Heart Attack: ಹದಿಹರೆಯದ ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ; ಪೋಷಕರು ತೆಗೆದುಕೊಳ್ಳಲೇಬೇಕಿದೆ ಮುಂಜಾಗ್ರತಾ ಕ್ರಮ..!

Heart Attack: ಇನ್ನೂ ಜಗತ್ತನ್ನೇ ಅರಿಯದ ಪುಟ್ಟ ಬಾಲಕ ಆತ. ವಯಸ್ಸು 7.. 2ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸುಳ್ಯದ ಮೋಕ್ಷಿತ್ ಏಕಾಏಕಿ ಪ್ರಾಣ ಕಳೆದುಕೊಳ್ಳುತ್ತಾನೆ. ಕೆಲ ದಿನಗಳ ಹಿಂದೆ ಕುಂದಾಪುರದ 13 ವರ್ಷದ ಬಾಲಕಿ ಮನೆಯಲ್ಲಿ ಓದುತ್ತಿದ್ದ ಹಾಗೆ ಕುಸಿದುಬಿದ್ದು ಬಾರದ ಲೋಕಕ್ಕೆ ಪ್ರಯಾಣ ಮಾಡುತ್ತಾಳೆ. ಅದಕ್ಕೂ ಮೊದಲು ನಡೆದ ಚಿಕ್ಕಮಗಳೂರಿನ 14 ವಯಸ್ಸಿನ ವೈಷ್ಣವಿಯ ಎಂಬ ಬಾಲಕಿಯ ಸಾವೂ ಅದೇ ಕತೆ. ಈ ಎಲ್ಲಾ ಮಕ್ಕಳ ಸಾವಿನ ಹಿಂದಿದ್ದ ಕಾರಣ ಒಂದೇ ಅದುವೇ ಹೃದಯಾಘಾತ.

ಇದನ್ನೂ ಓದಿ: Home Remedies for Diabetes : ಸಕ್ಕರೆ ಕಾಯಿಲೆ ಸಮಸ್ಯೆಗೆ, ಒಣ ನೆಲ್ಲಿಕಾಯಿ ಪುಡಿಯಲ್ಲಿದೆ ಚಮತ್ಕಾರ

ಈ ಮೊದಲು ವಯಸ್ಕರ ಬೆನ್ನಿಗಂಟಿದ್ದ ಹೃದಯಾಘಾತ ಇದೀಗ ಮಕ್ಕಳನ್ನೂ ಬಿಡದೇ ಬಲಿ ತೆಗೆದುಕೊಳ್ಳುತ್ತಿದೆ. ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಚೆನ್ನಾಗಿಯೇ ಓಡಾಡಿಕೊಂಡಿದ್ದ ತನ್ನ ಮಗುವಿಗೆ ದಿಢೀರನೇ ಹಾರ್ಟ್ ಅಟ್ಯಾಕ್ (Heart Attack) ಆದರೆ ಕತೆ ಏನು ಅನ್ನೋ ಆತಂಕ ಇದೀಗ ಎಲ್ಲಾ ಪೋಷಕರ ನಿದ್ದೆಗೆಡಿಸಿದೆ. ಹಾಗಿದ್ರೆ ಮಕ್ಕಳಲ್ಲಿ ಉಂಟಾಗುತ್ತಿರುವ ಹೃದಯಾಘಾತಕ್ಕೆ ಕಾರಣವೇನು..? ಇದಕ್ಕೆ ಪರಿಹಾರ ಏನು..? ಪೋಷಕರು ತೆಗೆದುಕೊಳ್ಳ ಮುಂಜಾಗ್ರತೆ ಕ್ರಮಗಳೇನು..? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಹೃದಯಾಘಾತ ಎಂದರೇನು..?
ಮಾನವನ ದೇಹದ ನರಗಳಿಗೆ ರಕ್ತ ಸರಬರಾಜು ಮಾಡುವ ಕಾರ್ಯವನ್ನು ಹೃದಯ ಮಾಡುತ್ತದೆ. ಹೃದಯ ಸ್ತಂಭನ ಎಂದರೆ ಹೃದಯವು ಇದ್ದಕ್ಕಿದ್ದಂತೆ ದೇಹಕ್ಕೆ ರಕ್ತ ಸಂಚಲನ ಮಾಡುವುದನ್ನು ನಿಲ್ಲಿಸುತ್ತದೆ. ಹೃದಯದ ಒಂದು ಭಾಗದಲ್ಲಿ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಇದರಿಂದ ರಕ್ತನಾಳಗಳು ಹಾಗೂ ಸ್ನಾಯುಗಳಿಗೆ ಹಾನಿ ಉಂಟಾಗುತ್ತದೆ. ಹೃದಯ ತನ್ನ ಕಾರ್ಯ ನಿಲ್ಲಿಸಿದ ತಕ್ಷಣ ಉಸಿರಾಟ ಕ್ರಿಯೆ ಸ್ತಬ್ಧವಾಗುತ್ತದೆ. ಇದರಿಂದಾಗಿ ಮನುಷ್ಯ ಸಾವನ್ನಪ್ಪುತ್ತಾನೆ. ಇದೆಲ್ಲಾ ಕೆಲವೇ ಕ್ಷಣಗಳಲ್ಲಿ ನಡೆಯುವ ಪ್ರಕ್ರಿಯೆ ಆಗಿರುತ್ತದೆ.

ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ:
ಹೃದಯಾಘಾತ ಒಂದು ಗಂಭೀರ ಸಮಸ್ಯೆಯಾಗಿದ್ದು, ವಯಸ್ಕರ ಜೊತೆಗೆ ಮಕ್ಕಳೂ ಈ ಅಪಾಯವನ್ನು ಎದುರಿಸುತ್ತಿದ್ದಾರೆ. ಆರೋಗ್ಯವಾಗಿದ್ದ ಮಕ್ಕಳು ಏಕಾಏಕಿ ಕುಸಿದುಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರ ಹಿಂದೆ ಸಾಕಷ್ಟು ಕಾರಣಗಳಿವೆ.

ಸರಿಯಾದ ಆಹಾರ ಪೂರೈಕೆಯಲ್ಲಿ ಕೊರತೆ:
ಊಟ ಬಲ್ಲವನಿಗೆ ರೋಗವಿಲ್ಲ ಅನ್ನೋ ಮಾತೇ ಇದೆ. ಹಾಗೆಯೇ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರಕ್ಕಿಂತ ಉತ್ತಮ ಔಷಧವಿಲ್ಲ. ಹಾಗಂತ ಬಾಯಿ ರುಚಿಸುವ ಸಿಕ್ಕ ಸಿಕ್ಕ ಆಹಾರಗಳನ್ನು ತಿನ್ನೋದಲ್ಲ. ನಮ್ಮ ದೇಹಕ್ಕೆ ಯಾವೆಲ್ಲಾ ಆಹಾರಗಳು ಅವಶ್ಯಕವಿದೆ ಅವನ್ನಷ್ಟೆ ತಿನ್ನಬೇಕು. ಆದರೆ ಈಗಿನ ಮಕ್ಕಳು ಜಂಕ್ ಫುಡ್ ಗೆ ಹಟ ಹಿಡಿಯುತ್ತಾರೆ. ಮನೆಯಲ್ಲಿ ಮಾಡಿದ ಉತ್ತಮವಾದ ಆಹಾರವನ್ನು ಸೇವಿಸದೇ ಹೊರಗಡೆ ಸಿಗುವ ಎಣ್ಣೆ ಮಿಶ್ರಣ, ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರವನ್ನೇ ಅತಿಯಾಗಿ ತಿನ್ನುವುದು.

ಮೊಬೈಲ್. ಟಿವಿ ಚಟ:
ಹೊರಗಿನ ಆಹಾರಕ್ಕೆ ದಾಸರಾದ ಮಕ್ಕಳು ಹೊರಗಡೆ ಆಟವಾಡುವುದನ್ನು ಮರೆತೇ ಬಿಟ್ಟಿರುತ್ತಾರೆ. ಅದರ ಬದಲಾಗಿ ಮನೆಯೊಳಗೆ ಕೂತು ಟಿವಿ, ಮೊಬೈಲ್, ಲ್ಯಾಪ್ ಟಾಪ್ ಮುಂದೆ ಗಂಟೆಗಟ್ಟಲೆ ಸಮಯ ಕಳೆಯುತ್ತಾರೆ. ಹೀಗಾಗಿ ಅವರಲ್ಲಿ ಚಯಾಪಚಯ ದರವು ಕ್ಷೀಣಿಸುತ್ತದೆ. ಈ ಹೈಪೊಗ್ಲಿಸಿಮಿಯಾವು ಹೃದಯ ಸಮಸ್ಯೆ ತಂದಿಡುತ್ತದೆ.

ಕೊರೋನಾ ಎಫೆಕ್ಟ್..?
ಕೊರೋನಾ ಸಮಯದಲ್ಲಿ ಶಾಲೆಗಳಿಗೆ ರಜೆ ಇದ್ದ ಕಾರಣ ಮಕ್ಕಳು ಮನೆಯಲ್ಲೇ ದಿನ ಕಳೆಯುವಂತಾಗಿತ್ತು. ಕೋವಿಡ್ ಭಯದಲ್ಲಿ ಪೋಷಕರು ಮಕ್ಕಳನ್ನು ಹೊರಹೋಗಲು ಅನುಮತಿ ನೀಡುತ್ತಿರಲಿಲ್ಲ. ಈ ಸಮಯದಲ್ಲಿ ಮಕ್ಕಳು ಅಂಗಡಿಯಲ್ಲಿ ಸಿಗುವ ತಿಂಡಿಗಳನ್ನು ತಿಂದು ಟಿವಿ, ಲ್ಯಾಪ್ ಟಾಪ್, ಮೊಬೈಲ್ ಮುಂದೆ ತಾಸುಗಟ್ಟಲೇ ಅಲುಗಾಡದೇ ಕೂತಿರುತ್ತಿದ್ದರು. ಇದರಿಂದ ದೇಹಕ್ಕೂ , ಮನಸ್ಸಿಗೂ ವ್ಯಾಯಾಮ ಸಿಗದೇ ದುರ್ಬಲವಾಗುತ್ತವೆ.

ನಿದ್ದೆ ಕಡಿಮೆ:
ಹೃದಯದೊತ್ತಡಕ್ಕೆ ನಿದ್ದೆಯೂ ಕಾರಣವಾಗುತ್ತದೆ. ಓದಿನತ್ತ ಗಮನಹರಿಸದೇ ಕೇವಲ ಮೊಬೈಲ್, ಕಂಪ್ಯೂಟರ್ ಬಳಸುವ ಮಕ್ಕಳ ಕಣ್ಣುಗಳಿಗೆ ಬಲು ಬೇಗ ಆಯಾಸವಾಗುತ್ತವೆ. ಹೀಗಾಗಿ ಆ ಕಣ್ಣುಗಳಿಗೆ ಅತೀ ಹೆಚ್ಚು ವಿಶ್ರಾಂತಿ ಬೇಕಾಗುತ್ತದೆ. ಆದರೆ ಕೆಲ ಮಕ್ಕಳು ಬಹಳ ರಾತ್ರಿವರೆಗೂ ಮೊಬೈಲ್, ಟಿವಿ, ಲ್ಯಾಪ್ ಟಾಪ್ ಗಳ ಮುಂದೆಯೇ ಕಾಲ ಕಳೆಯುತ್ತಾರೆ. ಹೀಗಾಗಿ ಅವರಿಗೆ ನಿದ್ದೆ ಕಡಿಮೆ ಆಗಿ ಹೃದಯಕ್ಕೆ ಒತ್ತಡ ಬೀಳುವುದು.

ವ್ಯಾಯಾಮ ಇಲ್ಲದಿರುವುದು:
ಟಿವಿ. ಮೊಬೈಲ್ ಇಲ್ಲದ ಕಾಲದಲ್ಲಿ ಮಕ್ಕಳು ಹೊರಗಡೆ ಆಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಆದರೆ ಈಗಿನ ಮಕ್ಕಳಿಗೆ ಅದು ಬೇಡವಾಗಿದೆ. ಹೀಗಾಗಿ ಮನೆಯಲ್ಲೇ ಸಮಯ ಕಳೆಯುವ ಮಕ್ಕಳ ದೇಹಕ್ಕೆ ವ್ಯಾಯಾಮದ ಕೊರತೆ ಇರುವುದರಿಂದ ಅವರಲ್ಲಿ ಜೀರ್ಣಶಕ್ತಿ ಕಡಿಮೆ ಆಗುತ್ತದೆ. ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ.

ಮಕ್ಕಳ ದಿನಚರಿ:

ಈಗಿನ ಪೀಳಿಗೆಯ ಮಕ್ಕಳಲ್ಲಿ ಶಿಸ್ತಿನ ಕೊರತೆ ಇದೆ. ಬೆಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಸರಿಯಾದ ಕ್ರಮ ಪಾಲನೆ ಮಾಡದೇ ಇರುವುದು. ಹೊತ್ತೊತ್ತಿಗೆ ಸರಿಯಾಗಿ ಊಟ, ತಿಂಡಿ ಮಾಡದೇ ಇರುವುದು. ದೇಹಕ್ಕೆ ಅಗತ್ಯವಿರುವ ವ್ಯಾಯಾಮ ಸಿಗದಿರುವುದು. ಇವೆಲ್ಲವೂ ಮಕ್ಕಳಲ್ಲಿ ಕಾಯಿಲೆಗಳನ್ನು ಹುಟ್ಟುಹಾಕುತ್ತವೆ.

ಇದನ್ನೂ ಓದಿ: High Cholesterol : ಈ 5 ಹಣ್ಣುಗಳನ್ನು ತಿನ್ನಿ; ಅಧಿಕ ಕೊಲೆಸ್ಟ್ರಾಲ್‌ ಕಡಿಮೆ ಮಾಡಿಕೊಳ್ಳಿ…

ಮಕ್ಕಳನ್ನು ಸರಿಯಾದ ದಾರಿಗೆ ತರುವುದು, ಅವರಲ್ಲಿ ಶಿಸ್ತು ತರುವುದು ಎಲ್ಲಾ ತಂದೆ ತಾಯಿಗಳ ಕರ್ತವ್ಯ. ಮೊದಲಿಗೆ ಜಾಗರೂಕತೆ ಮಾಡದೇ ಸಮಸ್ಯೆ ಉಂಟಾದ ಬಳಿಕ ಬೇಸರಿಸಿಕೊಂಡರೆ ಏನೂ ಪ್ರಯೋಜನವಿಲ್ಲ. ಹೀಗಾಗಿ ಮೊದಲೇ ಎಚ್ಚರಿಕೆಯಲ್ಲಿದ್ದರೆ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಿದ್ದರೆ ಪೋಷಕರು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳೇನು..?

  • ಮುಖ್ಯವಾಗಿ ಮಕ್ಕಳಿಗೆ ಸಮಯ ನೀಡಬೇಕು. ಅವರೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು
  • ಅನಗತ್ಯ ಮೊಬೈಲ್, ಟಿವಿ, ಲ್ಯಾಪ್ ಟಾಪ್ ಬಳಕೆ ಕಂಡುಬಂದಲ್ಲಿ ಅವರ ಗಮನ ಓದಿನತ್ತ ಹರಿಸುವುದು.
  • ಮನೆಯಲ್ಲಿಯೇ ಅವರಿಗೆ ಇಷ್ಟ ಆಗುವಂಥ ಆರೋಗ್ಯಯುತ ಆಹಾರವನ್ನು ತಯಾರಿಸಿ ಕೊಡುವುದು.
  • ಹೊರಗಿನ ಆಹಾರಗಳಿಗೆ ಸಂಪೂರ್ಣ ಕಡಿವಾಣ ಹಾಕುವುದು.
  • ಮಕ್ಕಳನ್ನು ಹೊರಗಿನ ಆಟ(ದೇಹಕ್ಕೆ ವ್ಯಾಯಾಮ ಸಿಗುವಂಥ ಕ್ರಿಕೆಟ್, ಕಬಡ್ಡಿ, ವಾಲಿಬಾಲ್ ಇತ್ಯಾದಿ)ಗಳಿಗೆ ಪ್ರೇರೇಪಿಸುವುದು.
  • ಶಿಸ್ತಿನ ಜೀವನದ ಬಗ್ಗೆ ತಿಳಿ ಹೇಳುವುದು. ಅಂದರೆ ಹೊತ್ತೊತ್ತಿಗೆ ಊಟ, ತಿಂಡಿ, ನಿದ್ದೆಯ ಮಹತ್ವ ತಿಳಿಹೇಳುವುದು.
  • ಯೋಗ, ಧ್ಯಾನ, ಪ್ರಾಣಾಯಾಮದಂಥ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರೋತ್ಸಾಹಿಸುವುದು.
  • ಕನಿಷ್ಠ 6 ತಿಂಗಳಿಗೆ ಒಮ್ಮೆಯಾದರೂ ವೈದ್ಯರ ಬಳಿ ತಪಾಸಣೆ ಮಾಡಿಸುವುದು.

ಹೀಗೆ ಮಕ್ಕಳ ದೈಹಿಕ ಕ್ಷಮತೆ ಬಗ್ಗೆ ಪೋಷಕರು ಗಮನ ಹರಿಸಿದಾಗ ಹೃದಯಾಘಾತ ಅಥವಾ ಇನ್ನಿತರೆ ಆರೋಗ್ಯ ಸಮಸ್ಯೆಗಳು ಉಂಟಾಗುವುದರಿಂದ ತಪ್ಪಿಸಬಹುದು. ಅದಕ್ಕೆ ಒಂದು ಮಾತಿದೆ. ನಮ್ಮ ಆರೋಗ್ಯದ ಗುಟ್ಟು ನಮ್ಮ ಕೈಯಲ್ಲಿ.

Heart Attack: Heart attacks are increasing among teenagers; Parents have to take precautions

Comments are closed.