ಮಂಗಳೂರು : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ಮೋಸ :ಮಹಿಳೆ ಸಹಿತ ಇಬ್ಬರ ಬಂಧನ

mangalore visa fraud : ಮಂಗಳೂರು : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ರೂಪಾಯಿ ಹಣವನ್ನು ಅಮಾಯಕರಿಂದ ಪೀಕಿ ಬಳಿಕ ಉದ್ಯೋಗವನ್ನೂ ಕೊಡಿಸದೇ ಇತ್ತ ಹಣ ಕೂಡ ಮರಳಿ ನೀಡದೇ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಕರಾವಳಿಯ ಪೊಲೀಸರು ಪತ್ತೆ ಮಾಡಿದ್ದಾರೆ.
ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸುವಲ್ಲಿ ಮಂಗಳೂರಿನ ಕಾವೂರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಕುಂದಾಪುರ ತಾಲೂಕಿನ ಗಂಗೊಳ್ಳಿಯ 42 ವರ್ಷ ಪ್ರಾಯದ ಆಲ್ಡನ್ ರೆಬೇರೋ ಹಾಗೂ ಬೆಂಗಳೂರಿನ ಆನೇಕಲ್ ತಾಲೂಕಿನ ನಿವಾಸಿ 34 ವರ್ಷದ ಪ್ರಕೃತಿ ಎಂದು ಗುರುತಿಸಲಾಗಿದೆ.
ಈ ಇಬ್ಬರು ಆರೋಪಿಗಳು ಈವರೆಗೆ ಸರಿ ಸುಮಾರು 1 ಕೋಟಿ ರೂಪಾಯಿ ಹಣವನ್ನು ವಂಚಿಸಿದ್ದಾರೆ ಎನ್ನಲಾಗಿದೆ. ಬಂಧಿತರ ನಿವಾಸದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 24 ಪಾಸ್ಪೋರ್ಟ್ಗಳು, 4.3 ಲಕ್ಷ ರೂಪಾಯಿಗಣ ಹಾಗೂ 43 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಶಪಡಿಸಿಕೊಂಡಲಾಗಿರುವ ಚಿನ್ನಭರಣದ ಮೌಲ್ಯ ಅಂದಾಜು 4.7 ಲಕ್ಷ ರೂಪಾಯಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉದ್ಯೋಗ ಕೊಡಿಸುತ್ತೇನೆ ಎಂದು ನಂಬಿಸಿ ಶೀಘ್ರದಲ್ಲಿಯೇ ವಿದೇಶಕ್ಕೆ ತೆರಳಲು ವೀಸಾ ಮಾಡಿಕೊಡುತ್ತೇವೆ ಎಂದು ಹೇಳಿಕೊಂಡು ಸಂತ್ರಸ್ತರಿಂದ ಈ ಆರೋಪಿಗಳು ಪಾಸ್ಪೋರ್ಟ್ ಹಾಗೂ ಹಣ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.
ಬಳಿಕ ಹಣ ಹಾಗೂ ಪಾಸ್ಪೋರ್ಟ್ ಎರಡನ್ನೂ ವಾಪಾಸ್ ನೀಡದೇ ಈ ಇಬ್ಬರು ಖದೀಮರು ಸತಾಯಿಸುತ್ತಿದ್ದರು ಎನ್ನಲಾಗಿದೆ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಇಬ್ಬರು ಆರೋಪಿಗಳು ಹಲವಾರು ಮಂದಿಗೆ ಟೋಪಿ ಹಾಕಿದ್ದಾರೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.
ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ನೇತೃತ್ವದಲ್ಲಿ ಈ ಭರ್ಜರಿ ಕಾರ್ಯಾಚರಣೆ ನಡೆಸಲಾಗಿದ್ದು ಸೂಕ್ತ ಮಾಹಿತಿ ಆಧರಿಸಿ ಆರೋಪಿಗಳನ್ನು ಖೆಡ್ಡಾಗೆ ಕೆಡವಲಾಗಿದೆ. ಸದ್ಯ ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
mangalore visa fraud lakhscheating 2 Arrest



