ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ : ಇಂದು ಫಲಿತಾಂಶದೊಂದಿಗೆ ದೊರೆಯಲಿದೆ ಅಂಕಪಟ್ಟಿ
DigiLocker App: ಇಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಳ್ಳಲಿದೆ. ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಇಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟಿಸಲಿದೆ. ಈ ಬಾರಿಯ ವಿಶೇಷತೆ ಏನೆಂದರೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಇಂದೇ ಅಂಕಪಟ್ಟಿ ಕೂಡ ದೊರೆಯಲಿದೆ..!
ಹೌದು..! ಡಿಜಿಲಾಕರ್ ಆ್ಯಪ್ ಸಹಾಯದಿಂದ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯನ್ನು ನೀಡಲು ನಿರ್ಧರಿಸಲಾಗಿದೆ. ಇದೊಂದು ವರ್ಷ ಮಾತ್ರ ವಿದ್ಯಾರ್ಥಿಗಳಿಗೆ ಭೌತಿಕ ಅಂಕಪಟ್ಟಿ ಕೂಡ ಸಿಗಲಿದೆ. ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಭೌತಿಕ ಅಂಕಪಟ್ಟಿ ನೀಡುವ ಪದ್ಧತಿ ಅಂತ್ಯಗೊಳ್ಳಲಿದ್ದು, APAAR ID ಯೊಂದಿಗೆ ಕಡ್ಡಾಯವಾಗಿ NAD-DigiLocker ನಲ್ಲಿ ಅಂಕಪಟ್ಟಿ ಅಳವಡಿಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಇಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಫಲಿತಾಂಶ – ಮಧ್ಯಾಹ್ನ 3 ಗಂಟೆಗೆ ರಿಸಲ್ಟ್ ಪ್ರಕಟ
ಇಂದು NAD-DigiLockerನಲ್ಲಿ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳುವ ವಿದ್ಯಾರ್ಥಿಗಳು ಈ ಅಂಕಪಟ್ಟಿಯನ್ನು ತಮ್ಮ ಉನ್ನತ ವ್ಯಾಸಂಗಕ್ಕೆ ಅಧಿಕೃತ ದಾಖಲೆಯಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಅಂಕಪಟ್ಟಿಯು ಕೇವಲ ರಾಜ್ಯ ಮಾತ್ರವಲ್ಲದೇ ಹೊರರಾಜ್ಯಗಳಲ್ಲಿಯೂ ಮಾನ್ಯತೆ ಹೊಂದಿರಲಿದೆ. ಇದನ್ನು ದೃಢೀಕೃತ ದ್ವಿತೀಯ ಪಿಯುಸಿ ಅಂಕಪಟ್ಟಿ ಎಂದು ಪರಿಗಣಿಸುವಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.
ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿಳಂಬದಿಂದಾಗಿ ಯಾವುದೇ ಅವಕಾಶಗಳಿಂದ ವಂಚಿತರಾಗದಂತೆ ತಡೆಯುವುದು, ತ್ವರಿತ ಸೇವೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ಪಾರದರ್ಶಕ ಸೇವೆ ನೀಡುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
ಅಂದಹಾಗೆ NAD ಶಿಕ್ಷಣ ಇಲಾಖೆಯಡಿ ಸ್ಥಾಪಿಸಲಾದ ಡಿಜಿಟಲ್ ಸಂಗ್ರಹಣಾ ವ್ಯವಸ್ಥೆಯಾಗಿದ್ದು, DigiLocker ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ ಕಾರ್ಯನಿರ್ವಹಿಸುವ ಡಿಜಿಟಲ್ ದಾಖಲೆ ಸಂಗ್ರಹಣಾ ವೇದಿಕೆಯಾಗಿದೆ. ಈ ಎರಡನ್ನು ಸಂಯೋಜಿಸುವ ಮೂಲಕ ವಿದ್ಯಾರ್ಥಿಗಳ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ, ದೃಢೀಕರಿಸಿ, ಸುಲಭವಾಗಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ದಿನದ 24 ಗಂಟೆಗಳಲ್ಲಿ ಯಾವಾಗ ಬೇಕಿದ್ದರೂ ಅಂಕಪಟ್ಟಿಯನ್ನು ಈ ಅಪ್ಲಿಕೇಶನ್ನಿಂದ ಪಡೆದುಕೊಳ್ಳಬಹುದಾಗಿದೆ.



