ಖ್ಯಾತ ಹಿರಿಯ ಸಾಹಿತಿ ಎಸ್ಎಲ್ ಬೈರಪ್ಪ ನಿಧನ
SL Bhyrappa: ಕನ್ನಡದ ಪ್ರಸಿದ್ಧ ಕಾದಂಬರಿಕಾರ, ಖ್ಯಾತ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಇಂದು (ಸೆಪ್ಟೆಂಬರ್ 24, 2025) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭೈರಪ್ಪನವರು ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 94 ವರ್ಷದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪನವರ ನಿಧನದಿಂದ ಕನ್ನಡದ ಸಾಹಿತ್ಯ ಲೋಕ ದುಃಖದಲ್ಲಿ ಮುಳುಗಿದೆ. ಪ್ರಸಿದ್ಧ ಕಾದಂಬರಿಕಾರರು ಹಾಗೂ ಲೇಖಕರಾಗಿದ್ದ ಭೈರಪ್ಪನವರಿಗೆ 2023ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಭೈರಪ್ಪನವರ ಪ್ರಸಿದ್ಧ ಕಾದಂಬರಿಗಳು
ಎಸ್ ಎಲ್ ಭೈರಪ್ಪನವರು ಅನೇಕ ಕಾದಂಬರಿಗಳನ್ನು ರಚಿಸಿದ್ದಾರೆ. ವಂಶವೃಕ್ಷ, ದಾಟು, ಅಂಚು, ತಂತು, ಪರ್ವ, ಗೃಹಭಂಗ, ಅನ್ವೇಷಣೆ, ಮಂದ್ರ, ನಾಯಿನೆರಳು, ದೂರಸರಿದವರು, ಮತದಾನ, ಯಾನ, ಉತ್ತರಕಾಂಡ ಮುಂತಾದವುಗಳು ಅವರ ಪ್ರಸಿದ್ಧ ಕಾದಂಬರಿಗಳು. ಅವರು ಬರೆದಿರುವ ಕಾದಂಬರಿಗಳು ಹಿಂದಿ, ಮರಾಠಿ, ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅನುವಾದಗೊಂಡಿವೆ. ಕೆಲವು ಕಾದಂಬರಿಗಳು ನಾಟಕ, ಸಿನಿಮಾಗಳಾಗಿ ಅವರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿವೆ.
ಎಸ್ ಎಲ್ ಭೈರಪ್ಪನವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರಿಗೆ ನಾಡೋಜ, 2010ರಲ್ಲಿ ಸರಸ್ವತಿ ಸಮ್ಮಾನ್, 2015 ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್, 2016ರಲ್ಲಿ ಪದ್ಮಶ್ರಿ ಹಾಗೂ 2023 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳು ಬಂದಿವೆ.
(Great veteran kannada novelist SL Bhyrappa passes away)



