ರಕ್ಷಣೆ ನೀಡಬೇಕಾದ ಆರಕ್ಷಕಿಯಿಂದಲೇ ಕಳ್ಳತನ : ಪ್ರಾಣ ಸ್ನೇಹಿತೆ ನಿವಾಸದಿಂದಲೇ ಹಣ ಎಗರಿಸಿದ ಚಾಲಾಕಿ ಪೊಲೀಸ್
Madhyapradesh: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿದೆ. ಈ ಮಾತನ್ನು ಈಗ ನೆನಪಿಸಲು ಕಾರಣ ಕೂಡ ಇದೆ. ಮಹಿಳಾ ಉಪ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ತಮ್ಮ ಸ್ನೇಹಿತ ಮನೆಯಿಂದ 2 ಲಕ್ಷ ರೂಪಾಯಿ ನಗದು ಹಾಗೂ ಮೊಬೈಲ್ ಫೋನ್ ಎಗರಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಕಳ್ಳಾಟಗಳು ಬಯಲಾಗಿದ್ದು ಆರಕ್ಷಕರೇ ಈ ರೀತಿ ಕೃತ್ಯದಲ್ಲಿ ಭಾಗಿಯಾದರೆ ಯಾರನ್ನ ನಂಬೋದು ಸ್ವಾಮಿ ಅಂತಾ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಈ ಘಟನೆ ಸಂಭವಿಸಿದೆ.
ಭೋಪಾಲ್ನ ಜೆಹಾಂಗೀರಾಬಾದ್ ಪ್ರದೇಶದಲ್ಲಿ ವಾಸವಿರುವ ಪ್ರಮೀಳಾ ಎಂಬವರು ಈ ಪ್ರಕರಣದ ಆರೋಪಿಯಾಗಿರುವ ಡಿಎಸ್ಪಿ ಕಲ್ಪನಾ ರಘುವಂಶಿಯೊಂದಿಗೆ ಕಳೆದ ಅನೇಕ ವರ್ಷಗಳಿಂದ ಸ್ನೇಹಿತರಿದ್ದರು ಎನ್ನಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಪ್ರಮೀಳಾ ತಮ್ಮ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಬ್ಯಾಂಕ್ನಿಂದ 2 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ಬಂದಿದ್ದರು ಎನ್ನಲಾಗಿದೆ. ಸ್ನಾನ ಮಾಡಿ ವಾಪಾಸ್ ಬರುವಷ್ಟರಲ್ಲಿ ಮೊಬೈಲ್ ಫೋನ್ ಹಾಗೂ ನಗದು ಎರಡೂ ನಾಪತ್ತೆಯಾಗಿತ್ತು ಎಂದು ಪ್ರಮೀಳಾ ಮಾಹಿತಿ ನೀಡಿದ್ದಾರೆ.
ಈ ಕೃತ್ಯದ ಬಗ್ಗೆ ಅನುಮಾನಗೊಂಡ ಪ್ರಮೀಳಾ ತಮ್ಮ ಮನೆಯ ಸಿಸಿ ಕ್ಯಾಮರಾವನ್ನು ಪರಿಶೀಲಿಸಿ ನೋಡಿದಾಗ ಸ್ನೇಹಿತೆ ಕಲ್ಪನಾ ರಘುವಂಶಿ ತಮ್ಮ ಮನೆಯಿಂದ ದುಡ್ಡಿನ ಬ್ಯಾಗ್ ಹೊತ್ತೊಯ್ಯುತ್ತಿರುವುದು ಕಂಡು ಬಂದಿದೆ.
Also Read: ವಿದೇಶದಲ್ಲಿ ಪುರುಷನ ಲೈಂಗಿಕ ದೌರ್ಜನ್ಯವೆಸಗಿ ಜೈಲುಪಾಲಾದ ಭಾರತೀಯ ವ್ಯಕ್ತಿ
ಈ ಘಟನೆಯಿಂದ ಆಘಾತಕ್ಕೊಳಗಾದ ಪ್ರಮೀಳಾ ಕೂಡಲೇ ಪೊಲೀಸರನ್ನು ಸಂಪರ್ಕಿಸಿ ಈ ಪ್ರಕರಣ ಸಂಬಂಧ ದೂರು ದಾಖಲಿಸಿದ್ದಾರೆ. ಸಿಸಿ ಟಿವಿ ಕ್ಯಾಮರಾದಲ್ಲಿ ಪೊಲೀಸ್ ಅಧಿಕಾರಿ ಕಲ್ಪನಾ ರಘುವಂಶಿ ತನ್ನ ಕೈಯಲ್ಲಿ ನೋಟಿನ ಬಂಡಲ್ಗಳನ್ನು ಹಿಡಿದುಕೊಂಡಿರುವುದು ಗಮನಕ್ಕೆ ಬಂದಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಸಾಕ್ಷ್ಯಾಧಾರಗಳನ್ನು ಆಲಿಸಿದ ಪೊಲೀಸರು ಡಿಎಸ್ಪಿ ವಿರುದ್ಧವೇ ಎಫ್ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದ ಬಳಿಕ ಕಲ್ಪನಾ ರಘುವಂಶಿ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಕಲ್ಪನಾ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು ಪ್ರಮೀಳಾ ಅವರ ಕಾಣೆಯಾಗಿರುವ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ . ಆದರೆ 2 ಲಕ್ಷ ರೂಪಾಯಿ ನಗದು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



