ಹೋಟೆಲ್ ಶೈಲಿಯ ಗರಿಗರಿಯಾದ ದೋಸೆ ಮಾಡಬೇಕೇ ಇಲ್ಲಿದೆ ಟಿಪ್ಸ್

ದಕ್ಷಿಣ ಭಾರತದ ಆಹಾರ ಪದ್ಧತಿಯಲ್ಲಿ ದೋಸೆಗೆ ಪ್ರಮುಖ ಸ್ಥಾನವಿದೆ. ಬಹಳ ಕಡೆಗಳಲ್ಲಿ ಬೆಳಗಿನ ಉಪಹಾರಕ್ಕೆ ಪ್ರತಿನಿತ್ಯ ದೋಸೆಯನ್ನೇ ಮಾಡುವಂತ ರೂಢಿಯಿದೆ. ಆರೋಗ್ಯಕ್ಕೆ ಉತ್ತಮವಾದ ಹಾಗೂ ಇದರ ಸೇವನೆಯಿಂದ ಹೊಟ್ಟೆಯುಬ್ಬರ, ಅಜೀರ್ಣದಂತಹ ಯಾವುದೇ ರೀತಿಯ ತೊಂದರೆಯಿಲ್ಲ, ತಿನ್ನಲು ಬಲು ರುಚಿಯಾಗಿರುವ ಹಾಗೂ ಸುಲಭವಾಗಿ ಮಾಡಬಹುದಾದ ಆಹಾರ ಇದಾಗಿದೆ. ರುಚಿಯಾದ, ತೆಳುವಾದ ಹಾಗೂ ಗರಿಗರಿಯಾದ ದೋಸೆಯನ್ನು ತಯಾರಿಸಲು ಅನುಸರಿಸಬಹುದಾದ ಕೆಲವು ವಿಧಾನಗಳ ಬಗ್ಗೆ ಇಲ್ಲಿ ಮಾಹಿತಿ ಇದೆ.
- ಮೊದಲು ಮೂರು ಕಪ್ ಅಕ್ಕಿ ಅರ್ಧ ಕಪ್ ಉದ್ದಿನ ಬೇಳೆ 1 ಚಮಚ ಮೆಂತ್ಯ 3-4 ಚಮಚ ಕಡಲೆ ಬೇಳೆ ಇವುಗಳನ್ನು ಚೆನ್ನಾಗಿ ತೊಳೆದು 5 ರಿಂದ 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ದೋಸೆ ಗರಿಗರಿಯಾಗಿ ಬರಲು ಅರ್ಧ ಕಪ್ ಅವಲಕ್ಕಿ 20 ನಿಮಿಷ ನೆನೆಸಿಡಿ. ನಂತರ ನೀರನ್ನು ಸೋಸಿ ಉಪ್ಪುಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ನಂತರ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ ಮುಚ್ಚಿ 8-10 ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಹದಕ್ಕೆ ಬೇಕೆಂದರೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕಾದ ಹೆಂಚಿಗೆ ಎಣ್ಣೆ ಸವರಿ ದೋಸೆ ಮಾಡಿರಿ ಅದು ಸ್ವಲ್ಪ ಕೆಂಪಗಾದ ನಂತರ ತೆಗೆದು ಸವಿಯಿರಿ.
- ಮೊದಲು ಅರ್ಧ ಕಪ್ ರವೆ ತೆಗೆದುಕೊಳ್ಳಿ ಹಾಗೆಯೇ ಅರ್ಧ ಕಪ್ ಅಕ್ಕಿ ಹಿಟ್ಟು ಮತ್ತು ಮುಕ್ಕಾಲು ಕಪ್ ಮೈದಾ ಸ್ವಲ್ಪ ಉಪ್ಪು, 5 ರಿಂದ 6 ಚಮಚ ಮೊಸರು ಹದಕ್ಕೆ ಬೇಕಾದಷ್ಟು ನೀರು ಸೇರಿಸಿಕೊಂಡು ಸ್ವಲ್ಪ ಸಮಯ ಹಾಗೆ ಬಿಡಿ. ಅದಕ್ಕೆ ತುರಿದ ಕ್ಯಾರೆಟ್, ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ ಸೇರಿಸಿ ತವಾ ಬಿಸಿಮಾಡಿ ಎಣ್ಣೆ ಸವರಿ ಹಿಟ್ಟು ಹಾಕಿ ದೋಸೆ ಮಾಡಿ ಅದು ಕೆಂಪು ಬಣ್ಣಕ್ಕೆ ತಿರುಗಿದಾಗ ತೆಗೆದು ಸವಿಯಿರಿ.
- ಮೊದಲು ಅರ್ಧ ಕಪ್ ರವೆ ಹಾಗೂ ಕಾಲು ಕಪ್ ಅಕ್ಕಿ ಹಿಟ್ಟು ಜೊತೆಗೆ 2-3 ಚಮಚ ಕಡಲೆ ಹಿಟ್ಟು ಮತ್ತು ಉಪ್ಪು ಬೆರೆಸಿ ಮಿಕ್ಸಿಯಲ್ಲಿ ರುಬ್ಬಿ ಅದನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ನಂತರ 2 ಆಲೂಗಡ್ಡೆ ತುರಿದು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ನಂತರ ಎಲ್ಲವನ್ನೂ ಮಿಶ್ರಣ ಮಾಡಿ ಅದಕ್ಕೆ ಕಾಲು ಕಪ್ ಮೊಸರು ಹಾಗೂ ಬಣ್ಣದ ಸಲುವಾಗಿ 1 ಚಮಚ ಬೆಲ್ಲ ಸೇರಿಸಿ 5 ನಿಮಿಷ ಹಾಗೇ ಬಿಡಿ ನಂತರ ಚೆನ್ನಾಗಿ ಕಾದ ತವಾಕ್ಕೆ ಎಣ್ಣೆ ಸವರಿ ದೋಸೆ ಮಾಡಿರಿ ಮೇಲೆ ಸ್ವಲ್ಪ ತುಪ್ಪ ಸವರಿ ಕೆಂಪಗಾದ ನಂತರ ತೆಗೆದು ಸವಿಯಿರಿ.
ಏನು ಮಾಡಿದ್ರೂ ಈ ದೋಸೆ ಚೆನ್ನಾಗಿ ಬರುತ್ತಿಲ್ಲವಲ್ಲ ಎಂದು ಚಿಂತಿಸಬೇಡಿ. ಈ ಹೊಸ ವಿಧಾನಗಳನ್ನು ಅನುಸರಿಸಿ ಗರಿಗರಿಯಾದ ದೋಸೆ ಮಾಡಿರಿ.



