Karkala MLA Sunil Kumar | CM Siddaramaiah: ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಿ ಇದೆ ಎನ್ನಲಾದ ಪತ್ರವೊಂದು ಈಗ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಈ ಪತ್ರವು ‘ನಕಲಿ’ ಎಂಬ ಸರ್ಕಾರದ ವಾದವನ್ನು ತೀವ್ರವಾಗಿ ಖಂಡಿಸಿರುವ ಕಾರ್ಕಳ ಶಾಸಕ ಸುನೀಲ್ ಕುಮಾರ್, ಈ ಪ್ರಕರಣವನ್ನು ವಿಧಿ ವಿಜ್ಞಾನ ಪ್ರಯೋಗಾಲಯ (FSL) ಪರೀಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಸಿಎಂ ಕಚೇರಿಯಲ್ಲಿ ‘ಲೆಟರ್ ಹೆಡ್’ ದಂಧೆ?
ಮುಖ್ಯಮಂತ್ರಿಯವರ ಸಹಿ ಇರುವ ಪತ್ರವೇ ನಕಲಿ ಎಂದಾದರೆ, ಸಿಎಂ ಕಚೇರಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ. ಇದು ಕಚೇರಿಯಲ್ಲಿ ನಡೆಯುತ್ತಿರುವ ಬಹುದೊಡ್ಡ “ಲೆಟರ್ ಹೆಡ್ ದಂಧೆ” ಇರಬಹುದು ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ.
FSL ತನಿಖೆಗೆ ಆಗ್ರಹ:
“ಪತ್ರದಲ್ಲಿರುವ ಸಹಿ ಅಸಲಿಯೋ ಅಥವಾ ನಕಲಿಯೋ ಎಂಬುದು ಮೊದಲು ಇತ್ಯರ್ಥವಾಗಬೇಕು. ಈ ಪತ್ರದ ಸಹಿಯನ್ನು ತಕ್ಷಣವೇ FSL ಪರೀಕ್ಷೆಗೆ ಒಳಪಡಿಸಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.
ಖುರ್ಚಿಯ ಮೇಲಷ್ಟೇ ಗಮನ:
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಚೇರಿಯ ಆಡಳಿತದ ಮೇಲೆ ಹಿಡಿತ ತಪ್ಪಿದೆ. ಅವರಿಗೆ ಕೇವಲ ತಮ್ಮ ಅಧಿಕಾರ ಮತ್ತು ಖುರ್ಚಿಯ ಮೇಲೆ ಮಾತ್ರ ಗಮನವಿದೆ ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ ಎಂದು ಅವರು ಲೇವಡಿ ಮಾಡಿದ್ದಾರೆ.
ಜಿಲ್ಲಾ ವೈದ್ಯಾಧಿಕಾರಿ ಅಬಕಾರಿ ಇಲಾಖೆಗೆ ವರ್ಗಾವಣೆ ಸುಳ್ಳು ಸುದ್ದಿ ಎಂದ ಸಿಎಂ ಸಿದ್ದರಾಮಯ್ಯ; ಕೇಸ್ ದಾಖಲು
ತನಿಖೆ ಯಾರ ವಿರುದ್ಧ?
ದಿನಾಂಕವಿಲ್ಲದ ಪತ್ರಕ್ಕೆ ಸಿಎಂ ಏಕೆ ಸಹಿ ಹಾಕಿದರು? ಸಹಿ ಹಾಕಿಸಿದ ವ್ಯಕ್ತಿಗಳು ಯಾರು? ಅವರಿಗೆ ಇದರಿಂದ ಆದ ಲಾಭವೇನು? ಎಂಬುದು ಬಹಿರಂಗಗೊಳ್ಳಬೇಕು. ಇದನ್ನು ಬಿಟ್ಟು ಮಾಹಿತಿ ನೀಡಿದವರನ್ನು ಗುರಿ ಮಾಡುವುದು (Kill the messenger) ಸರಿಯಾದ ತಂತ್ರವಲ್ಲ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಜಿಲ್ಲಾ ವೈದ್ಯಾಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗಾಯಿಸಿದ ರಾಜ್ಯ ಸರ್ಕಾರ : ಶಾಸಕ ವಿ.ಸುನೀಲ್ ಕುಮಾರ್ ಗರಂ
ಶಾಸಕರ ಸಮರ್ಥನೆ:
“ಜವಾಬ್ದಾರಿಯುತ ಶಾಸಕನಾಗಿ, ನನಗೆ ಲಭಿಸಿದ ಪತ್ರವನ್ನು ಆಧರಿಸಿ ಸರ್ಕಾರದ ಆಡಳಿತಾತ್ಮಕ ಲೋಪವನ್ನು ಎತ್ತಿ ತೋರಿಸಿದ್ದೇನೆ. ಪತ್ರ ನಕಲಿ ಎಂದು ವಾದಿಸುವವರು ಮೊದಲು ಸಿಎಂ ಕಚೇರಿಯ ಭದ್ರತೆ ಮತ್ತು ಪಾರದರ್ಶಕತೆಯ ಬಗ್ಗೆ ತನಿಖೆ ಮಾಡಲಿ,” ಎಂದು ಸುನೀಲ್ ಕುಮಾರ್ ಸವಾಲು ಹಾಕಿದ್ದಾರೆ. ಸಿಎಂ ಕಚೇರಿಯಿಂದ ಪತ್ರ ಹೊರಹೋಗಿರುವ ಬಗ್ಗೆ ಸರ್ಕಾರ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಮತ್ತು ಈ ಪ್ರಕರಣ ತನಿಖೆಯ ಹಂತ ತಲುಪುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.


