ಶುರುವಾಯ್ತು ಆಪರೇಷನ್ ಕಮಲ : ರೆಸಾರ್ಟ್ ರಾಜಕಾರಣದತ್ತ ಕಾಂಗ್ರೆಸ್ ಚಿತ್ತ
ರಾಜ್ಯಮಟ್ಟದ ರಾಜಕಾರಣ ಮಾತ್ರವಲ್ಲದೇ ಸ್ಥಳೀಯ ಚುನಾವಣೆಗಳಲ್ಲಿಯೂ ರೆಸಾರ್ಟ್ ರಾಜಕೀಯ ಆರಂಭಗೊಂಡಿದೆ. ಹೌದು..! ಗುಜರಾತ್ನಲ್ಲಿ ಸದ್ಯ ಸ್ಥಳೀಯ ಚುನಾವಣೆ ನಡೆಯಲಿದ್ದು, ಈ ಬೆನ್ನಲ್ಲೆ ಇಂತಹ ರಾಜಕೀಯ ವಿದ್ಯಮಾನವೊಂದು ಸಂಭವಿಸಿದೆ. ನವಸಾರಿ ಜಿಲ್ಲೆಯಲ್ಲಿ ಆಡಳಿತಾರೂಢ ಬಿಜೆಪಿ ಈಗಾಗಲೇ 52 ಸ್ಥಾನಗಳಲ್ಲಿ ಅವಿರೋಧ ಗೆಲುವು ಸಾಧಿಸಿದ್ದು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.
ಇನ್ನುಳಿದ ಸ್ಥಾನಗಳಲ್ಲಿಯೂ ಅವಿರೋಧವಾಗಿ ಜಯ ಸಾಧಿಸುವುದು ಬಿಜೆಪಿಯ ಗುರಿಯಾಗಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ಒತ್ತಡ ಹೇರಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನುವುದು ಕಾಂಗ್ರೆಸ್ ಆರೋಪವಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶೈಲೇಶ್ ಪಟೇಲ್ ಮಾತನಾಡಿದ್ದು, ಬಿಜೆಪಿಯಿಂದ ನಮ್ಮ ಪಕ್ಷದ ಅಭ್ಯರ್ಥಿಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇದೆ. ಕುದುರೆ ವ್ಯಾಪಾರದಿಂದ ನಮ್ಮ ಅಭ್ಯರ್ಥಿಗಳನ್ನು ಪಾರು ಮಾಡಿಕೊಳ್ಳುವ ಉದ್ದೇಶದಿಂ 100ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ. ಬಿಜೆಪಿ ಪಕ್ಷವು ತನ್ನ ಆಡಳಿತವನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆಯುವಂತೆ ಪೊಲೀಸರ ಮೂಲಕ ಒತ್ತಡ ಹೇರುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಸಭೆಗಳಲ್ಲಿ ಕರಿದ ತಿನಿಸುಗಳಿಗೆ ನಿರ್ಬಂಧ : ಸಿರಿಧಾನ್ಯ ಆಧಾರಿತ ತಿನಿಸುಗಳಿಗಷ್ಟೇ ಅವಕಾಶ
ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿಯೊಬ್ಬರ ಮೇಲೆ ಕ್ರಿಮಿನಲ್ ಕೇಸ್ ಹಾಕಿಸುವುದಾಗಿ ಪೊಲೀಸರ ಮೂಲಕ ಬೆದರಿಕೆಯೊಡ್ಡಿ ಬಿಜೆಪಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಿದೆ ಎನ್ನುವುದು ಕಾಂಗ್ರೆಸ್ ಪಕ್ಷದ ಆರೋಪವಾಗಿದೆ. ಇದು ಮಾತ್ರವಲ್ಲದೇ ಚುನಾವಣೆಯ ಸಂದರ್ಭದಲ್ಲಿಯೇ ಉಮರ್ಗಮ್ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಬಿಜೆಪಿ ಸರ್ಕಾರಿ ಅಧಿಕಾರಿಗಳ ಮೇಲೆ ಹಾಕುತ್ತಿರುವ ಒತ್ತಡಕ್ಕೆ ಹಿಡಿದ ಕೈಗನ್ನಡಿ ಎನ್ನುವುದು ಕೂಡ ಕೈ ಪಾಳಯದ ಗಂಭೀರ ಆರೋಪವಾಗಿದೆ .
ಬೆಲೆ ಏರಿಕೆ ಅಸ್ತ್ರ ಪ್ರಯೋಗಿಸಿ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಗೆಲುವು ಸಾಧಿಸಬೇಕೆಂದುಕೊಂಡಿದ್ದ ಕಾಂಗ್ರೆಸ್ಗೆ ಇದೀಗ ಆಪರೇಷನ್ ಕಮಲ ಮುಳುವಾಗಿ ಪರಿಣಮಿಸಿದೆ. ರೆಸಾರ್ಟ್ ರಾಜಕೀಯ ವರ್ಕೌಟ್ ಆಗುತ್ತಾ ಅನ್ನೋದನ್ನ ಕಾಲವೇ ಉತ್ತರಿಸಬೇಕಿದೆ.



