ಬೀದಿ ನಾಯಿಗಳಿಗೆ ಶೀಘ್ರದಲ್ಲೇ ಬಿರಿಯಾನಿ ಭಾಗ್ಯ : ಜಿಬಿಎ ಶ್ವಾನಗಳ ನಿರ್ವಹಣೆಗೆ ಪ್ರಾಣಿದಯಾ ಸಂಘ ಅಸಮಾಧಾನ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಜೋರಾಗಿದೆ. ಸಿಲಿಕಾನ್​ ಸಿಟಿಯಲ್ಲಿ ಬೀದಿ ನಾಯಿಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿರುವ ಜಿಬಿಎ ದಿನಕ್ಕೊಂದು ಹರಸಾಹಸ ಪಡುತ್ತಿದೆ. ಈ ಎಲ್ಲದರ ನಡುವೆ ಇದೀಗ ಶ್ವಾನಗಳಿಗೆ ಮತ್ತೊಮ್ಮೆ ಬಿರಿಯಾನಿ ಭಾಗ್ಯ ಒದಗಿಸುವ ವಿಚಾರ ಬೆಳಕಿಗೆ ಬಂದಿದೆ. ಈ ಬಾರಿ ಒಂದಲ್ಲ, ಬದಲಾಗಿ 2 ಬಾರಿ ಚಿಕನ್​ ಬಿರಿಯಾನಿ ಸವಿಯುವ ಭಾಗ್ಯ ಬೀದಿ ನಾಯಿಗಳಿಗೆ ಬಂದೊದಗಿದೆ.

ಮೊದಲೆಲ್ಲ ಒಂದು ಹೊತ್ತಿನ ಊಟಕ್ಕೆ ಒಂದು ಶ್ವಾನಕ್ಕೆ 22 ರೂಪಾಯಿಗಳಂತೆ ನಿಗದಿಪಡಿಸಿ ಚಿಕನ್​ ಬಿರಿಯಾನಿ ತಯಾರಿಸಲಾಗುತ್ತಿತ್ತು. ಆದರೆ ಇದೀಗ ಒಂದೊತ್ತಿನ ಊಟದ ಬೆಲೆಯನ್ನು 25 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಈ ಮೂಲಕ ಒಂದು ಶ್ವಾನವು ದಿನಕ್ಕೆ 50 ರೂಪಾಯಿ ಮೌಲ್ಯದ ಚಿಕನ್​ ಬಿರಿಯಾನಿಯನ್ನು ಸವಿಯಲಿದೆ. ಇದರ ಜೊತೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಜಿಬಿಎ ನಾಯಿಗಳಿಗೆ ಶೆಲ್ಟರ್​ ವ್ಯವಸ್ಥೆ ಕೂಡ ಮಾಡಿಕೊಳ್ಳುತ್ತಿದೆ.
ಇನ್ನು ಬೀದಿ ನಾಯಿಗಳಿಗೆ ಒಂದು ಹೊತ್ತಿನ ಬಿರಿಯಾನಿಗೆ 150 ಗ್ರಾಂ ಅಕ್ಕಿ ಹಾಗೂ 100 ಗ್ರಾಂ ಚಿಕನ್​ ಒದಗಿಸಲಾಗುತ್ತದೆ. ಇದರಿಂದ ಮಾಸಿಕ 3035 ರೂಪಾಯಿ ಖರ್ಚಾಗಲಿದೆ. ಜೊತೆಯಲ್ಲಿ ಸ್ವಚ್ಛತೆ, ಔಷಧಿ ಹಾಗೂ ಸಿಬ್ಬಂದಿಯ ವೇತನ ಸೇರಿದಂತೆ ಒಂದು ತಿಂಗಳಿಗೆ ಸುಮಾರು 66 ಲಕ್ಷ 95 ಸಾವಿರ ರೂಪಾಯಿ ಖರ್ಚಾಗಲಿದೆ ಎಂದು ಜಿಬಿಎ ಸರ್ಕಾರಕ್ಕೆ ಲೆಕ್ಕ ನೀಡಿದೆ. ಈ ಲೆಕ್ಕದ ಪ್ರಕಾರ ಹೋದರೆ ಒಂದು ವರ್ಷದಲ್ಲಿ ಜಿಬಿಎ ಕೇವಲ ಶ್ವಾನಗಳ ನಿರ್ವಹಣೆಗೆಂದೇ 8.5 ಕೋಟಿ ರೂಪಾಯಿ ಮೀಸಲಿರಿಸಬೇಕಿದೆ .

ಇದನ್ನೂ ಓದಿ: ರಾಜ್ಯದ ಬೀಡಿ ಕಾರ್ಮಿಕರಿಗೆ ಶೀಘ್ರದಲ್ಲೇ ಶುಭಸುದ್ದಿ : ತಿಂಗಳಾಂತ್ಯದೊಳಗೆ ಕನಿಷ್ಟ ವೇತನ ನಿಗದಿ

ಆದರೆ ಜಿಬಿಎ ವಿರುದ್ಧ ಪ್ರಾಣಿದಯಾ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಬೀದಿ ನಾಯಿಗಳ ನಿರ್ವಹಣೆಗೆ ಸರಿಯಾದ ಶೆಲ್ಟರ್​ ನಿರ್ಮಾಣ ಮಾಡಿಲ್ಲ. ನಾಯಿಗಳನ್ನು ಸೆರೆಹಿಡಿಯುವಾಗ ಅವಳಿಗೆ ಗಾಯ ಮಾಡುವ ಸಿಬ್ಬಂದಿ ಕನಿಷ್ಠ ಚಿಕಿತ್ಸೆಯನ್ನೂ ಕೊಡಿಸದೇ ಹಾಗೆಯೇ ಬಿಡುತ್ತಾರೆ. ಶ್ವಾನಗಳ ನಿರ್ವಹಣೆಗೆ ವರ್ಷಕ್ಕೆ 8 ಕೋಟಿಗೂ ಅಧಿಕ ಹಣ ವ್ಯಯಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ಜಿಬಿಎ ಲೆಕ್ಕ ಕೊಡ್ತಿದೆ. ಆದರೆ ಇದು ಹಣ ಮಾಡಲು ಜಿಬಿಎ ಅಧಿಕಾರಿಗಳು ಮಾಡಿರುವ ಷಡ್ಯಂತ್ರ ಎಂದು ಕಿಡಿಕಾರಿದೆ

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories