ಕೇರಳ : ದೇವರನಾಡು ಕೇರಳ ಜನತೆಯ ಬಹುದಿನಗಳ ಬೇಡಿಕೆಗೆ ಕೊನೆಗೂ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಕೇರಳ ರಾಜ್ಯದ ಹೆಸರು ಬದಲಾವಣೆಗೆ ಅಸ್ತು ನೀಡಲಾಗಿದೆ. ಹೀಗಾಗಿ ಇನ್ಮುಂದೆ ಕೇರಳ ರಾಜ್ಯವು ಕೇರಳಂ ಎಂದು ಕರೆಯಿಸಿಕೊಳ್ಳಲಿದೆ. ಏಪ್ರಿಲ್ – ಮೇ ತಿಂಗಳಲ್ಲಿ ಕೇರಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಘೋಷಿಸಿದೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡ ಬಳಿಕ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಕೇರಳ ಹೆಸರು ಬದಲಾವಣೆ ಮಸೂದೆಯ ಅನುಮೋದನೆಗೆ ರಾಜ್ಯ ವಿಧಾನಸಭೆಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ. ರಾಜ್ಯ ವಿಧಾನಸಭೆಯ ಅಭಿಪ್ರಾಯ ಸ್ವೀಕರಿಸಿದ ಬಳಿಕ ಕೇರಳ ಹೆಸರನ್ನು ಕೇರಳಂ ಎಂದು ಬದಲಾಯಿಸಲು 2026ರ ಕೇರಳ (ಹೆಸರು ಬದಲಾವಣೆ) ಮಸೂದೆಯನ್ನು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಶಿಫಾರಸ್ಸಿನ ಮೇಲೆ ಮಂಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೈವಕ್ಕೆ ಅಪಮಾನಗೈದ ರಣವೀರ್ ಸಿಂಗ್ಗೆ ಹೈಕೋರ್ಟ್ ತರಾಟೆ : ಸೂಪರ್ಸ್ಟಾರ್ ವರ್ತನೆ ಹೇಗಿರಬೇಕೆಂದು ಪಾಠ
ಇನ್ನು ಈ ಬೆಳವಣಿಗೆ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ಕೇರಳ ರಾಜ್ಯವನ್ನು ಕೇರಳಂ ಎಂದು ಬದಲಾಯಿಸಲು ಅನುಮತಿ ನೀಡುವ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳವನ್ನೇಕೆ ಬಂಗಾಳ ಎಂದು ಬದಲಿಸಲು ಸಮ್ಮತಿ ನೀಡುತ್ತಿಲ್ಲ ? ಬಿಜೆಪಿ ಹಾಗೂ ಸಿಪಿಐ(ಎಂ) ನಡುವಿನ ಮೈತ್ರಿಯಿಂದ ಕೇರಳ ಹೆಸರು ಬದಲಾಗಿದೆ. ಆದರೆ ಪಶ್ಚಿಮ ಬಂಗಾಳ ಹೆಸರು ಬದಲಾವಣೆಗೆ ಎಷ್ಟೇ ಮನವಿ ಸಲ್ಲಿಸಿದರೂ ಕೇಂದ್ರ ಸರ್ಕಾರ ಅದನ್ನು ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ .



