ಸೈಬರ್ ವಂಚಕರಿಂದ ನಿರಂತರ 3 ದಿನಗಳ ವಿಡಿಯೋ ಕಾಲ್ : ವೃದ್ಧ ದಂಪತಿಗೆ ಪೊಲೀಸರ ಸೋಗಿನಲ್ಲಿ 50 ಲಕ್ಷ ರೂ. ಪಂಗನಾಮ
Cyber fraud: ನಿವೃತ್ತ ಬ್ಯಾಂಕರ್ ಹಾಗೂ ಅವರ ಪತ್ನಿಯನ್ನು ಸೈಬರ್ ಅಧಿಕಾರಿಗಳಂತೆ ನಟಿಸಿ ಬರೋಬ್ಬರಿ ಮೂರು ದಿನಗಳ ಕಾಲ ವಿಡಿಯೋ ಕಾಲ್ನಲ್ಲಿಯೇ ಇರುವಂತೆ ಒತ್ತಾಯಿಸಿ 50 ಲಕ್ಷ ರೂಪಾಯಿಗಳನ್ನು ವಂಚಿಸಿದ ಆಘಾತಕಾರಿ ಘಟನೆಯು ಮುಂಬೈನಲ್ಲಿ ಸಂಭವಿಸಿದೆ. ಮೋಸಕ್ಕೊಳಗಾದ ವೃದ್ಧ ಈ ಸಂಬಂಧ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಸೆಪ್ಟೆಂಬರ್ 11ರಂದು ನಿವೃತ್ತ ವ್ಯಕ್ತಿಗೆ ನಾಸಿಕ್ ಪೊಲೀಸರು ಎಂದು ಹೇಳಿಕೊಂಡು ವಾಟ್ಸಾಪ್ ಕರೆಗಳು ಬಂದಿದ್ದವು. ಪೊಲೀಸ್ ಅಧಿಕಾರಿಯಂತೆ ನಟಿಸಿದ ವ್ಯಕ್ತಿಯು ನಿಮ್ಮ ಹೆಸರಿನಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಬೆದರಿಸಿದ್ದಾರೆ. ಅಲ್ಲದೇ ಈ ಸಂಬಂಧ ನಕಲಿ ಎಫ್ಐಆರ್ನ್ನೂ ತೋರಿಸಿದ್ದಾರೆ.
ಬಳಿಕ ಮತ್ತೊಬ್ಬ ವ್ಯಕ್ತಿಯು ಕರೆ ಮಾಡಿ ತಾನು ರಾಷ್ಟ್ರೀಯ ತನಿಖಾ ಸಂಸ್ಥೆಯ ಐಪಿಎಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದು ನಿಮ್ಮ ಮೇಲೆ ನಿಗಾ ಇಡಲು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ನಿರಂತರ ಮೂರು ದಿನಗಳ ಕಾಲ ವೃದ್ಧ ದಂಪತಿಯನ್ನು ವಿಡಿಯೋ ಕಾಲ್ನಲ್ಲಿ ಇರಿಸಿಕೊಂಡಿದ್ದರು. ಈ ಮೂಲಕ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಷಡ್ಯಂತ್ರ ವಂಚಕರಾಗಿತ್ತು. ಇದರಲ್ಲಿ ಯಶಸ್ವಿಯಾದ ವಂಚಕರು ವೃದ್ಧ ದಂಪತಿಗಳನ್ನು ಗೃಹ ಬಂಧನದಲ್ಲಿರಿಸಿಕೊಂಡಿದ್ದಾರೆ.
Also Read: ರಕ್ಷಣೆ ನೀಡಬೇಕಾದ ಆರಕ್ಷಕಿಯಿಂದಲೇ ಕಳ್ಳತನ : ಪ್ರಾಣ ಸ್ನೇಹಿತೆ ನಿವಾಸದಿಂದಲೇ ಹಣ ಎಗರಿಸಿದ ಚಾಲಾಕಿ ಪೊಲೀಸ್
ನಕಲಿ ವಿಚಾರಣೆಯ ನಾಟಕವಾಡಿದ ವಂಚಕರು ದಂಪತಿಗಳಿಂದ ಬ್ಯಾಂಕ್ ಖಾತೆಗಳು ಹಾಗೂ ಸ್ಥಿರ ಠೇವಣಿಗಳ ವಿವರಗಳನ್ನು ತೆಗೆದುಕೊಂಡಿದ್ದಾರೆ. ಇದರಲ್ಲಿರುವ ಹಣವನ್ನು ಪರಿಶೀಲಿಸುತ್ತೇವೆ ಎಂದು ಹೇಳಿ ದಂಪತಿಯಿಂದ ಪಾಸ್ವರ್ಡ್ ಹಾಗೂ ಒಟಿಪಿಗಳನ್ನು ಪಡೆದುಕೊಂಡು 50 ಲಕ್ಷ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗುತ್ತಿದ್ದಂತೆಯೇ ಕರೆಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡವು ಎಂದು ನಿವೃತ್ತ ಬ್ಯಾಂಕರ್ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆಯೇ ತನಿಖೆ ಆರಂಭಿಸಿದ ಉತ್ತರ ವಲಯ ಸೈಬರ್ ಪೊಲೀಸರು ವಂಚನೆಗೊಳಗಾದ ಹಣದ ಪೈಕಿ 29.5 ಲಕ್ಷ ರೂಪಾಯಿಯನ್ನು ಆರೋಪಿಗಳಿಂದ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಈ ಹಣವು ಥಾಣೆ ಜಿಲ್ಲೆಯ ಉಲ್ಲಾಸ ನಗರದ ನಿವಾಸಿ ರವಿ ಆನಂದ್ ಎಂಬಾತ ವಂಚಿಸಿ ಪಡೆದುಕೊಂಡಿದ್ದ ಎನ್ನಲಾಗಿದೆ.
ಆರೋಪಿ ರವಿ ಆನಂದನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಇತ ತಾನೂ ಸೈಬರ್ ವಂಚಕರಿಗೆ ತನ್ನ ಖಾತೆಯನ್ನು ಬಾಡಿಗೆಗೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈತ ನೀಡಿದ ಮಾಹಿತಿ ಆಧರಿಸಿ ಮತ್ತೊಬ್ಬ ಆರೋಪಿ ಚಂದ್ರಕಾಂತ್ ಜಾದವ್ ಎಂಬಾತನನ್ನು ಬಂಧಿಸಲಾಗಿದೆ. ಇವರ ಖಾತೆಗಳನ್ನು ಇದೇ ರೀತಿಯ ಇನ್ನೂ 7 ಸೈಬರ್ ವಂಚನೆಗಳಲ್ಲಿ ಬಳಸಲಾಗಿದೆ ಎಂದು ತಿಳಿದುಬಂದಿದೆ.
Also Read: ವಿದೇಶದಲ್ಲಿ ಪುರುಷನ ಲೈಂಗಿಕ ದೌರ್ಜನ್ಯವೆಸಗಿ ಜೈಲುಪಾಲಾದ ಭಾರತೀಯ ವ್ಯಕ್ತಿ



