ಡೆಂಗ್ಯೂ ಲಸಿಕೆ ಶೀಘ್ರದಲ್ಲೇ ಮಾರುಕಟ್ಟೆಗೆ ತರಲಿದೆ ನಮ್ಮ ಭಾರತ : ಕೊನೆಯ ಹಂತದ ತಯಾರಿ ಮಾತ್ರ ಬಾಕಿ
ಜಾಗತಿಕವಾಗಿ ಡೆಂಗ್ಯೂ ಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸೊಳ್ಳೆಯಿಂದ ಹರಡುವಂತಹ ಕಾಯಿಲೆ ಇದಾಗಿದ್ದು, ಇದೀಗ ಡೆಂಗ್ಯೂ ಮುಕ್ತ ಭಾರತ ನಿರ್ಮಾಣದತ್ತ ಹೊಸ ಭರವಸೆಯೊಂದು ಮೂಡಿದೆ. ಹೌದು.. ಡೆಂಗ್ಯೂ ಕಾಯಿಲೆ ವಿರುದ್ಧ ಹೋರಾಡುವಂತಹ ವಿಶ್ವದ ಪ್ರಪ್ರಥಮ ಸಿಂಗಲ್ ಡೋಸ್ ಲಸಿಕೆಯೊಂದು ಭಾರತದಲ್ಲಿಯೇ ತಯಾರಾಗುತ್ತಿದ್ದು ಅಂತಿಮ ಹಂತದ ಪರೀಕ್ಷೆಯನ್ನು ಎದುರಿಸುತ್ತಿದೆ.
ಜನನಿಬಿಡ ಪ್ರದೇಶ, ಹೆಚ್ಚುತ್ತಿರುವ ತಾಪಮಾನಗಳಿಂದಾಗಿ ಎಲ್ಲೆಡೆ ಡೆಂಗ್ಯೂ ಮಹಾಮಾರಿ ಸ್ಫೋಟಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕವಾಗಿ ಅರ್ಧದಷ್ಟು ಜನರು ಡೆಂಗ್ಯೂ ಅಪಾಯದಲ್ಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದೆ. ಪ್ರತಿ ವರ್ಷ 100 ರಿಂದ 400 ಮಿಲಿಯನ್ ಡೆಂಗ್ಯೂ ಸೋಂಕು ಪ್ರಕರಣಗಳು ವರದಿಯಾಗುತ್ತಿದೆ. 2021ರಿಂದ ಕೇವಲ ಭಾರತವೊಂದರಿಂದಲೇ 1 ಮಿಲಿಯನ್ಗೂ ಅಧಿಕ ಪ್ರಕರಣ ದಾಖಲಾಗಿದ್ದು ಈ ಪೈಕಿ ಕನಿಷ್ಟ 1500 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಜಾಗತಿಕವಾಗಿ ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ಮಾರಿ ತಡೆಗಾಗಿ ಪ್ಯಾನೆಸಿಯಾ ಬಯೋಟೆಕ್ ಡೇಂಗಿ ಆಲ್ (DengiAll) ಲಸಿಕೆಯ ಅಂತಿಮ ಹಂತದ ಪರೀಕ್ಷೆಯನ್ನು ಆರಂಭಿಸಿದೆ. 15 ವರ್ಷಗಳಿಂದ ಈ ಲಸಿಕೆಯ ಪ್ರಯೋಗ ನಡೆಯುತ್ತಿದ್ದು ಈಗ ಕೊನೆಯ ಹಂತದಲ್ಲಿದೆ. ಭಾರತದಾದ್ಯಂತ 10 ಸಾವಿರಕ್ಕೂ ಅಧಿಕ ಜನರನ್ನು ಈ ಲಸಿಕೆಯ ಅಧ್ಯಯನದಲ್ಲಿ ಬಳಕೆ ಮಾಡಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಇದರ ಮೇಲ್ವಿಚಾರಣೆ ವಹಿಸಿದೆ.
ಪ್ರಾಯೋಗಿಕ ಪರೀಕ್ಷೆಗಳಲ್ಲಿ ಈ ಲಸಿಕೆಯು ಉತ್ತೀರ್ಣಗೊಂಡರೆ ಮುಂದಿನ ವರ್ಷದ ಆರಂಭದಲ್ಲಿಯೇ ಮಾರುಕಟ್ಟೆಗೆ ಡೆಂಗ್ಯೂ ಲಸಿಕೆಗಳು ಲಗ್ಗೆ ಇಡಲಿವೆ.
ಈ ಲಸಿಕೆಯನ್ನು ಆದಷ್ಟು ಬೇಗ ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪ್ಯಾನೇಸಿಯಾ ಸಂಸ್ಥೆಯ ಮುಖ್ಯ ವೈಜ್ಞಾನಿಕ ಅಧಿಕಾರಿ ಸೈಯದ್ ಖಾಲಿದ್ ಮಾಹಿತಿ ನೀಡಿದ್ದಾರೆ.



