ತುಳಸಿ ವಿವಾಹ ಯಾವಾಗ? ದಿನಾಂಕ, ಶುಭ ಮುಹೂರ್ತ, ಧಾರ್ಮಿಕ ಮಹತ್ವ ತಿಳಿಯಿರಿ

Tulsi Vivah 2025: ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಎಲ್ಲಾ ಹಬ್ಬ ಹರಿದಿನಗಳಿಗೆ, ಶುಭ ಕಾರ್ಯಗಳಿಗೆ ತುಳಸಿ ದಳಗಳು ಬೇಕೆ ಬೇಕು.

ತುಳಸಿಯಲ್ಲಿ ಲಕ್ಷ್ಮಿ ದೇವಿ ವಾಸಿಸುತ್ತಾಳೆ ಎಂದು ನಂಬಲಾಗಿದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತುಳಸಿ ಗಿಡವಿರುವುದನ್ನು ಕಾಣಬಹುದು.

ಪ್ರತಿದಿನ ಬೆಳಿಗ್ಗೆ ದೀಪ ಬೆಳಗಿಸಿ, ತುಳಸಿ ಪೂಜೆ ಮಾಡಲಾಗುತ್ತದೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ತುಳಸಿ ವಿವಾಹವನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.

ಕಾರ್ತಿಕ ಮಾಸದ ದ್ವಾದಶಿ ತಿಥಿಯಂದು ತುಳಸಿ ವಿವಾಹ ನೆರವೇರಿಸಲಾಗುತ್ತದೆ. ಅಂದು ವಿಷ್ಣುವಿನ ಅವತಾರವಾದ ಶಾಲಿಗ್ರಾಮನೊಂದಿಗೆ ತುಳಸಿ ಮಾತೆಯ ವಿವಾಹವನ್ನು ನಡೆಸಲಾಗುತ್ತದೆ.

ಇದು ವಿವಾಹ ಜೀವನದಲ್ಲಿ ಪ್ರೀತಿ, ಸಂತೋಷ, ಸಾಮರಸ್ಯವನ್ನು ತರುತ್ತದೆ ಎಂದು ನಂಬಲಾಗಿದೆ.

ಹಾಗಾದರೆ ಈ ವರ್ಷ ತುಳಸಿ ವಿವಾಹ ಯಾವಾಗ? ಹಾಗೂ ಆಚರಣೆ ಏನು ಎಂದು ನೋಡೋಣ.

ತುಳಸಿ ವಿವಾಹ 2005 ಶುಭ ದಿನಾಂಕ ಮತ್ತು ಮುಹೂರ್ತ

ಈ ವರ್ಷ ತುಳಸಿ ವಿವಾಹವನ್ನು ನವೆಂಬರ್‌ 2 ರಂದು ಆಚರಿಸಲಾಗುತ್ತಿದೆ. ಕಾರ್ತಿಕ ಮಾಸದ ದ್ವಾದಶಿ ತಿಥಿಯು ನವೆಂಬರ್‌ 2 ರಂದು ಬೆಳಿಗ್ಗೆ 7 ಗಂಟೆ 31 ನಿಮಿಷಕ್ಕೆ ಪ್ರಾರಂಭವಾಗುತ್ತದೆ.

ದ್ವಾದಶಿ ತಿಥಿಯು ನವೆಂಬರ್‌ 3 ರಂದು ಬೆಳಿಗ್ಗೆ 5 ಗಂಟೆ 7 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ತುಳಸಿ ವಿವಾಹವನ್ನು ಸಾಮಾನ್ಯವಾಗಿ ಗೋಧೂಳಿ ಲಗ್ನದಲ್ಲಿ ನೆರವೇರಿಸಲಾಗುತ್ತದೆ.

ನವೆಂಬರ್‌ 2 ರಂದು 5 ಗಂಟೆ 3 ನಿಮಿಷಕ್ಕೆ ಲಗ್ನ ಮುಹೂರ್ತವು ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ಪ್ರತಿದಿನ ಬೆಳಿಗ್ಗೆ ಇವಿಷ್ಟು ಕೆಲಸ ಮಾಡಿ ಸಾಕು: ನಿಮ್ಮ ಅದೃಷ್ಟವೇ ಬದಲಾಗುವುದನ್ನು ನೋಡಿ

ತುಳಸಿ ವಿವಾಹ ಪೂಜಾ ವಿಧಿ

ಮೊದಲಿಗೆ ಮನೆಯ ಮುಂದಿನ ಅಂಗಳ ಅಥವಾ ಬಾಲ್ಕನಿಯಲ್ಲಿರುವ ತುಳಸಿ ಗಿಡದ ಸುತ್ತ ಸ್ವಚ್ಛ ಮಾಡಿ. ಚಂದ ರಂಗೋಲಿ ಹಾಕಿ.

ತುಳಸಿ ಗಿಡದ ಸುತ್ತ ಕಬ್ಬು, ಮಾವಿನ ಎಲೆ ಮತ್ತು ಹೂವುಗಳಿಂದ ತೋರಣ ಹಾಕಿ. ಅದಕ್ಕೆ ಎಲ್‌ಇಡಿ ರೈಸ್‌ ಲೈಟ್‌ಗಳನ್ನು ಹಾಕಿ ಅಲಂಕರಿಸಿ.

ತುಳಸಿ ಗಿಡದ ಸುತ್ತ ಹಣತೆಗಳನ್ನು ಇಡಿ. ತುಳಸಿ ಗಿಡದ ಬಲಭಾಗದಲ್ಲಿ ಶಾಲಿಗ್ರಾಮವನ್ನು ಇರಿಸಿ. ಗಂಗಾ ಜಲದಿಂದ ಶುದ್ಧಿ ಮಾಡಿ.

ತುಳಸಿಗೆ ಅರಿಶಿಣ, ಕುಂಕುಮ, ಹೂವು ಹಾಕಿ ಪೂಜೆ ಮಾಡಿ. ಸಿಹಿತಿಂಡಿ, ಕಬ್ಬು ಮತ್ತು ಪಂಚಾಮೃತವನ್ನು ಅರ್ಪಿಸಿ. ಆರತಿ ಮಾಡಿ. ಎಲ್ಲರಿಗೂ ಪ್ರಸಾದವನ್ನು ನೀಡಿ.

ತುಳಸಿ ವಿವಾಹದ ಧಾರ್ಮಿಕ ಮಹತ್ವ

ತುಳಸಿ ಮತ್ತು ಶಾಲಿಗ್ರಾಮದ ವಿವಾಹ ಮಾಡುವುದರಿಂದ ಕನ್ಯಾದಾನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ.

ಲಕ್ಷ್ಮಿ ದೇವಿಯ ಅವತಾರವೆಂದು ಪರಿಗಣಿಸಲಾಗಿದ್ದರಿಂದ ಜೀವನದಲ್ಲಿ ಸುಖ, ಸಮೃದ್ಧಿ ಹೆಚ್ಚುತ್ತದೆ.

ದಾಂಪತ್ಯ ಜೀವನ ಸುಖಕರವಾಗಿ ಸಾಗುತ್ತದೆ. ಅವಿವಾಹಿತರಿಗೆ ವಿವಾಹಯೋಗ ಕೂಡಿ ಬರುತ್ತದೆ. ಒಳ್ಳೆಯ ಸಂಗಾತಿ ಸಿಗುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಕೈಗೆ ಬಂದ ದುಡ್ಡು ನೀರಿನಂತೆ ಖರ್ಚಾಗ್ತಾ ಇದೆಯಾ? ಹಾಗಾದ್ರೆ ಈ ಸಲಹೆ ಪಾಲಿಸಿ

(When is Tulsi Vivah 2025 know the date Shubh muhoorth rituals and religious significance)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories