ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಕಡ್ಡಾಯ : ಬ್ಯಾಲೆಟ್ ಪೇಪರ್ ಬಳಕೆಗೆ ಕೊನೆಗೂ ರಾಜ್ಯಪಾಲರ ಅಂಕಿತ
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆಗೆ ಅವಕಾಶ ನೀಡುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು ಕೊನೆಗೂ ಅಂಕಿತ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.
ಸ್ಥಳೀಯ ಚುನಾವಣೆಯಲ್ಲಿ ಮತಪತ್ರಗಳ ಬಳಕೆಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸಭಾತ್ಯಾಗ ಮಾಡಿ ಆಕ್ರೋಶ ಹೊರಹಾಕಿದ್ದರು. ಆದರೆ ಈ ಎಲ್ಲಾ ವಿರೋಧಗಳ ನಡುವೆಯೂ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ ಅಂಗೀಕಾರಗೊಂಡಿತ್ತು. ಆದರೆ ರಾಜ್ಯಪಾಲರು ಈ ವಿಧೇಯಕಕ್ಕೆ ಅಂಕಿತ ನೀಡದೇ ಇದನ್ನು ಹಾಗೆಯೇ ಇರಿಸಿದ್ದರು. ಆದರೆ ಇದೀಗ ಬ್ಯಾಲೆಟ್ ಪೇಪರ್ ಬಳಕೆಗೆ ರಾಜ್ಯಪಾಲರಿಂದಲೂ ಹಸಿರುನಿಶಾನೆ ದೊರಕಿದೆ.
ಲೋಕಸಭಾ ಚುನಾವಣೆಯಲ್ಲಿ ಇವಿಎಂ ಪಾರದರ್ಶಕತೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಪಕ್ಷ ವೋಟ್ ಚೋರಿ ಆರೋಪಗಳನ್ನು ಮಾಡಿತ್ತು. ಇದಾದ ಬಳಿಕ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತಯಂತ್ರಗಳ ಬದಲು ಮತಪೆಟ್ಟಿಗೆಯನ್ನು ಬಳಕೆ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧರಿಸಿತ್ತು. ಈ ಹಿನ್ನೆಲೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಕಾಯ್ದೆ ಜಾರಿಗೆ ಬಂದಿದೆ.
ಇದನ್ನೂ ಓದಿ: ಸರ್ಕಾರಿ ಸಭೆಗಳಲ್ಲಿ ಕರಿದ ತಿನಿಸುಗಳಿಗೆ ನಿರ್ಬಂಧ : ಸಿರಿಧಾನ್ಯ ಆಧಾರಿತ ತಿನಿಸುಗಳಿಗಷ್ಟೇ ಅವಕಾಶ
ಹೀಗಾಗಿ ರಾಜ್ಯದಲ್ಲಿ ಇನ್ಮುಂದೆ ನಡೆಯಲಿರುವ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ನಗರ ಪಾಲಿಕೆಗಳು ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮತಪತ್ರದ ಮೂಲಕ ನಡೆಯಲಿದೆ. ಮತಯಂತ್ರದ ಬದಲು ಮತಪತ್ರ ಬಳಸಲಾಗುತ್ತದೆ. ಅಲ್ಲದೇ ಇದೇ ಕಾಯ್ದೆಯ ಅನ್ವಯ , ಕಾಯ್ದೆಯಲ್ಲಿ ಜಿಲ್ಲಾ ಪಂಚಾಯತಿಯ ಪ್ರತಿಯೊಂದು ಮತಕ್ಷೇತ್ರಗಳಲ್ಲಿ ರಾಜ್ಯ ಚುನಾವಣಾ ಆಯೋಗದ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಪಟ್ಟು ಉಪವಿಭಾಗಾಧಿಕಾರಿ ಮತದಾರರ ಪಟ್ಟಿ ಸಿದ್ಧಪಡಿಸಬೇಕು. ಈ ಮುಂಚೆ ಸಹ ಆಯುಕ್ತರಿಂದ ಮತದಾನದ ಪಟ್ಟಿಯನ್ನು ಸಿದ್ಧಪಡಿಸಬಹುದಾಗಿತ್ತು. ಇದೀಗ ಆ ಹೊಣೆಯನ್ನು ಉಪವಿಭಾಗಾಧಿಕಾರಿಗೆ ನೀಡಲಾಗಿದೆ.



