಿಯ ಕೊರತೆ ಇದ್ದು, ಈ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದರೂ ಉನ್ನತ ಶಿಕ್ಷಣದ ಕನಸು ನನಸಾಗುವುದಿಲ್ಲ. ಅಂಥವರಿಗೆ “ಇ ಗುರು’ ಅನುಕೂಲವಾಗಬಲ್ಲದು.

ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌. ಪ್ರಸನ್ನ ಇದರ ರೂವಾರಿ. ಸರಕಾರಿನ ಕಾಲೇಜುಗಳಲ್ಲಿ ಇರುವ ಪ್ರಶ್ನೆಪತ್ರಿಕೆ ತಯಾರಿ ತಂಡದಿಂದ ಹಿಡಿದು ವೈವಿಧ್ಯಮಯ ಶೈಕ್ಷಣಿಕ ಪ್ರತಿಭೆ ಹೊಂದಿದ ಉಪನ್ಯಾಸಕರನ್ನು ಬಳಸಿ ಕೊಳ್ಳಲು ನಿರ್ಧರಿಸಿದ್ದು, ಅವರು ಖಾಸಗಿ ಕೋಚಿಂಗ್‌ ನೀಡುವಂತಿಲ್ಲ, ಖಾಸಗಿ ಶಾಲೆಗಳಲ್ಲೂ ಬೋಧಿಸುವಂತಿಲ್ಲ. ಅಂತಹ ಉತ್ತಮ ಶಿಕ್ಷಕರನ್ನು ಗುರುತಿಸಿ ಬೋಧಿಸಲು ನಿಶ್ಚಯಿಸಲಾಯಿತು. ಮುದ್ರಿತ ವೀಡಿಯೊ ಕಳುಹಿಸಿದರೆ ಯೂಟ್ಯೂಬ್‌ ಮಾದರಿಯೇ ಆಗುವುದರಿಂದ ಆನ್‌ಲೈನ್‌ ಕ್ಲಾಸ್‌ ಮೂಲಕ ಪಾಠ ಎಂದಾಯಿತು. ಪ್ರಸನ್ನ ಅವರು ದಿಲ್ಲಿ ಯಲ್ಲಿ ಅಧಿಕಾರಿಯಾಗಿದ್ದಾಗ, ಕೊರೊನಾ ನಿರ್ಬಂಧ ಮುಗಿಸಿದ ಯುಪಿಎಸ್‌ಸಿ ಪರೀಕ್ಷಾರ್ಥಿಗಳು ಆನ್‌ಲೈನ್‌ ಉತ್ತಮ ಎಂದು ಆಯ್ಕೆ ಮಾಡಿದ್ದನ್ನು ಗಮನಿಸಿದ್ದರು. ಹಾಗಾಗಿ ಇಲ್ಲೂ ಅದೇ ಮಾದರಿ ಅನುಕೂಲ ಎಂದು ಮನಗಂಡರು.

ಈ ತರಬೇತಿ ಹೇಗೆ ಕಾರ್ಯನಿರ್ವಹಣೆ ಮಾಡುತ್ತದೆ?
ಜಿಲ್ಲೆಯ ಆಯ್ದ 25 ಸರಕಾರಿ ಪ.ಪೂ. ಕಾಲೇಜು ಗಳಿಗೆ ತಲಾ 1.8 ಲಕ್ಷ ರೂ. ಮೌಲ್ಯದ ಇಂಟ ರ್ಯಾಕ್ಟಿವ್‌ ಟಿವಿ, ಯುಪಿಎಸ್‌, ಸ್ಪೀಕರ್‌, ವೆಬ್‌ ಕ್ಯಾಮ್‌, ಲ್ಯಾಪ್‌ಟಾಪ್‌ ನೀಡಲಾಗಿದ್ದು, ಮಣಿಪಾಲದಲ್ಲಿ ಜಿ.ಪಂ.ನ ಸಂಪನ್ಮೂಲ ಕೇಂದ್ರದಲ್ಲಿ ಇರುವ ಸ್ಟುಡಿಯೋದಲ್ಲಿ ಉಪನ್ಯಾಸಕರು ಬೋಧಿಸುತ್ತಾರೆ. ಪ್ರತೀ ದಿನ ಅಪರಾಹ್ನ 3ರಿಂದ 4.30, ಶನಿವಾರ ಮಧ್ಯಾಹ್ನ 1.30ರಿಂದ 3 ಗಂಟೆ ವರೆಗೆ ಎರಡೂವರೆ ತಿಂಗಳಿಂದ ತರಗತಿಗಳು ನಡೆಯುತ್ತಿವೆ. ಮಧ್ಯಾವಧಿ ಪರೀಕ್ಷೆ ವರೆಗಿನ ಪಾಠಗಳು ಸಿಇಟಿ ಮಾದರಿಯಲ್ಲಿ ಪ್ರಶ್ನೆಪತ್ರಿಕೆ ಮಾಡಿ ಬೋಧನೆ ಮುಗಿದಿವೆ. ವಿದ್ಯಾರ್ಥಿಗಳು ಸಂವಾದದಲ್ಲಿ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು. ಈಗ ಪರೀಕ್ಷೆಗಾಗಿ ಬಿಡುವು ನೀಡಲಾಗಿದ್ದು ಪಿಯು ಪರೀಕ್ಷೆ ಬಳಿಕ ಪೂರ್ಣಾವಧಿ ತರಗತಿಗಳು ಸಿಇಟಿವರೆಗೆ ನಡೆಯಲಿವೆ.

ಇದನ್ನೂ ಓದಿ : Seats reserved for Kannadigas: ಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಶೇಕಡಾ 25ರಷ್ಟು ಸೀಟ್ ಕನ್ನಡಿಗರಿಗೆ ಮೀಸಲು

ಇದನ್ನೂ ಓದಿ : New guidelines for schools: 10, 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತಿರುವ ಶಾಲೆಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ

ಹಿರಿಯಡ್ಕ, ಕಾರ್ಕಳ, ಕುಂದಾಪುರ, ಶಂಕರ ನಾರಾಯಣ, ಬೈಂದೂರು, ಬೆಳ್ಮಣ್ಣು, ಹೆಬ್ರಿ, ಉಡುಪಿ, ನಾವುಂದ, ಬೈಲೂರು, ಮಲ್ಪೆ, ಕೋಟೇಶ್ವರ, ಪಡುಬಿದ್ರಿ, ಉಪ್ಪುಂದ, ಗರ್ಲ್ಸ್‌-  ಉಡುಪಿ, ಮುನಿಯಾಲು, ಬಜಗೋಳಿ, ಬಿದ್ಕಲ್‌ಕಟ್ಟೆ, ಕಂಬದ ಕೋಣೆ, ಹೊಸಂಗಡಿ, ಸಾಣೂರು, ಹಾಲಾಡಿ, ಮೀಯಾರು, ಬ್ರಹ್ಮಾವರ, ಮಣೂರು ಸರಕಾರಿ ಪಿ.ಯು. ಕಾಲೇಜುಗಳಲ್ಲಿ ಈ ತರಬೇತಿಯನ್ನು ನೀಡಲಾಗುವುದು.

“E Guru” training: Kundapur: “E Guru” training for PU students

Comments are closed.