ಪಾಕ್ ಪ್ರಧಾನಿ ಷರೀಫ್ ವಿರುದ್ಧ ಪಾಕಿಸ್ತಾನದಲ್ಲೇ ಭಾರೀ ಜನಾಕ್ರೋಶ; ಶುರುವಾಗುತ್ತಾ ದಂಗೆ?
Board of Peace | Donald Trump | Pakistani Prime Minister Shehbaz Sharif: ಇಸ್ಲಾಮಾಬಾದ್/ದಾವೋಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಿತ ‘ಬೋರ್ಡ್ ಆಫ್ ಪೀಸ್’ (Board of Peace) ಸಮಿತಿಗೆ ಸೇರುವ ಪಾಕಿಸ್ತಾನ ಸರ್ಕಾರದ ನಿರ್ಧಾರ ಈಗ ಆ ದೇಶದಲ್ಲಿ ಭಾರಿ ರಾಜಕೀಯ ಸಂಚಲನ ಮೂಡಿಸಿದೆ. 2020ರಲ್ಲಿ ಟ್ರಂಪ್ ಅವರ ಮಧ್ಯಪ್ರಾಚ್ಯ ಶಾಂತಿ ಯೋಜನೆಯನ್ನು ಕಟುವಾಗಿ ವಿರೋಧಿಸಿದ್ದ ಪ್ರಧಾನಿ ಶೆಹಬಾಜ್ ಷರೀಫ್, ಈಗ ಅದೇ ಯೋಜನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಟ್ರಂಪ್ ಅವರ 20 ಅಂಶಗಳ ಶಾಂತಿ ಒಪ್ಪಂದದ ಚಾರ್ಟರ್‌ಗೆ ಶೆಹಬಾಜ್ ಷರೀಫ್ ಸಹಿ ಹಾಕಿದ್ದಾರೆ. “ಗಾಜಾದಲ್ಲಿ ಶಾಂತಿ ಸ್ಥಾಪಿಸಲು ಮತ್ತು ಇಸ್ರೇಲ್-ಪ್ಯಾಲೆಸ್ತೀನ್ ನಡುವೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಈ ಯೋಜನೆ ಅತ್ಯಗತ್ಯ” ಎಂದು ಅವರು ಈ ವೇಳೆ ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಷರೀಫ್ ಅವರ ಈ ಹಠಾತ್ ಬದಲಾವಣೆ ಅವರ ಹಳೆಯ ನಿಲುವುಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. 2020ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಮಯದಲ್ಲಿ ಇದೇ ಶೆಹಬಾಜ್ ಷರೀಫ್ ಅವರು ಟ್ರಂಪ್ ಅವರ ಯೋಜನೆಯನ್ನು “ಅನ್ಯಾಯದ, ಪಕ್ಷಪಾತದ ಮತ್ತು ದಬ್ಬಾಳಿಕೆಯ ನಡೆ” ಎಂದು ಕಿಡಿಕಾರಿದ್ದರು. ಅಷ್ಟೇ ಅಲ್ಲದೆ, ಇದು ಇಸ್ರೇಲ್‌ನ ಅಕ್ರಮ ವಸಾಹತುಗಳನ್ನು ಅಧಿಕೃತಗೊಳಿಸುವ ಸಂಚು ಎಂದು ಟೀಕಿಸಿದ್ದರು.
ಷರೀಫ್ ಅವರ ಈ ಯು-ಟರ್ನ್ ಅನ್ನು ಪಾಕಿಸ್ತಾನದ ವಿರೋಧ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ತೀವ್ರವಾಗಿ ಖಂಡಿಸಿದೆ. ದೇಶದ ಹಿತಾಸಕ್ತಿಗೆ ಸಂಬಂಧಿಸಿದ ಇಂತಹ ಪ್ರಮುಖ ನಿರ್ಧಾರವನ್ನು ಸಂಸತ್ತಿನಲ್ಲಿ ಚರ್ಚಿಸದೆ ಅಥವಾ ಇತರ ಪಕ್ಷಗಳೊಂದಿಗೆ ಸಮಾಲೋಚಿಸದೆ ಕೈಗೊಂಡಿರುವುದು ಸರಿಯಲ್ಲ ಎಂದು ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಹೇಳಿದೆ. ಇದು ಕೇವಲ ಟ್ರಂಪ್ ಅವರ ಮೆಚ್ಚುಗೆ ಗಳಿಸಲು ಮಾಡಿದ ಪ್ರಯತ್ನ ಎಂದು ರಾಜಕೀಯ ವಿಮರ್ಶಕರು ದೂರಿದ್ದಾರೆ.
‘ಜಿಲ್ಲಾಧಿಕಾರಿಯ ಧಾರ್ಮಿಕ ಭಾವನೆಗಳನ್ನು ನಿಯಂತ್ರಿಸುವ ಅಧಿಕಾರ ಸರ್ಕಾರಕ್ಕಿಲ್ಲ’ : ರಾಜ ಶೇಖರಾನಂದ ಸ್ವಾಮೀಜಿ
ಮತ್ತೊಂದೆಡೆ, ಸಾಮಾಜಿಕ ಕಾರ್ಯಕರ್ತೆ ಫಾತಿಮಾ ಭುಟ್ಟೋ ಸೇರಿದಂತೆ ಹಲವು ಗಣ್ಯರು, “ಪ್ಯಾಲೆಸ್ತೀನ್ ಜನರ ಮಾರಣಹೋಮಕ್ಕೆ ಕಾರಣವಾದವರ ಜೊತೆ ಒಂದೇ ವೇದಿಕೆಯಲ್ಲಿ ಪಾಕಿಸ್ತಾನ ಕುಳಿತುಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಷರೀಫ್ ಸರ್ಕಾರವು ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಹರಸಾಹಸ ಪಡುತ್ತಿದೆ.



