ಯೋಗೇಶ್ ಗೌಡ ಹತ್ಯೆ ಪ್ರಕರಣ : ನಾಳೆ ಶಾಸಕ ವಿನಯ್ ಕುಲಕರ್ಣಿಗೆ ಶಿಕ್ಷೆ ಪ್ರಮಾಣ ಪ್ರಕಟ
ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿಯನ್ನು ಅಪರಾಧಿಗಳು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಘೋಷಿಸಿದೆ. ಈ ಪ್ರಕರಣ ಸಂಬಂಧ ಇಂದು ಶಿಕ್ಷೆ ಪ್ರಮಾಣವನ್ನು ಘೋಷಿಸುವುದಾಗಿ ಕೋರ್ಟ್ ತಿಳಿಸಿತ್ತು. ಆದರೆ ಇದೀಗ ಶಿಕ್ಷೆ ಪ್ರಮಾಣವನ್ನು ನಾಳೆ ಪ್ರಕಟಿಸುವುದಾಗಿ ಕೋರ್ಟ್ ಘೋಷಿಸಿದೆ. ಈ ಶಿಕ್ಷೆಯೊಂದಿಗೆ ಶಾಸಕ ವಿನಯ್ ಕುಲಕರ್ಣಿಯ ರಾಜಕೀಯ ಜೀವನವೇ ಸಮಾಪ್ತಿಯಾಗುವ ಅಪಾಯದಲ್ಲಿದೆ.
ಯಾವುದೇ ಶಾಸಕ 2 ವರ್ಷಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆ ಒಳಗಾದರೆ ಅವರ ಶಾಸಕ ಸ್ಥಾನ ರದ್ದಾಗುತ್ತದೆ. ಇದೊಂದು ಕೊಲೆ ಪ್ರಕರಣವಾಗಿರುವುದರಿಂದ ವಿನಯ್ ಕುಲಕರ್ಣಿಗೆ ಜೀವಾವಧಿ ಅಥವಾ ಜೀವಿತಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಗಳು ಜಾಸ್ತಿ ಇದೆ. ಶಾಸಕ ವಿನಯ್ ಕುಲಕರ್ಣಿ ಕೋರ್ಟ್ನಲ್ಲಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದ್ದು, ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಕಳೆದ 27 ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದೇನೆ. ಮೂರುವರೆ ಸಾವಿರ ಹಸುಗಳನ್ನು ಸಾಕುತ್ತಿದ್ದೇನೆ. ವಯಸ್ಸಿಗೆ ಬಂದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಹಾಗೂ ನನಗೂ ಅನಾರೋಗ್ಯವಿದೆ. ರಾಜಕೀಯ ಕಾರಣದಿಂದಾಗಿ ಈ ಕೊಲೆಯ ಅಪವಾದ ನನ್ನ ಮೇಲೆ ಬಂದಿದೆ. ಹೀಗಾಗಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಕೋರ್ಟ್ನಲ್ಲಿ ಶಾಸಕ ವಿನಯ್ ಕುಲಕರ್ಣಿ ಅಂಗಲಾಚಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಶಾಸಕ ವಿನಯ್ ಕುಲಕರ್ಣಿ ಕೊಲೆಗಾರ : ಶಿಕ್ಷೆ ಪ್ರಮಾಣ ಇಂದು ಪ್ರಕಟ
ಇನ್ನುಳಿದಂತೆ ಈ ಪ್ರಕರಣದ ಇನ್ನಿತರ ಆರೋಪಿಗಳು ಕೂಡ ಅನಾರೋಗ್ಯ, ಬಡತನ , ವೃದ್ಧ ಪೋಷಕರನ್ನು ನೋಡಿಕೊಳ್ಳಬೇಕೆಂಬ ಕಾರಣಗಳನ್ನು ಕೋರ್ಟ್ನ ಎದುರು ನೀಡಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಮನವಿ ಮಾಡಿದ್ದು, ದೋಷಿಗಳ ಮನವಿಯನ್ನು ಕೋರ್ಟ್ ಪುರಸ್ಕರಿಸುತ್ತಾ ಇಲ್ಲವಾ ಎನ್ನುವುದಕ್ಕೆ ನಾಳೆ ಉತ್ತರ ಸಿಗಲಿದೆ.
ಜೂನ್ 16, 2016ರಲ್ಲಿ ಧಾರವಾಡದಲ್ಲಿ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಸಂಭವಿಸಿತ್ತು. ರಾಜಕೀಯ ದ್ವೇಷದ ಕೊಲೆ ಇದು ಎಂದಿದ್ದ ಪೊಲೀಸ್ ತನಿಖೆಯು 6 ಮಂದಿಯನ್ನು ಆರೋಪಿಗಳೆಂದು ಗುರುತಿಸಿತ್ತು. 2019ರಲ್ಲಿ ಈ ಕೊಲೆಯ ತನಿಖೆಯನ್ನು ಸಿಬಿಐ ವಹಿಸಿಕೊಂಡಿತ್ತು. 2020ರಲ್ಲಿ ಶಾಸಕ ವಿನಯ್ ಕುಲಕರ್ಣಿಯನ್ನು ಬಂಧಿಸಲಾಗಿತ್ತು. ಬಳಿಕ ವಿನಯ್ ಕುಲಕರ್ಣಿ ಸೇರಿದಂತೆ 21 ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು.



