ರಾಜ್ಯದಾದ್ಯಂತ ಮೈಕೊರೆಯುವ ಚಳಿಗೆ ರಾಜ್ಯದ ಜನತೆ ನಡುಗಿ ಹೋಗಿದ್ದಾರೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸೀಮಿತವಾಗಿದ್ದ ತೀವ್ರ ಚಳಿಯ ಪ್ರಮಾಣ ಇದೀಗ ದಕ್ಷಿಣ ಒಳನಾಡಿಗೂ ಎಂಟ್ರಿ ನೀಡಿದೆ. ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ರಾಜ್ಯದ ಕೆಲವು ಜಿಲ್ಲೆಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಾದ ಧಾರವಾಡ, ಬೀದರ್, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆಯಂತಹ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಮೈಕೊರೆಯುವ ಚಳಿಯು ಜನರನ್ನು ನಡುಗಿಸಿದೆ. ಹಾಸನ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಯೂ ಆರೆಂಜ್ ಅಲರ್ಟ್ ನೀಡಲಾಗಿದೆ.ಸಂಪೂರ್ಣ ರಾಜ್ಯದಲ್ಲಿ ಬೀದರ್ನಲ್ಲಿ ಅತೀ ಕಡಿಮೆ ಎಂದರೆ 9.2 ಡಿಗ್ರಿಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಈ ವಾರ ಪೂರ್ತಿ ಚಿಲ್ ವೆದರ್, ಜನರಿಗೆ ಎಚ್ಚರಿಕೆ!
ಇನ್ನು ಕರಾವಳಿ ಜಿಲ್ಲೆಗಳಲ್ಲಿಯೂ ಚಳಿ ಮುಂದುವರಿದಿದೆ. ಬೆಳಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಚಳಿ ಜೊತೆಯಲ್ಲಿ ದಟ್ಟ ಮಂಜು ಆವರಿಸುತ್ತಿದೆ. ದಕ್ಷಿಣ ಕನ್ನಡ , ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಚಳಿ ಮತ್ತು ಒಣಹವೆ ಇರಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ .
ತೀವ್ರ ಚಳಿಯ ವಾತಾವರಣದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು ಮುಂಜಾನೆ ಬೇಗನೇ ವಾಕಿಂಗ್ ಹೋಗುವುದನ್ನು ಕಡಿಮೆ ಮಾಡುವಂತೆ ಸೂಚನೆ ನೀಡಲಾಗಿದೆ. ಮೈಕೊರೆಯುವ ಚಳಿಯಲ್ಲಿ ಹೃದಯಾಘಾತದ ಅಪಾಯ ಹೆಚ್ಚಿರುವುದರಿಂದ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.



