‘ಮನರೇಗಾ ಕಾಯ್ದೆ ರದ್ದು ಮಾಡಲು ಪ್ರೇರಣೆ ನೀಡಿದ್ದೇ ಆರ್​ಎಸ್​ಎಸ್​’ : ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ

ಶೋಷಿತರಿಗೆ ಆರ್ಥಿಕ ಚೈತನ್ಯ ನೀಡಿದ್ದ ಐತಿಹಾಸಿಕ ಮನರೇಗಾ ಕಾಯ್ದೆಯನ್ನು ಬುಡಮೇಲು ಮಾಡಿ ವಿಕಸಿತ ಭಾರತ ಗ್ಯಾರಂಟಿ ಫಾರ್​ ರೋಜಗಾರ್​ ಅಜೀವಿಕ್​ ಮಿಷನ್​ ಕಾಯ್ದೆ ರೂಪಿಸಿರುವ ಬಿಜೆಪಿ ಸರ್ಕಾರವು ಸರ್ವಾಧಿಕಾರಿ ಧೋರಣೆಯನ್ನು ತೋರಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2005ರಲ್ಲಿ ಮನಮೋಹನ್​ ಸಿಂಗ್​ ನೇತೃತ್ವ ಸರ್ಕಾರವು ದೇಶದ ಕೂಲಿ ಕಾರ್ಮಿಕರು ಹಾಗೂ ರೈತರ ಜೀವನೋಪಾಯಕ್ಕೆಂದು ನಿರ್ಮಿಸಿದ್ದ ಮನರೇಗಾ ಕಾಯ್ದೆಯನ್ನು, ಮೋದಿ ಸರ್ಕಾರವು ಜನರ ಜೊತೆ ಚರ್ಚೆ ಮಾಡದೆ, ರಾಜ್ಯಗಳ ಜೊತೆ ಸಮಾಲೋಚನೆ ಮಾಡದೆ, ಅಭಿಪ್ರಾಯವನ್ನೂ ಪಡೆಯದೆ ಧ್ವಂಸಗೊಳಿಸಿರುವುದು ಖಂಡನೀಯ ಎಂದಿದ್ದಾರೆ.

ಮೋದಿ ಸರ್ಕಾರವು ಡಿಸೆಂಬರ್​ 17ರಂದು ಕೇವಲ 8 ಗಂಟೆಗಳ ಕಾಲ ಚರ್ಚೆ ನಡೆಸಿ ಮಾರನೇ ದಿನವೇ ಈ ಮನೆಹಾಳು ಕಾಯ್ದೆ ಜಾರಿಗೆ ತಂದಿದೆ. ಈ ಮೂಲಕ ಮೂಲಕ ದೇಶದ 12.16 ಕೋಟಿ ಕಾರ್ಮಿಕರನ್ನು, ಅವರಲ್ಲಿ ಶೇ.53.61 ರಷ್ಟು ಸಂಖ್ಯೆಯಲ್ಲಿದ್ದ 6.21 ಕೋಟಿ ಮಹಿಳೆಯರ ಬದುಕನ್ನು ಹಾಗೂ ಶೇ.17 ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ.11 ರಷ್ಟು ಪರಿಶಿಷ್ಟ ಪಂಗಡದ ನರೇಗಾ ಕೂಲಿ ಕಾರ್ಮಿಕರ ಬದುಕಿಗೆ ಬೆಂಕಿ ಇಟ್ಟಿದೆ ಎಂದು ಕಿಡಿಕಾರಿದ್ದಾರೆ.
ಸುಳ್ಳು ಪ್ರಚಾರದ ಮೂಲಕ ದೇಶದಲ್ಲಿ 2014ರಿಂದ ಅಧಿಕಾರದಲ್ಲಿರುವ ಮೋದಿ ಸರ್ಕಾರವು ನಮ್ಮ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಎಲ್ಲಾ ಜನಸ್ನೇಹಿ ಯೋಜನೆಗಳನ್ನು ಧ್ವಂಸ ಮಾಡುತ್ತಿದೆ. ಆರ್​ಎಸ್​ಎಸ್​ನಂತಹ ಸಂಘಟನೆಯ ಮೂಲಕ ಜನರು ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗುವಂತಹ ಕಾಯ್ದೆಗಳನ್ನು ನಾಶ ಮಾಡಲು ಬಿಜೆಪಿ ಸರ್ಕಾರ ಮಾರ್ಗದರ್ಶನ ಪಡೆದುಕೊಳ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕೇವಲ ಕಾರ್ಪೋರೇಟ್​ ಕಂಪನಿಗಳ ಹಿತಾಸಕ್ತಿ ಬಯಸುವ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಧಿಕಾರಕ್ಕೆ ಬಮದಾಗಿನಿಂದ ಜನರು ಹಕ್ಕುಗಳನ್ನು ದುರ್ಬಲಗೊಳಿಸುತ್ತಿದೆ. ದೇಶದ ಸಣ್ಣ ಜನತೆಯಿಂದ ಮನರೇಗಾ ಕೂಲಿ ಕೆಲಸವನ್ನು ಕಿತ್ತುಕೊಂಡು ಅವರನ್ನು ಕಾರ್ಪೋರೇಟ್​ ಕಂಪನಿಗಳಿಗೆ ಅಗ್ಗದ ಕೂಲಿಯನ್ನಾಗಿ ಮಾಡುವ ಹುನ್ನಾರದ ಪ್ರತಿಫಲವೇ ಈ ಹೊಸ ಕಾಯ್ದೆ ಎಂದು ಗುಡುಗಿದ್ದಾರೆ.

ಇದನ್ನೂ ಓದಿ: ಜಿ ರಾಮ್ ಜಿ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಹೇಳಿ ಬಡವರ, ಕೂಲಿಕಾರರ ದಾರಿ ತಪ್ಪಿಸುತ್ತಿದೆ: ಬಸವರಾಜ ಬೊಮ್ಮಾಯಿ

ಗಾಂಧೀಜಿಯವರು ಗ್ರಾಮೀಣ ಭಾರತ ಅಭಿವೃದ್ಧಿಯ ಕನಸು ಕಂಡಿದ್ದರು. ಇದನ್ನೇ ಪ್ರೇರಣೆಯಾಗಿಟ್ಟುಕೊಂಡು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಂದು ನಾಮಕರಣ ಮಾಡಲಾಗಿತ್ತು. ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಳೆದ ಹನ್ನೊಂದುವರೆ ವರ್ಷಗಳಲ್ಲಿ 30ಕ್ಕೂ ಅಧಿಕ ಇಂತಹ ಜನಪರ ಯೋಜನೆಗಳನ್ನು ಅಡಿಮೇಲು ಮಾಡಿದೆ. ನಿರ್ಮಲಾ ಭಾರತ್​ ಯೋಜನೆಗೆ ಸ್ವಚ್ಛ ಭಾರತ್​, ಇಂದಿರಾ ಆವಾಜ್​ ಯೋಜನೆಗೆ ಪ್ರಧಾನ್​ ಮಂತ್ರಿ ಆವಾಸ್​ ಯೋಜನೆ ಹೀಗೆ ಹೆಸರು ಬದಲಾವಣೆ ಮಾಡಲಾಗುತ್ತಿದೆ . ಒಟ್ನಲ್ಲಿ ಯುಪಿಎ ಸರ್ಕಾರದ ಜನಪರ ಯೋಜನೆಗಳನ್ನು ಬುಡಮೇಲು ಮಾಡಿ ಹಾಳು ಮಾಡಿದ್ದೇ ಬಿಜೆಪಿ ಸರ್ಕಾರದ ಸಾಧನೆ ಎಂದು ಕಿಡಿಕಾರಿದ್ರು.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories