ವಿಜಯನಗರ : ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಇಂದು ಬೆಳ್ಳಂಬೆಳಗ್ಗೆ ಅಡುಗೆ ಸಿಲಿಂಡರ್ ಸ್ಫೋಟ (Cylinder blast) ಗೊಂಡ ಪರಿಣಾಮ ಒಂದೇ ಕುಟುಂಬದ 8 ಮಂದಿ ಗಾಯಗೊಂಡಿದ್ದು, ಓರ್ವರ ಸ್ಥಿತಿ ಗಂಭೀರವಾಗಿದೆ.
ಗಾದಿಗನೂರಿನ ವಕೀಲ ಹಾಲಪ್ಪ ಅವರಿಗೆ ಸೇರಿದ ಮನೆಯಲ್ಲಿ ಈ ದುರಂತ ಸಂಭವಿಸಿದೆ. ಮನೆಯಲ್ಲಿ ಸುಮಾರು 10 ಮಂದಿ ಇದ್ದು, ಮುಂಜಾನೆ ಅಡುಗೆ ಮಾಡುವಾಗ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಸ್ಫೋಟದ ರಭಸಕ್ಕೆ ಮನೆ ಶೇ. 60ರಷ್ಟು ಧ್ವಂಸಗೊಂಡಿದ್ದು, ಮನೆಯ ಗೋಡೆಗಳು ಕುಸಿದು ಬಿದ್ದಿವೆ.
ಗಾಯಗೊಂಡವರನ್ನು ಕವಿತಾ (32 ವರ್ಷ), ಹಾಲಪ್ಪ (42 ವರ್ಷ), ಗಂಗಮ್ಮ (63 ವರ್ಷ), ಮೈಲಾರಪ್ಪ (48 ವರ್ಷ), ಮಲ್ಲಮ್ಮ (40 ವರ್ಷ), ಕಾವೇರಿ (18 ವರ್ಷ), ಕಾವ್ಯ (15 ವರ್ಷ) ಮತ್ತು ನಿಖಿಲ್ (13 ವರ್ಷ) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ಸಿನಿಮಾ, ನಾಟಕವಾಗಿ ಜನರ ಮನಸ್ಸಿನಲ್ಲಿ ನೆಲೆಸಿರುವ ಭೈರಪ್ಪನವರ ಕಾದಂಬರಿಗಳು ಯಾವುವು ಗೊತ್ತಾ?
ಮನೆಯ ಯಜಮಾನಿ ಕವಿತಾ ಅವರ ಸ್ಥಿತಿ ಗಂಭೀರವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕೂಡಲೇ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : ಖ್ಯಾತ ಹಿರಿಯ ಸಾಹಿತಿ ಎಸ್ಎಲ್ ಬೈರಪ್ಪ ನಿಧನ
ಸಿಲಿಂಡರ್ ಸ್ಫೋಟ (Cylinder blast) ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಹೊಸಪೇಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನಿಲ ಸೋರಿಕೆಯಾಗಿ, ಮನೆಯಲ್ಲಿ ಅನಿಲ ಆವರಿಸಿದ ನಂತರ ಒಲೆ ಹಚ್ಚಲು ಯತ್ನಿಸಿದಾಗ ಈ ಸ್ಫೋಟ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಸಂಬಂಧ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



