Karwar check post: ಕಾರವಾರ ಚೆಕ್ಪೋಸ್ಟ್ನಲ್ಲಿ ಒಂದು ಕೋಟಿ ರೂ. ದಾಖಲೆ ರಹಿತ ನಗದು ವಶ
ಕಾರವಾರ: Karwar check post: ಗೋವಾ-ಕರ್ನಾಟಕ ಗಡಿಭಾಗದಲ್ಲಿರುವ ಮಾಜಾಳಿ ಅಂತರರಾಜ್ಯ ಚೆಕ್ಪೋಸ್ಟ್ನಲ್ಲಿ ಪೊಲೀಸರು ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ ದಾಖಲೆ ರಹಿತ ನಗದು ಪತ್ತೆಯಾಗಿದೆ. ಗೋವಾದಿಂದ ತಮಿಳುನಾಡಿಗೆ ಸಾಗಿಸಲಾಗುತ್ತಿದ್ದ ಈ ಬೃಹತ್ ಮೊತ್ತವನ್ನು ವಶಪಡಿಸಿಕೊಂಡ ಪೊಲೀಸರು, ಹಣ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಚಿತ್ತಾಕುಲ ಪೊಲೀಸ್ ಠಾಣೆಯ ಪಿ.ಎಸ್.ಐ. ಪರಶುರಾಮ ಮಿರ್ಜಿಗಿ ನೇತೃತ್ವದ ಪೊಲೀಸ್ ತಂಡವು ರಾತ್ರಿ ವೇಳೆ ಖಾಸಗಿ ಬಸ್ಸುಗಳನ್ನು ತಪಾಸಣೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ತಮಿಳುನಾಡು ಕಡೆಗೆ ಹೊರಟಿದ್ದ ಬಸ್ಸಿನಲ್ಲಿದ್ದ ಪ್ರಯಾಣಿಕರ ಬ್ಯಾಗ್ಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು(Bengaluru) ಮೂಲದ ಕಲ್ಪೇಶ್ ಕುಮಾರ್ ಮತ್ತು ರಾಜಸ್ಥಾನ ಮೂಲದ ಬಮರ ರಾಮ್ ಎಂಬ ಇಬ್ಬರು ಪ್ರಯಾಣಿಕರಿಗೆ ಸೇರಿದ ಬ್ಯಾಗ್ಗಳಲ್ಲಿ ₹500 ಮುಖಬೆಲೆಯ ನೋಟುಗಳ ಬೃಹತ್ ಬಂಡಲ್ಗಳು ಪತ್ತೆಯಾಗಿವೆ. ಹಣದ ಮೂಲ ಮತ್ತು ದಾಖಲೆಗಳನ್ನು ಕೇಳಿದಾಗ ಆರೋಪಿಗಳು ಯಾವುದೇ ಸೂಕ್ತ ಮಾಹಿತಿ ನೀಡಲು ವಿಫಲರಾಗಿದ್ದಾರೆ.
Also Read: Cyclone Montha: ಮೋಂಥಾ ಚಂಡಮಾರುತ : 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್, ಕರಾವಳಿಯಲ್ಲಿ ಕಟ್ಟೆಚ್ಚರ
ಪ್ರಾಥಮಿಕ ವಿಚಾರಣೆಯಲ್ಲಿ, ಈ ಹಣವನ್ನು ಗೋವಾದಿಂದ ತಮಿಳುನಾಡಿನ ಹೊಸೂರಿಗೆ ವ್ಯಾಪಾರ ವ್ಯವಹಾರಕ್ಕೆ ಸಾಗಿಸಲಾಗುತ್ತಿತ್ತು ಎಂದು ಆರೋಪಿಗಳು ಹೇಳಿದ್ದಾರೆ. ಆದರೆ, ಯಾವುದೇ ದಾಖಲೆ ಒದಗಿಸದ ಕಾರಣ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಹಣವನ್ನು ವಶಪಡಿಸಿಕೊಂಡು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಹಣವು ಅಕ್ರಮ ಸಾಗಾಟಕ್ಕೆ ಸಂಬಂಧಿಸಿದೆಯೇ ಎಂಬ ನಿಟ್ಟಿನಲ್ಲಿ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಘಟನೆಯ ನಂತರ, ಮಾಜಾಳಿ ಚೆಕ್ಪೋಸ್ಟ್ನಲ್ಲಿ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಪರಶುರಾಮ ಮಿರ್ಜಿಗಿ ನೇತೃತ್ವದಲ್ಲಿ ಚೆಕ್ಪೋಸ್ಟ್ ಸಿಬ್ಬಂದಿ ಥಾಮಸ್, ಗಣೇಶ, ಗೌತಮ ರಾಜ್ ಮತ್ತು ಪ್ರದೀಪ ಪಾಲ್ಗೊಂಡಿದ್ದರು.
Also Read: 2028ರಲ್ಲೂ ನಾನೇ ಸಿಎಂ: ರಾಜಕೀಯ ನಿವೃತ್ತಿ ಪ್ರಶ್ನೆಯೇ ಇಲ್ಲ ಎಂದ ಸಿದ್ದರಾಮಯ್ಯ



