ಹಿಂದೂಗಳ ಪವಿತ್ರ ಚಾತುರ್ಮಾಸ 2025 ಯಾವಾಗ ಪ್ರಾರಂಭ ? ದಿನಾಂಕ, ಮಹತ್ವ, ವ್ರತಾಚರಣೆ ತಿಳಿಯಿರಿ

ಹಿಂದೂ ಧರ್ಮದಲ್ಲಿ ಅನೇಕ ವ್ರತಾಚರಣೆಗಳನ್ನು ನಡೆಸಲಾಗುತ್ತದೆ. ಅವೆಲ್ಲವುಗಳಿಗೂ ಅದರದೇ ಆದ ಮಹತ್ವವಿದೆ. ಪ್ರತಿವರ್ಷ ಚಾತುರ್ಮಾಸ (Chaturmas 2025) ವ್ರತಾಚರಣೆಯನ್ನು ಆಚರಿಸಲಾಗುತ್ತದೆ.

ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದ ಆರಂಭವಾಗುತ್ತದೆ. ಈ ವರ್ಷದ ಏಕಾದಶಿಯು ಜುಲೈ 6 ರಿಂದ ಪ್ರಾರಂಭವಾಗುತ್ತದೆ. ಇದನ್ನು ದೇವಶಯನಿ ಏಕಾದಶಿ ಎಂದು ಕರೆಯುತ್ತಾರೆ. ಈ ದಿನದಿಂದ ಮಹಾವಿಷ್ಣು 4 ತಿಂಗಳುಗಳ ಕಾಲ ಯೋಗ ನಿದ್ರೆಗೆ ಜಾರುತ್ತಾನೆ.

ಆದ್ದರಿಂದ ಈ ದಿನದಿಂದಲೇ ಚಾತುರ್ಮಾಸ ಆರಂಭ ಎನ್ನಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಚಾತುರ್ಮಾಸ ಪೂಜೆಗೆ ವಿಶೇಷ ಮಹತ್ವವಿದೆ. ಈ ತಿಂಗಳಿನಲ್ಲಿ ದೇವರ ಪೂಜೆ, ವ್ರತ, ಜಪ, ತಪಸ್ಸು ಮಾಡುವುದರಿಂದ ಪುಣ್ಯ ಸಿಗುತ್ತದೆ.

ಈ ಮಾಸವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಚಾತುರ್ಮಾಸದ ವೇಳೆಯಲ್ಲಿ ಏನು ಮಾಡಬೇಕು ? ಏನು ಮಾಡಬಾರದು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

Chaturmas : ಚಾತುರ್ಮಾಸ ಯಾವಾಗ ಪ್ರಾರಂಭ ?

ಹಿಂದೂ ಪಂಚಾಂಗದ ಪ್ರಕಾರ 2025 ರ ಚಾತುರ್ಮಾಸವು ಜುಲೈ 6 ರಿಂದ ಪ್ರಾರಂಭವಾಗುತ್ತದೆ. ಇದು ಆಷಾಡ, ಶ್ರಾವಣ, ಭಾದ್ರಪದ ಮತ್ತು ಕಾರ್ತಿಕ ಮಾಸಗಳನ್ನು ಒಳಗೊಂಡು ಒಟ್ಟು 4 ತಿಂಗಳುಗಳ ಕಾಲ ಆಚರಣೆಯಲ್ಲಿರುತ್ತದೆ.

ದೇವಶಯನಿ ಏಕಾದಶಿಯಿಂದ ಪ್ರಾರಂಭವಾಗಿ, ದೇವೋತ್ಥಾನ ಏಕಾದಶಿಯವರೆಗೆ ಇರುತ್ತದೆ. ಈ ನಾಲ್ಕು ತಿಂಗಳುಗಳ ಕಾಲ, ಶಿವನು ಬ್ರಹ್ಮಾಂಡವನ್ನು ನೋಡಿಕೊಳ್ಳುತ್ತಾನೆ. ಆದ್ದರಿಂದಲೇ ಈ ಸಮಯವನ್ನು ದೇವತೆಗಳನ್ನು ಒಲಿಸಿಕೊಳ್ಳುವ ಸಮಯ ಎಂದು ಹೇಳುತ್ತಾರೆ.

Chaturmas : ಚಾತುರ್ಮಾಸದಲ್ಲಿ ಏನು ಮಾಡಬೇಕು ?

ಚಾತುರ್ಮಾಸವು ದೇವರನ್ನು ಒಲಿಸಿಕೊಳ್ಳುವ ಪುಣ್ಯಕಾಲ. ಈ ಸಮಯದಲ್ಲಿ ದೇವರ ಪೂಜೆ, ಪ್ರಾರ್ಥನೆ, ದಾನ, ಸತ್ಸಂಗ ಮುಂತಾದ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಅಲ್ಲದೇ ಕೆಲವು ವ್ರತ ನಿಯಮಗಳನ್ನು ಪಾಲಿಸಬೇಕು.

ಚಾತುರ್ಮಾಸದಲ್ಲಿ ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು, ಸ್ನಾನ ಇತ್ಯಾದಿಗಳನ್ನು ಮುಗಿಸಿ, ಸೂರ್ಯ ದೇವರಿಗೆ ನಮಿಸಬೇಕು. ನಂತರ ಮಹಾವಿಷ್ಙು ಹಾಗೂ ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ಸಾತ್ವಿಕ ಆಹಾರವನ್ನು ಸೇವಿಸಬೇಕು.

ಇದನ್ನೂ ಓದಿ : ಕಾರ್ತೀಕ ಸೋಮವಾರದ ಆಚರಣೆ ಮಹತ್ವವೇನು ? ಶಿವನನ್ನು ಅರ್ಚಿಸುವುದು ಹೇಗೆ ?

ಅಗತ್ಯವಿರುವವರಿಗೆ ಆಹಾರ, ದೀಪ, ಬಟ್ಟೆ ದಾನ ಮಾಡಬೇಕು. ಈ ಸಮಯದಲ್ಲಿ ದಾನ ಮಾಡುವುದರಿಂದ ವಿಶೇಷ ಫಲ ದೊರಕುತ್ತದೆ ಎಂದು ಹೇಳಲಾಗಿದೆ. ಚಾತುರ್ಮಾಸದ ಸಮಯದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಬೇಕು.

ಚಾತುರ್ಮಾಸದಲ್ಲಿ ಏನು ಮಾಡಬಾರದು?‌

ಚಾತುರ್ಮಾಸದಲ್ಲಿ ವಿಷ್ಣು ಯೋಗ ನಿದ್ರೆಯಲ್ಲಿರುತ್ತಾನೆ. ಆದ್ದರಿಂದ ಆ ಸಮಯದಲ್ಲಿ ಮದುವೆ, ಉಪನಯನ, ಗೃಹಪ್ರವೇಶದಂತಹ ಶುಭ ಕಾರ್ಯಗಳನ್ನು ನಿಷಿದ್ಧಿಸಲಾಗಿದೆ.

ಕಪ್ಪು ಮತ್ತು ಕಪ್ಪು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬಾರದು ಎಂದು ಹೇಳಲಾಗಿದೆ. ಈ ಸಮಯದಲ್ಲಿ ಕೆಂಪು, ಹಸಿರು, ಹಳದಿ ಮತ್ತು ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವನ್ನು ತರುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ : Vastu Homes : ಮನೆ ಹೇಗಿರಬೇಕು ? ಏನು ಹೇಳುತ್ತೆ ವಾಸ್ತುಶಾಸ್ತ್ರ

ಚಾತುರ್ಮಾಸದ ಸಮಯದಲ್ಲಿ ಬೇರೆಯವರಿಗೆ ನೋವಾಗುವಂತೆ ಮಾತನಾಡುವುದು, ಕೆಟ್ಟ ಪದಗಳನ್ನು ಹೇಳುವುದು, ಸುಳ್ಳು ಹೇಳುವುದು, ತಪ್ಪು ಕೆಲಸಗಳನ್ನು ಮಾಡಬಾರದು. ಸಾತ್ವಿಕ ಜೀವನ ನಡೆಸಬೇಕು.

Spiritual When is Chaturmas 2025 starts know the date significance and rituals in kannada News arc

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories