Mangaluru Police : ಸಮಯಪ್ರಜ್ಞೆ ಮೆರೆದ ಮಂಗಳೂರು ಪೊಲೀಸರು : ಆತ್ಮ*ಹತ್ಯೆಗೆ ಯತ್ನ- ತಂದೆ – ಮಗಳ ರಕ್ಷಣೆ

ಅಪ್ಪ ಎಂದರೆ ಆಕಾಶ ಎಂಬ ಮಾತಿದೆ. ಆದರೆ ಮಂಗಳೂರಿನಲ್ಲಿ ತಂದೆಯೊಬ್ಬ ತಾನೂ ಸಾಯಲು ಯತ್ನಿಸಿದ್ದು ಮಾತ್ರವಲ್ಲದೇ ಮಗಳನ್ನೂ ಸಾಯಿಸಲು ಮುಂದಾಗಿದ್ದಾನೆ. ಆದರೆ ಪಣಂಬೂರು ಪೊಲೀಸ (Mangaluru Police)ರ ಸಮಯ ಪ್ರಜ್ಞೆಯಿಂದಾಗಿ ತಂದೆ ಹಾಗೂ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಜೇಶ್ ಎಂಬಾತ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಡ – ಹೆಂಡತಿ ನಡುವೆ ಜಗಳ ಉಂಟಾದ ಹಿನ್ನೆಲೆಯಲ್ಲಿ ಮಗುವಿನೊಂದಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆಸ್ಪತ್ರೆಗೆ ಯತ್ನಿಸುತ್ತಿದ್ದ ಸಂದರ್ಭದಲ್ಲಿ ಮನೆಯ ಒಳಗೆ ನುಗ್ಗಿದ ಪೊಲೀಸರು ತಂದೆ ಹಾಗೂ ಮಗಳನ್ನು ರಕ್ಷಿಸಿದ್ದಾರೆ.
ಏನಿದು ಘಟನೆ ?
ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ ರಾಜೇಶ್ ತನ್ನ ಪುಟ್ಟ ಮಗಳೊಂದಿಗೆ ತಣ್ಣೀರು ಬಾವಿ ಬೀಚ್ಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಮೊಬೈಲ್ನಲ್ಲಿ ಸಮುದ್ರ ಕಿನಾರೆಗೆ ತೆರಳುತ್ತಿರುವ ವಿಡಿಯೋವನ್ನು ಮಾಡಿದ್ದ ರಾಜೇಶ್ ಇದನ್ನು ತನ್ನ ಅಕ್ಕ ಸೇರಿದಂತೆ ಇತರೆ ಸಂಬಂಧಿಗಳಿಗೆ ಕಳುಹಿಸಿದ್ದ. ತನ್ನ ಹಾಗೂ ಮಗಳ ನೆರಳಿನ ವಿಡಿಯೋ ಮಾಡುತ್ತಿದ್ದ ರಾಜೇಶ್ ಬಳಿಯಲ್ಲಿ ನಾವು ಸಾಯೋದು ಬೇಡ ಎಂದು ಮಗಳು ಅಂಗಲಾಚಿದ್ದಳು.
ಈ ವಿಡಯೋ ಸಾಮಾಜಿಕ ಜಾಲತಾಣದಲ್ಲಿ ಮಿಂಚಿನ ವೇಗದಲ್ಲಿ ವೈರಲ್ ಆಗಿದ್ದು ಪಣಂಬೂರು ಠಾಣಾ ಪೊಲೀಸರ ಕೈ ಸೇರಿದೆ. ಕೂಡಲೇ ಕಾರ್ಯ ಪ್ರವೃತ್ತರಾದ ಪಣಂಬೂರು ಠಾಣಾ ಪೊಲೀಸರು ತಣ್ಣೀರು ಬಾವಿ ಬೀಚ್ನಲ್ಲಿ ಅಪ್ಪ ಮಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಸಮುದ್ರದ ಬಳಿಯಲ್ಲಿ ತಂದೆ ಮಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ರಾಜೇಶ್ ಮೊಬೈಲ್ ಟ್ರೇಸ್ ಮಾಡುವ ಮೂಲಕ ಅವರಿದ್ದ ಜಾಗ ಪತ್ತೆ ಮಾಡಿದ್ದಾರೆ.
ಕೂಡಲೇ ಶಾಂತಿನಗರದಲ್ಲಿರುವ ರಾಜೇಶ್ನ ಮನೆ ಹುಡುಕಿಕೊಂಡು ಹೋದ ಪೊಲೀಸರು ಮನೆ ಒಳಗೆ ನುಗ್ಗಿದ್ದಾರೆ. ಈ ವೇಳೆ ರಾಜೇಶ್ ಪುತ್ರಿಯೊಂದಿಗೆ ನೇಣು ಬಿಗಿದುಕೊಳ್ಳಲು ಯತ್ನಿಸುತ್ತಿದ್ದ. ಇದನ್ನು ತಪ್ಪಿಸಿದ ಪೊಲೀಸರು ಇಬ್ಬರ ಜೀವ ಕಾಪಾಡಿದ್ದಾರೆ.
ಏಳು ವರ್ಷಗಳ ಹಿಂದೆ ರಾಜೇಶ್ ಬಜ್ಪೆ ಮೂಲದ ಯುವತಿಯೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗಿದೆ. ಆದರೆ ಕೆಲ ಸಮಯದಿಂದ ಇಬ್ಬರ ನಡುವೆ ದಾಂಪತ್ಯ ಕಲಹ ಏರ್ಪಟ್ಟಿತ್ತು. ಇದರಿಂದ ರೋಸಿ ಹೋಗಿದ್ದ ರಾಜೇಶ್ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದ ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಪತಿ ರಾಜೇಶ್ ಹಾಗೂ ಆತನ ಪತ್ನಿಯನ್ನು ಠಾಣೆಗೆ ಕರೆಯಿಸಿ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
Mangaluru Police sense of time Father and daughter who were attempting suicide



