ಕೃಷ್ಣನ ನೈವೇದ್ಯಕ್ಕೆ ಅವಲಕ್ಕಿ ಮನೋಹರ: ಈ ಸಿಹಿ ತಿನಿಸು ಇಟ್ಟು ಬಾಲಗೋಪಾಲನನ್ನು ಮೆಚ್ಚಿಸಿ

Shri Krishna Janmashtami 2025: ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಎಲ್ಲಡೆ ಕಳೆಗಟ್ಟಲು ಪ್ರಾರಂಭವಾಗಿದೆ. ಅದಕ್ಕೆ ತಕ್ಕಂತೆ ಅನೇಕ ಕಡೆಗಳಲ್ಲಿ ಸಂಭ್ರಮಾಚರಣೆಯ ತಯಾರಿ ಭರದಿಂದ ಸಾಗುತ್ತಿದೆ. ಬಹಳಷ್ಟು […]

Shri Krishna Janmashtami 2025

Shri Krishna Janmashtami 2025: ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಎಲ್ಲಡೆ ಕಳೆಗಟ್ಟಲು ಪ್ರಾರಂಭವಾಗಿದೆ. ಅದಕ್ಕೆ ತಕ್ಕಂತೆ ಅನೇಕ ಕಡೆಗಳಲ್ಲಿ ಸಂಭ್ರಮಾಚರಣೆಯ ತಯಾರಿ ಭರದಿಂದ ಸಾಗುತ್ತಿದೆ.

ಬಹಳಷ್ಟು ಮನೆಗಳಲ್ಲಿ ಜನ್ಮಾಷ್ಟಮಿಗಾಗಿ ಚಕ್ಕುಲಿ, ಕೋಡಬಳೆ, ಲಾಡು ಮುಂತಾದ ತರೇವಾರಿ ತಿನಿಸುಗಳ ಮಾಡಿಯಾಗಿದೆ. ಕೃಷ್ಣನಿಗೆ ಅವಲಕ್ಕಿ ಬಹಳ ಅಚ್ಚುಮೆಚ್ಚು. ಅವಲಕ್ಕಿಗೆ ಸಂಬಂಧಿಸಿದ ಶ್ರೀ ಕೃಷ್ಣ ಮತ್ತು ಸುಧಾಮನ ಕಥೆ ಎಲ್ಲರಿಗೂ ತಿಳಿದಿದೆ. ಕಡು ಬಡವನಾದ ಸುಧಾಮ ಕೃಷ್ಣನ ಭೇಟಿಗೆ ಬರುವಾಗ ಒಂದು ಹಿಡಿ ಅವಲಕ್ಕಿಯನ್ನ ತಂದಿದ್ದನಂ‌ತೆ.

ಕೃಷ್ಣ ಅದನ್ನು ಅತ್ಯಂತ ಪ್ರೀತಿಯಿಂದ ತಿಂದು, ಸುಧಾಮನ ಬಡತನವನ್ನು ಹೋಗಲಾಡಿಸಿದನು. ಈ ಕಾರಣಕ್ಕಾಗಿಯೇ ಜನ್ಮಾಷ್ಟಮಿಯಂದು ಅವಲಕ್ಕಿಯ ನೈವೇದ್ಯ ಮಾಡಲಾಗುತ್ತದೆ.

ಅದರಿಂದ ಏನಾದರೂ ತಿಂಡಿಯನ್ನು ತಯಾರಿಸುವುದು ರೂಢಿಯಾಗಿ ಬಂದಿದೆ. ಜನ್ಮಾಷ್ಟಮಿಯಂದು ಸಿಹಿ ಅವಲಕ್ಕಿ, ಒಗ್ಗರಣೆ ಅವಲಕ್ಕಿ, ಅವಲಕ್ಕಿ ಉಂಡೆ ಎಂದೆಲ್ಲಾ ತಯಾರಿಸುತ್ತಾರೆ.

ಅವಲಕ್ಕಿ ಬಳಸಿ ದಿಢೀರ್‌ ಎಂದು ಸಿಹಿ ತಿನಿಸು ಮಾಡಬೇಕೆಂದರೆ ಅವಲಕ್ಕಿ ಮನೋಹರ ಮಾಡಬಹುದು. ಹದವಾದ ಬೆಲ್ಲದ ಪಾಕಕ್ಕೆ ಅವಲಕ್ಕಿ ಸೇರಿಸಿ ತಯಾರಿಸುವ ಈ ಖಾದ್ಯವನ್ನು ಕೃಷ್ಣನ ನೈವೇದ್ಯಕ್ಕೆ ಇಟ್ಟು ಅವನ ಕೃಪೆಗೆ ಪಾತ್ರರಾಗಬಹುದು.

ಎರಡು ವಾರದವರೆಗೆ ಇಟ್ಟು ತಿನ್ನಬಹುದಾದ ಸಿಹಿ ತಿನಿಸು ಇದಾಗಿದೆ. ಹಾಗಾದರೆ ಸುಲಭವಾಗಿ, ಕಡಿಮೆ ಸಮಯದಲ್ಲಿ ಅವಲಕ್ಕಿ ಮನೋಹರ ತಯಾರಿಸುವುದು ಹೇಗೆ ಎಂದು ನೋಡೋಣ.

Shri Krishna Janmashtami 2025: ಅವಲಕ್ಕಿ ಮನೋಹರ ತಯಾರಿಸುವುದು ಹೇಗೆ?

ಬೇಕಾಗುವ ಸಾಮಗ್ರಿಗಳು

ಅವಲಕ್ಕಿ – ಒಂದು ಕಪ್‌
ಬೆಲ್ಲ – ಒಂದೂವರೆ ಕಪ್‌
ತುರಿದ ಕೊಬ್ಬರಿ – ಅರ್ಧ ಕಪ್
ಗೋಡಂಬಿ – 7–8
ದ್ರಾಕ್ಷಿ – 8–10
ತುಪ್ಪ – 4 ಚಮಚ
ಏಲಕ್ಕಿ ಪುಡಿ 1/2 ಅರ್ಧ ಚಮಚ
ಬಿಳಿ ಎಳ್ಳು 1 ಚಮಚ

ಇದನ್ನೂ ಓದಿ: ಶ್ರೀ ಕೃಷ್ಣ ಜನ್ಮಾಷ್ಟಮಿ 2025 ಯಾವಾಗ ? ಆಚರಣೆ ಮಾಡುವುದು ಹೇಗೆ ?

ಅವಲಕ್ಕಿ ಮನೋಹರ ತಯಾರಿಸುವ ವಿಧಾನ

ಮೊದಲಿಗೆ ಒಂದು ಚಮಚ ತುಪ್ಪದಲ್ಲಿ ಅವಲಕ್ಕಿಯನ್ನು ಹುರಿದುಕೊಳ್ಳಿ. ಗೋಡಂಬಿ, ದ್ರಾಕ್ಷಿಯನ್ನು ಸಹ ತುಪ್ಪದಲ್ಲಿ ಹುರಿದು ಪಕ್ಕಕ್ಕಿಡಿ.

ಒಂದು ದಪ್ಪ ತಳದ ಬಾಣಲೆಗೆ ಬೆಲ್ಲವನ್ನು ಹಾಕಿ, ಅದಕ್ಕೆ ಸ್ವಲ್ಪ ನೀರು ಸೇರಿಸಿ ಕಾಯಲು ಇಡಿ. ಬೆಲ್ಲ ಕರಗಿ ಒಂದು ಎಳೆ ಪಾಕ ಮಾಡಿಕೊಳ್ಳಿ.

ಗ್ಯಾಸ್‌ನ ಉರಿಯನ್ನು ಚಿಕ್ಕದು ಮಾಡಿಕೊಂಡು, ಹುರಿದಿಟ್ಟುಕೊಂಡ ಅವಲಕ್ಕಿ, ಕೊಬ್ಬರಿ ತುರಿ, ಹುರಿದ ಎಳ್ಳು, ಗೋಡಂಬಿ, ದ್ರಾಕ್ಷಿ ಮತ್ತು ಏಲಕ್ಕಿ ಪುಡಿ ಎಲ್ಲವನ್ನು ಪಾಕಕ್ಕೆ ಸೇರಿಸಿ.

ಎರಡು ಚಮಚ ತುಪ್ಪವನ್ನು ಸೇರಿಸಿ, ಎಲ್ಲವನ್ನು ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ. ಅವಲಕ್ಕಿ ಬೆಲ್ಲದ ಪಾಕವನ್ನು ಹೀರಿಕೊಂಡ ನಂತರ ಗ್ಯಾಸ್‌ ಆಫ್‌ ಮಾಡಿ. ತಣ್ಣಗಾಗಲು ಬಿಡಿ.

ಕೃಷ್ಣನಿಗೆ ಪ್ರಿಯವಾದ ಅವಲಕ್ಕಿಯಿಂದ ತಯಾರಿಸಿದ ಮನೋಹರವನ್ನು ನೈವೇದ್ಯಕ್ಕೆ ಇಟ್ಟು ಬಾಲಗೋಪಾಲನ ಕೃಪೆಗೆ ಪಾತ್ರರಾಗಿ.

(Shri Krishna Janmashtami special recipe for god how to make poha manohara sweet recipe in kannada)

Scroll to Top