ವರಮಹಾಲಕ್ಷ್ಮಿ ಹಬ್ಬ ಏಕೆ ಮಾಡಬೇಕು?
Varamahalakshmi Vratha 2025: ಹಿಂದೂಗಳಲ್ಲಿ ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಕರೆಯುತ್ತಾರೆ. ಲಕ್ಷ್ಮಿ ಪೂಜೆ ಮಾಡುವುದರಿಂದ ಜೀವನದಲ್ಲಿ ಧನದ ಕೊರತೆ ಕಂಡು ಬರುವುದಿಲ್ಲ ಎಂಬುದು ನಂಬಿಕೆ. ಅದ್ದರಿಂದ ಮಹಿಳೆಯರು ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುತ್ತಾರೆ. ಲಕ್ಷ್ಮಿ ದೇವಿಯ ಪೂಜೆ ಮಾಡಿ ಕೃತಾರ್ಥರಾಗುತ್ತಾರೆ. ಶ್ರಾವಣದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬವಂತು ಮಹಿಳೆಯರಿಗೆ ಅತ್ಯಂತ ಮಹತ್ವವೆನಿಸಿದೆ. ಹಾಗಾಗಿಯೇ ಬಹಳಷ್ಟು ಮಹಿಳೆಯರು ವರಮಹಾಲಕ್ಷ್ಮಿ ವ್ರತಾಚರಣೆಯನ್ನು ಕೈಗೊಳ್ಳುತ್ತಾರೆ. ದಿನವಿಡೀ ಉಪವಾಸವಿದ್ದು, ಲಕ್ಷ್ಮಿ ದೇವಿಗೆ ನೈವೇದ್ಯ ಅರ್ಪಿಸಿ, ಪೂಜೆ ಮಾಡಿ, ಮನೆಗೆ ಬಂದ ಮುತ್ತೈದೆಯರಿಗೆ ಅರಿಶಿಣ ಕುಂಕುಮ ನೀಡಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಮಹಿಳೆಯರು ಅತ್ಯಂತ ಸಂಭ್ರಮದಿಂದ ಆಚರಿಸುವ ವರಮಹಾಲಕ್ಷ್ಮಿ ಹಬ್ಬವನ್ನು ಈ ವರ್ಷ ಆಗಸ್ಟ್ 8 ಕ್ಕೆ ಆಚರಿಸಲಾಗುತ್ತಿದೆ. ಈ ವರಮಹಾಲಕ್ಷ್ಮಿ ಹಬ್ಬದ ಆಚರಣೆ ಹೇಗೆ? ಪೂಜಾ ವಿಧಿ ಮತ್ತು ಮಹತ್ವವನ್ನು ತಿಳಿಯೋಣ.
ವರಮಹಾಲಕ್ಷ್ಮಿ ಹಬ್ಬದ ಮಹತ್ವ
ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಈ ವ್ರತವನ್ನು ಮಾಡುವುದರಿಂದ ಅದೃಷ್ಟ, ಸಂತೋಷ, ಸಮೃದ್ಧಿ, ಸಂಪತ್ತು, ಸಂತಾನ ಮತ್ತು ವೈವಾಹಿಕ ಸಂತೋಷವನ್ನು ಪಡೆಯಲು ಆಚರಿಸಲಾಗುತ್ತದೆ. ವರಮಹಾಲಕ್ಷ್ಮಿ ಎಂಬುದು ಲಕ್ಷ್ಮಿಯ ರೂಪವಾಗಿದೆ. ಅವಳನ್ನು ಅಷ್ಟೈಶ್ವರ್ಯವನ್ನು ನೀಡುವ ದೇವತೆ ಎಂದು ಪರಿಗಣಿಸಲಾಗುತ್ತದೆ. ಈ ದಿನದಂದು ಉಪವಾಸ ಮಾಡಿ ಪೂಜೆ ಸಲ್ಲಿಸುವುದರಿಂದ ಅಷ್ಟಲಕ್ಷ್ಮಿಯ (ಧನ ಲಕ್ಷ್ಮಿ, ಧೈರ್ಯ ಲಕ್ಷ್ಮಿ, ಸೌಭಾಗ್ಯ ಲಕ್ಷ್ಮಿ, ಸಂತೋಷ ಲಕ್ಷ್ಮಿ, ವಿದ್ಯಾ ಲಕ್ಷ್ಮಿ, ವೀರ ಲಕ್ಷ್ಮಿ, ವಿಜಯ ಲಕ್ಷ್ಮಿ ಮತ್ತು ಸನ್ಮಾನ ಲಕ್ಷ್ಮಿ) ಆಶೀರ್ವಾದವನ್ನು ಪಡೆಯಬಹುದು ಎಂಬ ನಂಬಿಕೆಯಿದೆ.
ವರಮಹಾಲಕ್ಷ್ಮಿಯು ಮಹಾವಿಷ್ಣುವಿನ ಪತ್ನಿ ಮಹಾಲಕ್ಷ್ಮಿಯ ಶಕ್ತಿಶಾಲಿ ಮತ್ತು ಕರುಣಾಮಯಿ ರೂಪ ಎನ್ನಲಾಗಿದೆ. ಬೇಡಿದ ವರಗಳನ್ನು ನೀಡುವ ಲಕ್ಷ್ಮಿ ಎಂಬುದು ಈ ಹೆಸರಿನ ಅರ್ಥ. ಕ್ಷೀರಸಾಗರದಿಂದ ಬಂದ ಲಕ್ಷ್ಮಿಯು ಶುದ್ಧತೆ ಮತ್ತು ಶಕ್ತಿಯ ಸಂಕೇತ. ಈ ದಿನದಂದು ದೇವಿಯನ್ನು ಪೂಜಿಸುವುದರಿಂದ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪಡೆದುಕೊಳ್ಳಬಹುದಾಗಿದೆ. ವರಮಾಹಾಲಕ್ಷ್ಮಿ ಹಬ್ಬವು ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ವಿವಾಹಿತ ಮಹಿಳೆಯರು ತಮ್ಮ ಪತಿ ಮತ್ತು ಕುಟುಂಬದ ಕಲ್ಯಾಣಕ್ಕಾಗಿ ಆಚರಿಸುತ್ತಾರೆ.
ಇದನ್ನೂ ಓದಿ: ವರಮಹಾಲಕ್ಷ್ಮೀ ವ್ರತ : ದಿನಭವಿಷ್ಯ : ಯಾವ ರಾಶಿಯವರಿಗೆ ಲಾಭ
ವರಮಹಾಲಕ್ಷ್ಮಿ ವ್ರತ ಮುಹೂರ್ತ
ವರಮಹಾಲಕ್ಷ್ಮಿ ವ್ರತ: ಶುಕ್ರವಾರ, ಆಗಸ್ಟ್ 8, 2025
ಮುಂಜಾನೆ ಪೂಜೆ ಸಮಯ: ಬೆಳಿಗ್ಗೆ 06: 29 ರಿಂದ ಬೆಳಿಗ್ಗೆ 08:46 ರವರೆಗೆ
ಮಧ್ಯಾಹ್ನ ಪೂಜೆಗೆ ಸಮಯ: ಮಧ್ಯಾಹ್ನ 1:22 ರಿಂದ 3:41 ರವರೆಗೆ
ಸಂಜೆ ಪೂಜೆಗೆ ಸಮಯ: ಸಂಜೆ 7:27 ರಿಂದ 8:54 ರವರೆಗೆ
ಮಧ್ಯರಾತ್ರಿ ಪೂಜೆ ಸಮಯ: ಆಗಸ್ಟ್ 8 ರಂದು ರಾತ್ರಿ 11:55 ರಿಂದ ಆಗಸ್ಟ್ 9 ಮುಂಜಾನೆ 01: 50 ರವರೆಗೆ
ಪೂಜಾ ವಿಧಿ
ವರಮಹಾಲಕ್ಷ್ಮಿ ಪೂಜೆಯ ದಿನದಂದು ಮಹಿಳೆಯರು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶುದ್ಧರಾಗಬೇಕು.
ಸ್ನಾನದ ನಂತರ ಹೊಸ ಬಟ್ಟೆ ಧರಿಸಬೇಕು.
ಪೂಜೆ ಮಾಡುವ ಸ್ಥಳವನ್ನು ಸ್ವಚ್ಛಮಾಡಬೇಕು.
ಮರದ ಟೇಬಲ್ ಮೇಲೆ ಕೆಂಪು ಬಟ್ಟೆಯನ್ನು ಹರಡಿ, ಮಾವಿನ ಎಲೆ, ಬಾಳೆ ಗಿಡ ಹಾಗೂ ಹೂವುಗಳಿಂದ ಪೀಠವನ್ನ ಸಿದ್ಧಪಡಿಸಬೇಕು.
ನಂತರ ಲಕ್ಷ್ಮಿ ದೇವಿಯ ವಿಗ್ರಹಕ್ಕೆ ಅಥವಾ ಕಳಸಕ್ಕೆ ಸೀರೆ ಉಡಿಸಿ, ಕಲಶ ಸ್ಥಾಪನೆ ಮಾಡಬೇಕು.
ದೇವಿಯ ಮುಂದೆ ವೀಳ್ಯದೆಲೆ, 5 ರೀತಿಯ ಹಣ್ಣು, ತೆಂಗಿನ ಕಾಯಿ, ಬೆಳ್ಳಿ ನಾಣ್ಯಗಳನ್ನು ಇಡಬೇಕು.
ದೇವಿಯ ಮುಂದೆ ಜೋಡಿ ತುಪ್ಪದ ದೀಪವನ್ನು ಹಚ್ಚಬೇಕು.
ದೇವಿಗೆ ಪ್ರಿಯವಾದ ನೈವೇದ್ಯವನ್ನು ತಯಾರಿಸಬೇಕು.
ನಂತರ ಲಕ್ಷ್ಮಿ ದೇವಿಯನ್ನು ಪೂಜಿಸುವ ಮೊದಲು ಗಣಪತಿಯನ್ನು ಪೂಜಿಸಿ, ವರಮಹಾಲಕ್ಷ್ಮಿ ವ್ರತದ ಕಥೆಯನ್ನು ಓದಿ, ಲಕ್ಷ್ಮಿ ಮಂತ್ರಗಳನ್ನು ಪಠಿಸಬೇಕು.
ಇದಾದ ನಂತರ ದೇವಿಗೆ ಆರತಿಯನ್ನು ಮಾಡಬೇಕು.
(varamahalakshmi Vratha 2025 know the Shubh muhoortha, pooja and significance)



