ಬಿ.ಸಿ ರೋಡಿನಲ್ಲಿ ಯಮನ ಅಟ್ಟಹಾಸ: ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಬರುತ್ತಿದ್ದವರು ಬಾರದ ಲೋಕಕ್ಕೆ
ಮಂಗಳೂರು: ಬೆಂಗಳೂರಿನಿಂದ ಉಡುಪಿ ಶ್ರೀಕೃಷ್ಣ ಮಠಕ್ಕೆ ತೆರಳುತ್ತಿದ್ದ ಪ್ರವಾಸಿಗರು ಭೀಕರ ರಸ್ತೆ ಅಪಘಾತಕ್ಕೆ ಒಳಗಾದ ಘಟನೆಯು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್ನ ಸರ್ಕಲ್ನಲ್ಲಿ ಸಂಭವಿಸಿದೆ. ಈ ಅವಘಡದಲ್ಲಿ ಮೂವರು ಸಾವನ್ನಪ್ಪಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಮೂಲದ ಇನ್ನೋವಾ ಕಾರಿನಲ್ಲಿ ಬೆಂಗಳೂರಿನ ಪ್ರವಾಸಿಗರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮುಂಜಾನೆ 4:40ರ ಸುಮಾರಿಗೆ ಬೆಂಗಳೂರಿನಿಂದ ಬರುತ್ತಿದ್ದ ಕಾರು ಬಿ.ಸಿ ರೋಡ್ನಲ್ಲಿರುವ ಎನ್.ಜಿ ಸರ್ಕಲ್ಗೆ ರಭಸವಾಗಿ ಗುದ್ದಿದೆ. ಡಿಕ್ಕಿ ರಭಸಕ್ಕೆ ಸಂಪೂರ್ಣ ಕಾರು ಜಖಂಗೊಂಡಿದೆ. ಈ ಅಪಘಾತದಲ್ಲಿ ಬೆಂಗಳೂರು ಮೂಲದ ರಮ್ಯ(23), ರವಿ(64) ಹಾಗೂ ನಂಜಮ್ಮ(75) ಎಂಬವರು ಮೃತಪಟ್ಟಿದ್ದಾರೆ. ಮೃತಪಟ್ಟವರ ಪೈಕಿ ರಮ್ಯಾ ಎಂಬವರು ಪೊಲೀಸ್ ಅಧಿಕಾರಿಯೊಬ್ಬರ ಪತ್ನಿ ಎಂಬ ಮಾಹಿತಿ ಲಭ್ಯವಾಗಿದೆ. ರವಿ ಸ್ಥಳದಲ್ಲೇ ಸಾವನ್ನಪ್ಪಿದರೆ ರಮ್ಯಾ ಹಾಗೂ ನಂಜಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಬೆಂಗಳೂರಿನ ಪೀಣ್ಯ ನಿವಾಸಿಗಳು ಎಂದು ತಿಳಿದುಬಂದಿದೆ.
ಇನ್ನು ಈ ಅಪಘಾತದಲ್ಲಿ ಕೀರ್ತಿ, ಸುಶೀಲಾ , ಬಿಂದು ಹಾಗೂ ಪ್ರಶಾಂತ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಅದೃಷ್ಟವಶಾತ್ ಕಾರು ಚಾಲಕ ಸುಬ್ರಹ್ಮಣ್ಯ ಹಾಗೂ ಕಿರಣ್ ಚಿಕ್ಕಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಇವರೆಲ್ಲರೂ ಉಡುಪಿ ಶ್ರೀಕೃಷ್ಣ ದರ್ಶನಕ್ಕೆಂದು ಆಗಮಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಯಲ್ಲಾಪುರ : ಅರಬೈಲ್ ಘಾಟ್‌ನಲ್ಲಿ ಭೀಕರ ಅಪಘಾತ; ಹೊತ್ತಿ ಉರಿದ ಸ್ಪಿರಿಟ್ ಟ್ಯಾಂಕರ್
ಇನ್ನು ಈ ಅಪಘಾತಕ್ಕೆ ಅವೈಜ್ಞಾನಿಕ ಮಾದರಿಯಲ್ಲಿ ನಿರ್ಮಿಸಲಾಗಿರುವ ಸರ್ಕಲ್ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಬಿ.ಸಿ ರೋಡ್ ಹಾಗೂ ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ನಿರ್ಮಾಣವಾದ ನೂತನ ಸರ್ಕಲ್ ಇದಾಗಿದೆ. ಇನ್ನು ಈ ಪ್ರಕರಣ ಸಂಬಂಧ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



