ಉಡುಪಿಯಲ್ಲಿ ಸೀಲ್ ಡೌನ್, ದ.ಕ. ಲಾಕ್ ಡೌನ್ : ಕಂಗಾಲಾದ್ರು ಎಸ್ಎಸ್ಎಲ್ ಸಿ ಮೌಲ್ಯಮಾಪಕರು

0

ಮಂಗಳೂರು /ಉಡುಪಿ : ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯನ್ನು ಸೀಲ್ ಡೌನ್ ಮಾಡಿದ್ರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿ ಮಾಡಲಾಗಿದೆ. ಇಂದು ಸಂಜೆಯಿಂದಲೇ ಎರಡೂ ಜಿಲ್ಲೆಗಳಲ್ಲಿ ಆದೇಶ ಜಾರಿಗೆ ಬರಲಿದೆ. ಆದರೆ ಲಾಕ್ ಡೌನ್, ಸೀಲ್ ಡೌನ್ ನಿಂದಾಗಿ ಎಸ್ಎಸ್ಎಲ್ ಸಿ ಮೌಲ್ಯಮಾಪನದಲ್ಲಿ ತೊಡಗಿರುವ ಶಿಕ್ಷಕರು ಮಾತ್ರ ಕಂಗಾಲಾಗಿದ್ದಾರೆ.

ಕೊರೊನಾ ಭೀತಿಯ ನಡುವಲ್ಲೇ ಎಸ್ಎಸ್ಎಲ್ ಸಿ ಪರೀಕ್ಷಾ ಕರ್ತವ್ಯ ನಡೆಸಿದ್ದ ಶಿಕ್ಷಕರು ಇದೀಗ ಜುಲೈ 13ರಿಂದ ಎಸ್ಎಸ್ಎಲ್ ಸಿ ಪರೀಕ್ಷಾ ಮೌಲ್ಯಮಾಪನದಲ್ಲಿ ತೊಡಗಿದ್ದಾರೆ. ಮೌಲ್ಯಮಾಪನ ಕಾರ್ಯ ಆರಂಭಗೊಂಡ ನಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಸಂಜೆಯಿಂದಲೇ ಲಾಕ್ ಡೌನ್ ಹೇರಿಕೆ ಮಾಡಲಾಗುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯೇ ಸಂಪೂರ್ಣವಾಗಿ ಬಂದ್ ಆಗಲಿದೆ.

ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿ ಮಾಡದಿದ್ದರೂ ಜಿಲ್ಲೆಯ ಗಡಿಗಳನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗುತ್ತಿದೆ. ಅಲ್ಲದೇ ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಬಸ್ ಸಂಚಾರವನ್ನು ನಿಷೇಧಿಸಲಾಗಿದೆ. ಇದು ಎಸ್ಎಸ್ಎಲ್ ಸಿ ಮೌಲ್ಯಮಾಪನದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ. ಜಿಲ್ಲಾ ಕೇಂದ್ರಗಳಲ್ಲಿಯೇ ಮೌಲ್ಯ ಮಾಪನ ನಡೆಯುತ್ತಿರುವುದರಿಂದ ಎಲ್ಲಾ ತಾಲೂಕುಗಳಿಂದಲೂ ಮೌಲ್ಯ ಮಾಪಕರು ಮೌಲ್ಯ ಮಾಪನಾ ಕೇಂದ್ರಗಳಿಗೆ ಬರುತ್ತಿದ್ದಾರೆ. ಇನ್ನು ನೂರಾರು ಶಿಕ್ಷಕರು ನಿತ್ಯವೂ ಉಡುಪಿಯಿಂದ ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಉಡುಪಿಗೆ ನಿತ್ಯವೂ ಬಸ್ಸುಗಳ ಮೂಲಕ ಸಂಚರಿಸಿ ಮೌಲ್ಯ ಮಾಪನ ಕಾರ್ಯಕ್ಕೆ ಹಾಜರಾಗುತ್ತಿದ್ರು. ಆದ್ರೀಗ ವಾಹನ ಸಂಚಾರ ಬಂದ್ ಆಗುವುದರಿಂದಾಗಿ ನಿಜಕ್ಕೂ ಶಿಕ್ಷಕರು ಹೈರಾಣಾಗಿದ್ದಾರೆ.

ಲಾಕ್ ಡೌನ್, ಸೀಲ್ ಡೌನ್ ಆದೇಶ ಜಾರಿಯಾದ್ರೆ ಮೌಲ್ಯಮಾಪನ ಮುಂದೂಡುವುದಾಗಿ ಹೇಳಿದ್ದ ಶಿಕ್ಷಣ ಇಲಾಖೆ ಶಿಕ್ಷಕರ ಬಳಿ ತಮ್ಮ ಸ್ವತಃ ವಾಹನದಲ್ಲಿ ಮೌಲ್ಯ ಮಾಪನ ಕಾರ್ಯಕ್ಕೆ ಹಾಜರಾಗುವಂತೆ ಸೂಚನೆಯನ್ನು ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳಿಂದ ಜಿಲ್ಲಾ ಕೇಂದ್ರಕ್ಕೆ ಬರಲು ವಾಹನಗಳ ವ್ಯವಸ್ಥೆಯನ್ನು ಕಲ್ಪಿಸಿದೆ. ನಗರ ವ್ಯಾಪ್ತಿಯ ಸಂಚಾರಕ್ಕೆ ಯಾವುದೇ ವ್ಯವಸ್ಥೆಯಿಲ್ಲ.

ಇಷ್ಟು ದಿನ ಬಸ್ಸನ್ನು, ಆಟೋ ಆಶ್ರಯಿಸಿದ್ದ ಶಿಕ್ಷಕರಿಗೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಅದ್ರಲ್ಲೂ ಉಡುಪಿ ಜಿಲ್ಲೆಯಿಂದ ಮಂಗಳೂರಿಗೆ ಬರುವ ಶಿಕ್ಷಕರಿಗಾಗಲಿ, ದಕ್ಷಿಣ ಕನ್ಡಡ ಜಿಲ್ಲೆಯಿಂದ ಉಡುಪಿಯ ಮೌಲ್ಯ ಮಾಪನ ಕೇಂದ್ರಕ್ಕೆ ತೆರಳುವ ಶಿಕ್ಷಕರಿಗೆ ಯಾವುದೇ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಇಷ್ಟು ದಿನ ನೂರಾರು ಕಿಲೋ ಮೀಟರ್ ಸಂಚರಿಸಿ ಮೌಲ್ಯ ಮಾಪನ ಕಾರ್ಯ ನಡೆಸುತ್ತಿರುವ ಶಿಕ್ಷಕರು ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲಾಡಳಿತಗಳಿಗೆ ಜಿಲ್ಲೆಯೊಳಗೆ ಶಿಕ್ಷಕರಿಗೆ ಬಸ್ ವ್ಯವಸ್ಥೆ ಕಲ್ಪಿಸಿದೆ. ಆದರೆ ಅವಳಿ ಜಿಲ್ಲೆಗಳ ನಡುವೆ ವಾಹನ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಿಲ್ಲ.

ಮಂಗಳೂರಲ್ಲಿ ಇಲ್ಲಾ ಉಡುಪಿಯಲ್ಲಿ ತಂಗಲು ಕೂಡ ಕೊರೊನಾ ಭೀತಿಯಿದೆ. ಸ್ವತಃ ವಾಹನದಲ್ಲಿ ಬಂದು ಹೋಗುವುದು ಕೂಡ ಅಷ್ಟು ಸುಲಭದ ಮಾತಲ್ಲ. ಉಡುಪಿ ಜಿಲ್ಲಾಡಳಿತ ಇಂದು ಸಂಜೆಯಿಂದ ಗಡಿಗಳನ್ನು ಮುಚ್ಚುತ್ತಿದ್ದು ಯಾರಿಗೂ ಅವಕಾಶವನ್ನು ಕಲ್ಪಿಸುವುದಿಲ್ಲ ಎಂದಿದೆ. ಶಿಕ್ಷಕರು ಒಂದೊಮ್ಮೆ ಸ್ವತಃ ವಾಹನ ಇಲ್ಲಾ, ಟ್ಯಾಕ್ಸಿ ಮಾಡಿಕೊಂಡು ಹೋದ್ರೆ ವಾಪಾಸ್ ಜಿಲ್ಲೆಗೆ ಬರುವುದಕ್ಕೆ ಬಿಡ್ತಾರೋ ಇಲ್ವೋ ಅನ್ನುವ ಆತಂಕ ಶಿಕ್ಷಕರನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಸ್ಪಷ್ಟನೆಯನ್ನೂ ಕೊಟ್ಟಿಲ್ಲ.

ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ನಿಜಕ್ಕೂ ಶಿಕ್ಷಕರು ಹೈರಾಣಾಗಿದ್ದಾರೆ. ದಿನಕ್ಕೊಂದು ಆದೇಶವನ್ನು ಹೊರಡಿಸುವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೊರೊನಾ ಸೀಲ್ ಡೌನ್, ಲಾಕ್ ಡೌನ್ ನಡುವಲ್ಲೇ ವ್ಯವಸ್ಥೆ ಕಲ್ಪಿಸದೇ ಮೌಲ್ಯ ಮಾಪನ ಮಾಡಿಸುತ್ತಿರುವುದು ನಿಜಕ್ಕೂ ದುರಂತ. ಈ ಹಿಂದೆ ನಿಗದಿಯಾಗಿದ್ದಂತೆ ಜುಲೈ 10ರಿಂದಲೇ ಮೌಲ್ಯಮಾಪನ ಕಾರ್ಯ ನಡೆಸಿದ್ದರೆ, ಇಷ್ಟು ಹೊತ್ತಿಗೆ ಹಲವು ವಿಷಯಗಳ ಮೌಲ್ಯ ಮಾಪನ ಮುಗಿಯುತ್ತಿತ್ತು. ಆದ್ರೆ ಶಿಕ್ಷಣ ಇಲಾಖೆ ಮೌಲ್ಯ ಮಾಪನ ಮುಂದೂಡುವ ಮೂಲಕ ಶಿಕ್ಷಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಇನ್ನಾದ್ರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಜಿಲ್ಲಾ ಕೇಂದ್ರದ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವ ಶಿಕ್ಷಕರಿಗೆ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಬೇಕೆದೆ. ಈ ಮೂಲಕ ಕೊರೊನಾ ಭೀತಿಯ ನಡುವಲ್ಲೇ ಮೌಲ್ಯಮಾಪನಕ್ಕೆ ಹಾಜರಾಗುವ ಶಿಕ್ಷಕರಿಗೆ ನೆರವಾಗುವ ನಿಟ್ಟಿನಲ್ಲಿ ಬಸ್ಸಿನ ವ್ಯವಸ್ಥೆಯನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾಡಬೇಕಾದ ಅನಿವಾರ್ಯತೆಯಿದೆ.

Leave A Reply

Your email address will not be published.