ಅಮೆರಿಕದಲ್ಲಿ ಕನ್ನಡಿಗ ವಿದ್ಯಾರ್ಥಿ ನಾಪತ್ತೆ; ತುಮಕೂರಿನ ತಂದೆ, ಚಿಕ್ಕಮಗಳೂರಿನ ತಾಯಿಯ ಆತಂಕ

Karnataka student missing in California ಕ್ಯಾಲಿಫೋರ್ನಿಯಾ/ಬೆಂಗಳೂರು: ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ (UC Berkeley) ಉನ್ನತ ವ್ಯಾಸಂಗ ಮಾಡುತ್ತಿದ್ದ ಕನ್ನಡಿಗ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (22) ನಾಪತ್ತೆಯಾಗಿರುವ ಘಟನೆ ಅವರ ಪೋಷಕರಲ್ಲಿ ಭಾರಿ ಆತಂಕ ಮೂಡಿಸಿದೆ. ಸಾಕೇತ್ ಅವರ ತಂದೆ ತುಮಕೂರು ಭಾಗದವರಾಗಿದ್ದು, ತಾಯಿ ಚಿಕ್ಕಮಗಳೂರು ಮೂಲದವರಾಗಿದ್ದಾರೆ. ಇವರು ಬಿಟೆಕ್ ಪದವಿಯನ್ನು ಐಐಟಿ ಮದ್ರಾಸ್‌ನಲ್ಲಿ ಪೂರೈಸಿ, ಹೆಚ್ಚಿನ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.

ಸಾಕೇತ್ ಅಮೆರಿಕಾದಲ್ಲಿ ಪಂಜಾಬ್ ಮೂಲದ ರೂಮ್‌ಮೇಟ್‌ನೊಂದಿಗೆ ನೆಲೆಸಿದ್ದರು. ಎಲ್ಲರ ಜೊತೆಗೂ ಆತ್ಮೀಯವಾಗಿದ್ದ ಸಾಕೇತ್, ಕಳೆದ ಭಾನುವಾರದವರೆಗೂ ಪೋಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಸೋಮವಾರ ತಾಯಿಗೆ ಕರೆ ಮಾಡಿದ್ದ ಸಾಕೇತ್ ಮಾತನಾಡಿದ್ದರು, ಆದರೆ ತಾಯಿ ಮರಳಿ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಿಲ್ಲ. ಅಂದಿನಿಂದ ಸಾಕೇತ್ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು, ಕುಟುಂಬದವರೊಂದಿಗೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ.

ಅನಿವಾಸಿ ಭಾರತೀಯ ಸಮಿತಿಯ ಪ್ರತಿಕ್ರಿಯೆ:
ಈ ವಿಷಯದ ಬಗ್ಗೆ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ ಮಾಹಿತಿ ನೀಡಿದ್ದು, ಸಾಕೇತ್ ಪೋಷಕರು ತಮ್ಮನ್ನು ಸಂಪರ್ಕಿಸಿ ಮಗನ ಪತ್ತೆಗೆ ಸಹಾಯ ಮಾಡುವಂತೆ ಕೋರಿದ್ದಾರೆ ಎಂದು ತಿಳಿಸಿದ್ದಾರೆ. “ಭಾನುವಾರದವರೆಗೆ ಸಾಕೇತ್ ಎಲ್ಲರ ಜೊತೆ ಮಾತನಾಡಿದ್ದಾನೆ. ಸೋಮವಾರ ತಾಯಿಗೆ ಕರೆ ಮಾಡಿದ್ದ, ಆದರೆ ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಈ ವಿಷಯವನ್ನು ನಾವು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಗಮನಕ್ಕೆ ತಂದಿದ್ದೇವೆ ಮತ್ತು ಅಧಿಕಾರಿಗಳು ನಿರಂತರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ” ಎಂದು ಅವರು ಹೇಳಿದ್ದಾರೆ.

ವಲವಾರ ಸಿನಿಮಾದಲ್ಲಿ ಸಕಲೇಶಪುರದ ಹಳ್ಳಿಯ ಚಿತ್ರಣ: ಸ್ಟಾರ್‌ಗಳ ಅಬ್ಬರವಿಲ್ಲದೆ ಗೆಲ್ಲುತ್ತಿದೆ ಕನ್ನಡಿಗರ ಮನ

ಶೋಧ ಕಾರ್ಯದ ಸ್ಥಿತಿಗತಿ: ಸ್ಥ
ಸ್ಥಳೀಯ ಪೊಲೀಸರು ಸಾಕೇತ್ ಅವರ ಬ್ಯಾಕ್‌ಪ್ಯಾಕ್, ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಅನ್ನು ಬರ್ಕ್ಲಿಯ ಪಾರ್ಕ್ ಹಿಲ್ಸ್ ಪ್ರದೇಶದ ಮನೆಯೊಂದರ ಮುಂಭಾಗ ಪತ್ತೆಹಚ್ಚಿದ್ದಾರೆ. ಸಾಕೇತ್ ಯಾವುದೋ ವೈಯಕ್ತಿಕ ಸಂಬಂಧದ ವಿಚಾರವಾಗಿ ಮನನೊಂದಿದ್ದರು ಎಂಬ ಮಾಹಿತಿ ಪೊಲೀಸರಿಂದ ಲಭ್ಯವಾಗಿದೆ. ಸದ್ಯ ಕ್ಯಾಲಿಫೋರ್ನಿಯಾ ಪೊಲೀಸರು ‘ಡ್ರೋನ್’ ಮತ್ತು ವಿಶೇಷ ತಂಡಗಳ ಮೂಲಕ ಲೇಕ್ ಅಂಜಾ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದಾರೆ.

ತಮ್ಮ ಮಗ ಎಲ್ಲಿದ್ದರೂ ಸುರಕ್ಷಿತವಾಗಿ ಮರಳಿ ಬರಲಿ ಎಂದು ಪೋಷಕರು ಕಣ್ಣೀರಿಡುತ್ತಿದ್ದು, ಸರ್ಕಾರವು ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಮಗನನ್ನು ಹುಡುಕಿಕೊಡಬೇಕೆಂದು ವಿನಂತಿಸಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories