Mangalore Corporation :ಮಂಗಳೂರು ಪಾಲಿಕೆಯ ನೂತನ ಮೇಯರ್, ಉಪಮೇಯರ್ ಆಯ್ಕೆ

ಮಂಗಳೂರು : Mangalore Corporation : ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವದಿಯ ಮೇಯರ್, ಉಪಮೇಯರ್ ಚುನಾವಣೆ ಇಂದು‌ ನಡೆಯಿತು. ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಜಿ.ಸಿ ಪ್ರಕಾಶ್ ನೇತ್ರತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಮೇಯರ್ ಆಗಿ ಬಿ.ಜೆ.ಪಿ ಸದಸ್ಯ ಜಯಾನಂದ್ ಅಂಚನ್ ಆಯ್ಕೆಯಾದರೆ, ಉಪ ಮೇಯರ್ ಆಗಿ ಬಿ.ಜೆ.ಪಿ ಸದಸ್ಯೆ ಪೂರ್ಣಿಮಾ ಆಯ್ಕೆಯಾದರು.

ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಇಬ್ಬರು ಶಾಸಕರು ಸೇರಿದಂತೆ ಉಪಸ್ಥಿತರಿದ್ದ ಒಟ್ಟು ಮತದಾರರಲ್ಲಿ 46 ಮಂದಿ ಬಿ.ಜೆ.ಪಿಯ ಜಯಾನಂದ ಪರ ಮತ ಚಲಾಯಿಸಿದರು. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಹಿರಿಯ ಕಾರ್ಪೊರೇಟರ್ ಶಶಿಧರ ಹೆಗ್ಡೆ 14 ಮತ ಗಳಿಸಿದರು. ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಸೆಂಟ್ರಲ್ ಮಾರ್ಕೆಟ್ ವಾರ್ಡ್ ಸದಸ್ಯೆ ಪೂರ್ಣಿಮಾ 46 ಮತಗಳನ್ನು ಗಳಿಸಿ ಆಯ್ಕೆಯಾದರು. ಅವರ ವಿರುದ್ಧ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಬಂದರು ವಾರ್ಡ್ ಸದಸ್ಯೆ ಝೀನತ್ ಶಂಸುದ್ದೀನ್ 14 ಮತಗಳನ್ನು ಗಳಿಸಿದರು. ಮತದಾನ ಪ್ರಕ್ರಿಯೆಯಲ್ಲಿ ಎಸ್.ಡಿ.ಪಿ.ಐ ಪಕ್ಷದ ಇಬ್ಬರು ಸದಸ್ಯರು ತಟಸ್ಥರಾಗಿದ್ದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಟ್ಟು ಅರುವತ್ತು ವಾರ್ಡ್ ಗಳಿದ್ದು ಹೀಗಾಗಿ ಮತದಾನದಲ್ಲಿ ಒಟ್ಟು 60 ಕಾರ್ಪೊರೇಟರ್ ಗಳು, ಇಬ್ಬರು ಶಾಸಕರು, ಒಬ್ಬರು ಸಂಸದರು, ಇಬ್ಬರು ವಿಧಾನ ಪರಿಷತ್ ಸದಸ್ಯರು ಭಾಗವಹಿಸಬೇಕಿತ್ತು. ಇವರಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್, ಮಂಜುನಾಥ ಭಂಡಾರಿ ಗೈರು ಹಾಜರಾಗಿದ್ದರು. ಹೀಗಾಗಿ ಒಟ್ಟು ಅರುವತ್ತೆರಡು ಸದಸ್ಯರು ಈ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾದರು. ಸದಸ್ಯರು ಕೈ ಎತ್ತುವ ಮೂಲಕ ಮೇಯರ್ ಉಪಮೇಯರ್ ಆಯ್ಕೆ ಪ್ರಕ್ರಿಯೆ ನಡೆಯಿತು.

ಒಟ್ಟು ಐದು ವರ್ಷಗಳ ಅವಧಿಯಲ್ಲಿ ಈಗಾಗಲೇ ಎರಡು ಅವಧಿಯಲ್ಲಿ ದಿವಾಕರ್ ಮತ್ತು ಪ್ರೇಮಾನಂದ್ ಶೆಟ್ಟಿ ಮೇಯರ್ ಆಗಿ ಆಯ್ಕೆಯಾಗಿದ್ದರು. ಈ ವರ್ಷ ಮಾರ್ಚ್ 2 ರಂದು ಮೇಯರ್‌ – ಉಪ ಮೇಯರ್‌ ಚುನಾವಣೆ ನಿಗದಿಯಾಗಿದ್ದರೂ, ಬೇರೆ ಕಡೆಯ ಮೀಸಲಾತಿ ಸಮಸ್ಯೆಯಿಂದ ಇಲ್ಲಿಯ ಚುನಾವಣೆಯನ್ನೂ ತಡೆ ಹಿಡಿಯಲಾಗಿತ್ತು. ಹಾಗಾಗಿ ಮುಂದಿನ ಆರು ತಿಂಗಳು ಪ್ರೇಮಾನಂದ ಶೆಟ್ಟಿ ಮತ್ತು ಸುಮಂಗಳಾ ರಾವ್‌ ಅವಧಿ ಮುಂದುವರಿದಿತ್ತು. ಹೀಗಾಗಿ ಆರು ತಿಂಗಳ ಬಳಿಕ ಇಂದು ಮೇಯರ್ ಉಪಮೇಯರ್ ಚುನಾವಣೆ ನಡೆಯಿತು.

ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆ ಸಂದರ್ಭದಲ್ಲಿ ರಾಜಕೀಯ ಅನುಭವ, ಮಹಾನಗರ ಪಾಲಿಕೆಯ ಮೇಲೆ ಪೂರ್ಣ ಹಿಡಿತ ದೃಷ್ಟಿಯಿಂದ ಬಿ.ಜೆ.ಪಿಗೆ ಮೇಯರ್ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸವಾಲಿತ್ತು. ಇದೀಗ ಈ ಸವಾಲನ್ನು‌ ಬಿ.ಜೆ.ಪಿ ಯಶಸ್ವಿಯಾಗಿ ‌ನಿರ್ವಹಿಸಿದೆ.

ಇದನ್ನು ಓದಿ : leopard in Tumkur : ಬರಿಗೈನಲ್ಲಿ ಚಿರತೆ ಸೆರೆ ಹಿಡಿದ ಮೂವರು ಯುವಕರು : ಮೈ ಝುಂ ಎನ್ನಿಸುತ್ತೆ ಈ ಭಯಾನಕ ವಿಡಿಯೋ

ಇದನ್ನೂ ಓದಿ : rain damage in Bangalore: ರಾಜ್ಯ ರಾಜಧಾನಿಯಲ್ಲಿ ನೆರೆ ಹಾನಿ ಅಭಿಪ್ರಾಯ ಸಂಗ್ರಹಕ್ಕೆ ಕಾಂಗ್ರೆಸ್​ನಿಂದ ಸಮಿತಿ ರಚನೆ

Election of new Mayor, Deputy Mayor of Mangalore Corporation

Comments are closed.