ಪೊಲೀಸ್ ಕಮಿಷನರ್ ಶಶಿಕುಮಾರ್ ಹಾಡಿಗೆ ಫಿದಾ ಆದ ಮಂಗಳೂರಿಗರು …!

ಮಂಗಳೂರು : ಸಾಮಾನ್ಯವಾಗಿ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿರ್ವಹಣೆಗೆ ಮಾತ್ರವೇ ಒತ್ತು ನೀಡುತ್ತಾರೆ. ಆದರೆ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಶಶಿಕುಮಾರ್ ಮಾತ್ರ ಕೊಂಚ ಡಿಫ್ರೆಂಟ್. ನಗರದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಹಾಡುವ ಮೂಲಕ ಇದೀಗ ಮಂಗಳೂರಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರಾಜ್ಯದ ಖಡಕ್ ಐಪಿಎಸ್ ಅಧಿಕಾರಿಗಳ ಪೈಕಿ ಶಶಿಕುಮಾರ್ ಕೂಡ ಒಬ್ಬರು. ಚಿಕ್ಕಮಗಳೂರು, ಬೆಂಗಳೂರಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಶಶಿಕುಮಾರ್ ಅವರು ಅಪರಾಧವೆಸಗುವವರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಅದೆಷ್ಟೋ ಪ್ರಕರಣಗಳನ್ನು ಬೇಧಿಸುವ ಮೂಲಕ ಶಬ್ಬಾಶ್ ಗಿರಿಯನ್ನೂ ಪಡೆದುಕೊಂಡಿದ್ದಾರೆ. ಇನ್ನೊಂದೆಡೆ ಹಲವು ಮಾನವೀಯ ಕಾರ್ಯಗಳ ಪ್ರಾಣಿ, ಪಕ್ಷಿಗಳ ಮೇಲಿನ ಪ್ರೀತಿಯಿಂದಲೇ ಜನಮೆಚ್ಚುಗೆಯನ್ನು ಪಡೆದಿದ್ದಾರೆ.

ಕಳೆದೊಂದು ವಾರದ ಹಿಂದೆಯಷ್ಟೇ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ಶಶಿಕುಮಾರ್ ಅವರು ಅಕ್ರಮ ಚಟುವಟಿಕೆಗಳನ್ನು ಮಟ್ಟಹಾಕುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಅಧಿಕಾರ ಸ್ವೀಕರಿಸಿದ ಮರುದಿನವೇ ಎರಡು ದಿನಗಳ ಕಾಲ ಬೀಚ್, ಮೈದಾನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಗಾಂಜಾ ವ್ಯಸನ ಮಾಡುತ್ತಿದ್ದವರ ವಿರುದ್ದ ಕಾರ್ಯಾಚರಣೆ ಯನ್ನು ನಡೆಸಿದ್ದರು. ಕಮಿಷನರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಜನರು ಹಲವು ಸಮಸ್ಯೆಗಳನ್ನು ಆಯುಕ್ತರ ಬಳಿಯಲ್ಲಿ ಹೇಳಿಕೊಂಡಿದ್ದರು.

ಇದೀಗ ಮಂಗಳೂರು ನಗರದ ಪಾಂಡೇಶ್ವರದಲ್ಲಿ ನಡೆದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಭಕ್ತಿಗೀತೆಯನ್ನು ಹಾಡುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಪೊಲೀಸ್ ವೃತ್ತಿಯ ಜೊತೆ ಜೊತೆಗೆ ತಮ್ಮ ಬಿಡುವಿನ ವೇಳೆಯಲ್ಲಿ ಹಾಡುಗಳನ್ನು ಹಾಡುತ್ತಾ ಜನರೊಂದಿಗೆ ಬೆರೆಯುತ್ತಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರ ಹಾಡು ಮಂಗಳೂರಿಗರ ಮನಗೆದ್ದಿದೆ.

Comments are closed.