IND vs SA 2nd Test Cricket Result: ಭಾರತ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 7 ವಿಕೆಟ್ ಭರ್ಜರಿ ಗೆಲುವು

ಜೊಹಾನ್ಸ್‌ಬರ್ಗ್: ಪ್ರವಾಸಿ ಭಾರತ ತಂಡದ ವಿರುದ್ಧದ ಎರಡನೇ ಟೆಸ್ಟ್ (IND vs SA 2nd Test Day 4) ಪಂದ್ಯದಲ್ಲಿ ಅತಿಥೇಯ ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಭಾರತ ನೀಡಿದ್ದ 240 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು (South Africa Cricket Team) ಇನ್ನೂ ಒಂದು ದಿನ ಬಾಕಿ ಇರುವಾಗಲೇ ಮೂರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿ 1–1ರಿಂದ ಸಮಬಲಗೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡವು ಹಂಗಾಮಿ ನಾಯಕ ಕೆ.ಎಲ್.ರಾಹುಲ್ (KL Rahul) ಅರ್ಧಶತಕ (50) ಹಾಗೂ ಆರ್.ಅಶ್ವಿನ್ (R Ashwin) ಅವರ ಸ್ಫೋಟಕ 46 ರನ್‌ಗಳ ನೆರವಿನಿಂದ 63.1 ಓವರ್‌ಗಳಲ್ಲಿ 202 ರನ್ ಗಳಿಸಿ ಆಲೌಟ್ ಆಗಿತ್ತು. ಪ್ರತಿಯಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 229 ರನ್ ಗಳಿಸಿ ಇನ್ನಿಂಗ್ಸ್‌ನಲ್ಲಿ ತುಸು ಮುನ್ನಡೆ ಕಾಯ್ದುಕೊಂಡಿತ್ತು.

ದಕ್ಷಿಣ ಆಫ್ರಿಕಾ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಜಾನ್ಸೆನ್ 4, ರಬಾಡ 3 ಹಾಗೂ ಒಲಿವರ್ 3 ವಿಕೆಟ್ ಕಬಳಿಸಿದ್ದರೆ, ಟೀಂ ಇಂಡಿಯಾ ಪರ ಶಾರ್ದೂಲ್ ಠಾಕೂರ್ 7 ಹಾಗೂ ಮೊಹಮ್ಮದ್ ಶಮಿ 2 ವಿಕೆಟ್ ಪಡೆದಿದ್ದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಪೂಜಾರ (53) ಹಾಗೂ ಅಜಿಂಕ್ಯ ರಹಾನೆ (58) ನೆರವಿನಿಂದ 266 ರನ್ ಗಳಿಸಿದ್ದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ 240 ರನ್ ಗುರಿ ನಿಗದಿಪಡಿಸಿತ್ತು. ಜಾನ್ಸೆನ್, ಲುಂಗಿ ಗಿಡಿ ಹಾಗೂ ರಬಾಡ ತಲಾ 3 ವಿಕೆಟ್ ಕಬಳಿಸಿದ್ದರು.

ನಾಲ್ಕನೇ ದಿನ ಮಳೆ ಕಾಟ: ಮೂರನೇ ದಿನದ ಆಟದ ಅಂತ್ಯದ ವೇಳೆಗೆ ಗೆಲುವಿನ ಭರವಸೆ ಮೂಡಿಸಿದ್ದ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳಿಗೆ 4ನೇ ದಿನ ಮೈದಾನಕ್ಕಿಳಿಯಲು ಮಳೆ ಅವಕಾಶವನ್ನೇ ನೀಡಲಿಲ್ಲ. ಭೋಜನ ವಿರಾಮದ ಬಳಿಕ ಆಟ ಆರಂಭವಾದಾಗ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ಕಾಯ್ದುಕೊಂಡರು. ಸಣ್ಣ ಗೆಲುವಿನ ಗುರಿಯನ್ನು ಅತಿಥೇಯ ತಂಡ ತಲುಪದಂತೆ ನೋಡಿಕೊಳ್ಳುವುದು ಟೀಂ ಇಂಡಿಯಾ ಆಟಗಾರರಿಂದ ಸಾಧ್ಯವಾಗಲಿಲ್ಲ. ಪರಿಣಾಮವಾಗಿ ದಕ್ಷಿಣ ಆಫ್ರಿಕಾ ಗೆದ್ದು ಬೀಗಿತು.

ಅತಿಥೇಯ ತಂಡದ ಪರ ಡೀನ್ ಎಲ್ಗಾರ್ 96 ರನ್ ಗಳಿಸಿ ಅಜೇಯರಾಗಿ ಉಳಿದರಲ್ಲದೆ, ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮುಂದಿನ ಪಂದ್ಯ ಕೇಪ್‌ಟೌನ್‌ನಲ್ಲಿ ಜನವರಿ 11ರಿಂದ ಆರಂಭವಾಗಲಿದೆ.

ಬೆನ್ನು ನೋವಿನ ಕಾರಣ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಿಂದ ಕೊನೇ ಕ್ಷಣದಲ್ಲಿ ಹೊರಗುಳಿಯುವಂತಾಗಿದ್ದು ತಂಡಕ್ಕೆ ಹಿನ್ನಡೆಯುಂಟುಮಾಡಿತು. ಮುಂದಿನ ಪಂದ್ಯದಲ್ಲಿ ಅವರು ತಂಡಕ್ಕೆ ಲಭ್ಯರಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

(South Africa vs India 2nd Test Cricket Score South Africa won by 7 wickets)

Comments are closed.