ಚಿಕ್ಕಮಗಳೂರು : ವಾಣಿಜ್ಯ ಸಿಲಿಂಡರ್ ಸಿಗದ್ದಕ್ಕೆ ಕ್ಯಾಂಟೀನ್ನಲ್ಲಿ ಗೃಹೋಪಯೋಗಿ ಸಿಲಿಂಡರ್ ಬಳಕೆ : ಭಾರೀ ಸ್ಫೋಟ
ವಾಣಿಜ್ಯ ಸಿಲಿಂಡರ್ ಲಭ್ಯವಾಗದ ಕಾರಣ ಚಿಕ್ಕಮಗಳೂರಿನ ಹೋಟೆಲ್ ಒಂದರಲ್ಲಿ ಗೃಹಬಳಕೆಯ ಸಿಲಿಂಡರ್ ಬಳಸಿದ ಪರಿಣಾಮ ದೊಡ್ಡ ಅನಾಹುತವೇ ನಡೆದು ಹೋಗಿದೆ
ಚಿಕ್ಕಮಗಳೂರು : ಕೊಲ್ಲಿ ರಾಷ್ಟ್ರಗಳ ಯುದ್ಧದಿಂದಾಗಿ ದೇಶದಲ್ಲಿ ಉಂಟಾಗಿರುವ ವಾಣಿಜ್ಯ ಸಿಲಿಂಡರ್ಗಳ ಅಭಾವ ಸದ್ಯ ಚರ್ಚೆಯ ವಿಷಯವಾಗಿದೆ. ಒಂದು ಕಡೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎನ್ನುತ್ತಿವೆ. ಮತ್ತೊಂದು ಕಡೆ ಸಿಲಿಂಡರ್ಗೆ ಹಾಹಾಕಾರ ಶುರುವಾಗಿದೆ. ವಾಣಿಜ್ಯ ಸಿಲಿಂಡರ್ ಲಭ್ಯವಾಗದ ಕಾರಣ ಚಿಕ್ಕಮಗಳೂರಿನ ಹೋಟೆಲ್ ಒಂದರಲ್ಲಿ ಗೃಹಬಳಕೆಯ ಸಿಲಿಂಡರ್ ಬಳಸಿದ ಪರಿಣಾಮ ದೊಡ್ಡ ಅನಾಹುತವೇ ನಡೆದು ಹೋಗಿದೆ.
ಹೌದು..! ಚಿಕ್ಕಮಗಳೂರು ನಗರದ ಶಾಂತಿನಗರ ಮುಖ್ಯರಸ್ತೆಯಲ್ಲಿ ಇಂತಹದ್ದೊಂದು ಅನಾಹುತ ಸಂಭವಿಸಿದೆ. ಸುರೇಶ್ ಕ್ಯಾಂಟೀನ್ ಎಂಬಲ್ಲಿ ಗೃಹಬಳಕೆಯ ಸಿಲಿಂಡರ್ ಬಳಕೆ ಮಾಡಲಾಗಿತ್ತು. ಆದರೆ ಸಿಲಿಂಡರ್ ಸೋರಿಕೆಯಾಗಿದ್ದು ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದ ಹೋಟೆಲ್ ಮಾಲೀಕರಾದ ಸುರೇಶ್ ಅವರ ಪತ್ನಿ ವೇಲಿ ಎಂಬವರ ದೇಹ, ಕೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ.
ಇದನ್ನೂ ಓದಿ: ಕುಂದಾಪುರ : ಸ್ನಾನಕ್ಕೆ ತೆರಳುತ್ತಿದ್ದ 25 ವರ್ಷದ ಯುವಕ ಹಠಾತ್ ಕುಸಿದು ಬಿದ್ದು ಸಾವು
ಗಾಯಗೊಂಡಿರುವ ವೇಲಿ ಅವರನ್ನು ಚಿಕ್ಕಮಗಳೂರು ನಗರದಲ್ಲೇ ಇರುವ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿನಂದಿಸಲು ಹರಸಾಹಸ ಪಟ್ಟಿದ್ದಾರೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸಕಾಲಕ್ಕೆ ದೊರೆಯದ ಹಿನ್ನೆಲೆಯಲ್ಲಿ ಹೋಟೆಲ್ನಲ್ಲಿ ಗೃಹೋಪಯೋಗಿ ಸಿಲಿಂಡರ್ ಬಳಕೆ ಮಾಡಿ ಮಾಲೀಕ ಸುರೇಶ್ ಕ್ಯಾಂಟೀನ್ ನಡೆಸುತ್ತಿದ್ದರು ಎನ್ನಲಾಗಿದೆ. ಚಿಕ್ಕಮಗಳೂರು ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಢ ಸಂಭವಿಸಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಭಾರತದ ಸರ್ಕಾರದ ಎಲ್ಪಿಜಿ (ಪೂರೈಕೆ ಮತ್ತು ವಿತರಣೆ ನಿಯಂತ್ರಣ) ಆದೇಶ 2020ರ ಅಡಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಗೃಹೋಪಯೋಗಿ ಸಿಲಿಂಡರ್ಗಳ ಬಳಕೆ ಅಪರಾಧ ಎಂದು ಪರಿಗಣಿಸಲಾಗಿದೆ. ಹೀಗಾಗಿ ಕ್ಯಾಂಟೀನ್ ಮಾಲೀಕ ಸುರೇಶ್ಗೆ ಇದರಿಂದ ಕಾನೂನು ಕ್ರಮ ಎದುರಿಸಬೇಕಾಗಿ ಬರಲಿದೆ.



