ರಾಜ್ಯದ ಸಾಲದ ಬಗ್ಗೆ ಅಪಪ್ರಚಾರ ಬೇಡ : ಸಿಎಂ ಸಿದ್ದರಾಮಯ್ಯ

ಆರ್. ಅಶೋಕ್ ಅವರು ಈ ಬಜೆಟ್ ಅನ್ನು ಒಂದು ವರ್ಗಕ್ಕೆ ಸೀಮಿತ ಎಂದು ಟೀಕಿಸಿದ್ದಾರೆ. ಆದರೆ, ನಮ್ಮ ಬಜೆಟ್‌ನ ಮೂಲ ಉದ್ದೇಶವೇ ಸಾಮಾಜಿಕ ನ್ಯಾಯ.

ಮೈಸೂರು: ಕರ್ನಾಟಕ ಸರ್ಕಾರದ ಸಾಲದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕಿಅಂಶಗಳ ಸಮೇತ ತಿರುಗೇಟು ನೀಡಿದ್ದಾರೆ. “ರಾಜ್ಯದ ಸಾಲದ ಪ್ರಮಾಣ ಮಿತಿಯಲ್ಲಿದೆ, ಆದರೆ ಕೇಂದ್ರದ ಸಾಲದ ಹೊರೆ ದೇಶವನ್ನು ಹೈರಾಣಾಗಿಸಿದೆ” ಎಂದು ಅವರು ಟೀಕಿಸಿದ್ದಾರೆ.

ಮೈಸೂರಿನ ಪಿಲ್ಲಹಳ್ಳಿ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಜೆಟ್ ಮತ್ತು ಸಾಲದ ಕುರಿತಾದ ಪ್ರಮುಖ ಸತ್ಯಾಂಶಗಳನ್ನು ಬಿಚ್ಚಿಟ್ಟರು.

ಪ್ರಧಾನಿ ಮೋದಿ ಅವಧಿಯ ಸಾಲದ ಲೆಕ್ಕಾಚಾರ:

ಬಿಜೆಪಿಯ ಟೀಕೆಗಳಿಗೆ ಉತ್ತರಿಸಿದ ಸಿಎಂ, “ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದ ಸಾಲ ₹165 ಲಕ್ಷ ಕೋಟಿ ಹೆಚ್ಚಳವಾಗಿದೆ. ಪ್ರಸ್ತುತ ದೇಶದ ಒಟ್ಟು ಸಾಲ ₹218 ಲಕ್ಷ ಕೋಟಿಗೆ ತಲುಪಿದ್ದು, ಇದು ಜಿಡಿಪಿಯ ಶೇ. 55.6 ರಷ್ಟಿದೆ. ಆದರೆ ಕರ್ನಾಟಕದ ಸಾಲ ಕೇವಲ ಶೇ. 24.94 ರಷ್ಟಿದ್ದು, ಇದು ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಶೇ. 25 ರ ಮಿತಿಯೊಳಗೇ ಇದೆ” ಎಂದು ವಿವರಿಸಿದರು.

ಕರ್ನಾಟಕದ ಆರ್ಥಿಕ ಶಿಸ್ತು:

ರಾಜ್ಯದ ವಿತ್ತೀಯ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ ಸಿದ್ದರಾಮಯ್ಯ, “ಭಾರತದ ವಿತ್ತೀಯ ಕೊರತೆ ಶೇ. 4.4 ರಷ್ಟಿದ್ದರೆ, ಕರ್ನಾಟಕದ ವಿತ್ತೀಯ ಕೊರತೆ ಶೇ. 2.95 ರಷ್ಟಿದೆ. ನಿಯಮದ ಪ್ರಕಾರ ಇದು ಶೇ. 3 ರ ಒಳಗೆ ಇರಬೇಕು, ನಾವು ಆ ಶಿಸ್ತನ್ನು ಕಾಪಾಡಿಕೊಂಡಿದ್ದೇವೆ. ₹33,05,500 ಕೋಟಿ ಜಿಡಿಪಿ ಹೊಂದಿರುವ ಕರ್ನಾಟಕ ಸುಭದ್ರವಾಗಿದೆ” ಎಂದರು.

Also Read : ಕರ್ನಾಟಕದ ಪ್ರತಿ ವ್ಯಕ್ತಿಯ ಮೇಲಿದೆ 1.17 ಲಕ್ಷ ಸಾಲ: ರಾಜ್ಯದ ಸಾಲದ ಹೊರೆ 8.24 ಲಕ್ಷ ಕೋಟಿಗೆ ಏರಿಕೆ

ಸಾಮಾಜಿಕ ನ್ಯಾಯದ ಬಜೆಟ್:

“ಆರ್. ಅಶೋಕ್ ಅವರು ಈ ಬಜೆಟ್ ಅನ್ನು ಒಂದು ವರ್ಗಕ್ಕೆ ಸೀಮಿತ ಎಂದು ಟೀಕಿಸಿದ್ದಾರೆ. ಆದರೆ, ನಮ್ಮ ಬಜೆಟ್‌ನ ಮೂಲ ಉದ್ದೇಶವೇ ಸಾಮಾಜಿಕ ನ್ಯಾಯ. ಸಮಾಜದ ಪ್ರತಿಯೊಂದು ವರ್ಗಕ್ಕೂ ಸಮಾನ ಅವಕಾಶ ಮತ್ತು ಸೌಲಭ್ಯ ನೀಡುವುದು ನಮ್ಮ ಗುರಿ” ಎಂದು ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದರು.

ಕೇಂದ್ರದಿಂದ ₹10,000 ಕೋಟಿ ಅನ್ಯಾಯ:

ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನದ ಬಗ್ಗೆ ಮಾತನಾಡಿದ ಅವರು, “ಕೇಂದ್ರದ ಜಿಎಸ್‌ಟಿ ದರ ಪರಿಷ್ಕರಣೆಯಿಂದಾಗಿ ಕರ್ನಾಟಕಕ್ಕೆ ₹10,000 ಕೋಟಿ ನಷ್ಟವಾಗಿದೆ. ರಾಜ್ಯಕ್ಕೆ ನೀಡಬೇಕಾದ ನ್ಯಾಯಯುತ ಪಾಲನ್ನು ಕೇಂದ್ರ ನೀಡುತ್ತಿಲ್ಲ, ಇದು ರಾಜ್ಯದ ಮೇಲೆ ಆರ್ಥಿಕ ಒತ್ತಡ ಉಂಟುಮಾಡುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

Also Read : ಸಿದ್ದರಾಮಯ್ಯ ಬಜೆಟ್‌ ಬೃಹತ್‌ ಶೂನ್ಯ : ಬಿಜೆಪಿ ಹಿರಿಯ ಶಾಸಕ ಸುನಿಲ್‌ ಕುಮಾರ್‌

“ಹೈಕಮಾಂಡ್ ಸೂಚಿಸಿದರೆ ಮುಂದಿನ ಬಜೆಟ್ ಕೂಡ ನಾನೇ ಎಂದ ಸಿದ್ದರಾಮಯ್ಯ “:

ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ, “ದಾಖಲೆ ನಿರ್ಮಿಸುವುದು ನನ್ನ ಗುರಿಯಲ್ಲ. ಆದರೆ ಹೈಕಮಾಂಡ್ ಮತ್ತು ಜನ ಆಶೀರ್ವದಿಸಿದರೆ ಮುಂದಿನ ಎರಡು ಬಜೆಟ್‌ಗಳನ್ನು ಕೂಡ ನಾನೇ ಮಂಡಿಸುತ್ತೇನೆ. ಪಕ್ಷದ ತೀರ್ಮಾನವೇ ಅಂತಿಮ” ಎಂದು ತಿಳಿಸಿದರು.

Karnataka Budget 2026 CM Siddaramaiah Reaction in Mysore

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories